ಬೆಂಗಳೂರು: ಕೃಷಿ ಕ್ಷೇತ್ರದ ಪ್ರಮುಖ ಸವಾಲುಗಳಿಗೆ ವಿನೂತನ ಪರಿಹಾರಗಳನ್ನು ಕಂಡುಹಿಡಿಯುವ ನವೋದ್ಯಮಗಳನ್ನು ಉತ್ತೇಜಿಸಲು ಸಿ–ಕ್ಯಾಂಪ್ ಸಂಸ್ಥೆಯು ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ವಿಜೇತವಾದ ನವೋದ್ಯಮಕ್ಕೆ ₹25 ಲಕ್ಷದವರೆಗೆ ಅನುದಾನ ಒದಗಿಸಲಾಗುತ್ತದೆ.
ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧೆಯ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ‘ನವೋದ್ಯಮಿಗಳನ್ನು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ತೇಜಿಸುವ ಮೂಲಕ ಕೃಷಿ ವಲಯದಲ್ಲಿ ಆರ್ಥಿಕವಾಗಿ ಕಾರ್ಯಸಾಧುವಾದ, ಪರಿಹಾರ ಕೇಂದ್ರಿತ, ಅತ್ಯಾಧುನಿಕ ವಿಜ್ಞಾನ–ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲಾಗುತ್ತದೆ’ ಎಂದರು.
ಇದೇ ಸಂದರ್ಭದಲ್ಲಿ, ಭಾರತ–ಇಸ್ರೇಲ್ ನಡುವೆ ಒಪ್ಪಂದ ಏರ್ಪಟ್ಟಿತು. ಉಭಯ ದೇಶಗಳ ಜೀವವಿಜ್ಞಾನ ಮತ್ತು ಕೃಷಿ ತಾಂತ್ರಿಕತೆ ಕ್ಷೇತ್ರದ ನವೋದ್ಯಮಗಳ ನಡುವೆ ಸಹಭಾಗಿತ್ವ ಹೆಚ್ಚಿಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ.
ದಕ್ಷಿಣ ಭಾರತದ ಇಸ್ರೇಲ್ ಕಾನ್ಸುಲ್ ಜನರಲ್ ಡಾ.ಜೊನಾಥನ್ ಜಡ್ಕಾ, ‘ಈ ಒಪ್ಪಂದದಿಂದಾಗಿ ಎರಡೂ ದೇಶಗಳ ನವೋದ್ಯಮಗಳ ನಡುವೆ ಸಹಕಾರ ಹೆಚ್ಚಾಗಲಿದೆ. ಉಭಯ ದೇಶಗಳ ಪರಿಣತ ವಲಯಗಳನ್ನು ಒಂದೇ ವೇದಿಕೆಯಡಿ ತಂದು ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಭಾಗಿತ್ವದ ಅಭಿವೃದ್ಧಿಗೆ ಪೂರಕವಾದ ವಾತಾವರಣ ರೂಪಿಸುತ್ತದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.