ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿಗೆ ವಿರೋಧ

Last Updated 28 ಡಿಸೆಂಬರ್ 2019, 22:10 IST
ಅಕ್ಷರ ಗಾತ್ರ

ಬೆಂಗಳೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಬೇಕು. ಕೋಪಕ್ಕಿಂತ ಹೆಚ್ಚಾಗಿ ಧೈರ್ಯಕ್ಕೆ ಒತ್ತು ಕೊಡಬೇಕು’ ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಶನಿವಾರ ಹೇಳಿದರು.

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿ ಎಸ್‌ಓ) ಏರ್ಪಡಿಸಿದ್ದ ಎನ್‌ಆರ್‌ಸಿ ಮತ್ತು ಸಿಎಎ ವಿರೋಧಿ ಸಮಾವೇಶದಲ್ಲಿ ಅವರು, ‘ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಇನ್ನೂ ಸಾವಿರ ವರ್ಷಗಳಾದರೂ ಅದು ಈಡೇರದು’ ಎಂದರು.

‘ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ. ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಲಾಗುತ್ತಿದೆ. ಆದರೆ, ಧರ್ಮ ತಾರತಮ್ಯ ತೋರುವ ಕಾಯ್ದೆ ಸಂವಿಧಾನಕ್ಕೆ ವಿರುದ್ಧ. ಅದನ್ನು ವಿರೋಧಿಸಲೇಬೇಕು’ ಎಂದರು.

ಹಿರಿಯ ವಕೀಲ ರವಿವರ್ಮ ಕುಮಾರ್, ‘ಸಿಎಎ ಮುಂದಿನ ದಿನಗಳಲ್ಲಿ ಬಹುದೊಡ್ಡ ಗಂಡಾಂತರ ಸೃಷ್ಟಿಸಲಿದೆ. ಸಾರ್ವಜನಿಕ ಚರ್ಚೆಗಳಿಲ್ಲದೆ ಕಾಯ್ದೆಅನುಮೋದಿಸಿದ್ದು, ಸಂವಿಧಾನಕ್ಕೆ ಮಾಡಿದ ದೊಡ್ಡ ಅಪಮಾನ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ ಸೇರಿದಂತೆ ಎಲ್ಲರೂ ಸಂವಿಧಾನದ ಶಿಶುಗಳು. ಇದನ್ನು ಅವರು ಅರ್ಥಮಾಡಿಕೊಳ್ಳಬೇಕು. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಈ ಕಾಯ್ದೆಯಿಂದಾಗಿ ಕುವೈತ್‌, ದುಬೈ, ಸೌದಿ ಅರೇಬಿಯಾದಲ್ಲಿರುವ ಬಹುಸಂಖ್ಯಾತ ಹಿಂದೂಗಳಿಗೆ ಸಮಸ್ಯೆ ಆಗಲಿದೆ ಎಂದರು.

ಎಸ್‌ಯುಸಿಐ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಉಮಾ, ‘ಧರ್ಮ ನಿರಪೇಕ್ಷತೆ ಇದ್ದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಇದನ್ನು ಆಳುವವರಿಗೆ ಮನವರಿಕೆ ಮಾಡಿ ಕೊಡುವ ಸಮಯ ಬಂದಿದೆ’ ಎಂದರು.

‘ಕೂಲಿ ಕಾರ್ಮಿಕರಿಂದ ವರ್ಷಕ್ಕೆ ₹6.5 ಲಕ್ಷ ಕೋಟಿ’
ಬರಹಗಾರ ಕೆ.ಸಿ. ರಘು, ‘ನಮ್ಮ ದೇಶದ ಎರಡು ಕೋಟಿ ಕೂಲಿ ಕಾರ್ಮಿಕರು ಕೊಲ್ಲಿ ರಾಷ್ಟ್ರಗಳಲ್ಲಿ ದುಡಿದು ₹6.5 ಲಕ್ಷ ಕೋಟಿ ಭಾರತಕ್ಕೆ ಕಳಿಸುತ್ತಿದ್ದಾರೆ. ಈ ಹಣದಿಂದ ನಮ್ಮ ವಿದೇಶಿ ವಿನಿಮಯ ಕೊರತೆ ನೀಗುತ್ತಿದೆ’ ಎಂದು ಹೇಳಿದರು. ‘ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಗಾನಿಸ್ತಾನದಿಂದ ಬಂದ 31,313 ಮುಸ್ಲಿಮೇತರರಿಗೆ ಪೌರತ್ವ ಕೊಡುತ್ತೇವೆ ಎಂದು ಕಾನೂನು ಮಾಡಿದ್ದೇವೆ. ಭಾರತದ 51 ಸಾವಿರ ಹಿಂದೂಗಳು ಬೇರೆ ದೇಶಗಳಿಗೆ ವೀಸಾ ಇಲ್ಲದೆ ನುಗ್ಗಿ, ಈಗ ಪೌರತ್ವ ಕೊಡಿ ಎಂದು ಬೇಡುತ್ತಿದ್ದಾರೆ’ ಎಂದು ಹೇಳಿದರು. ‘ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ವಿಭಜನೆ ವೇಳೆ ಮತ್ತು ತುರ್ತು ಪರಿಸ್ಥಿತಿ ವೇಳೆ ಇದ್ದ ಸಂದರ್ಭವೇ ಈಗ ದೇಶದಲ್ಲಿ ಎದುರಾಗಿದೆ’ ಎಂದರು.

‘ರಾಜಕೀಯ ಕಾರಣಕ್ಕೇ ಟಿಎಂಸಿ ನಿಯೋಗ ಭೇಟಿ’
ಬೆಂಗಳೂರು
: ‘ಪಶ್ಚಿಮ ಬಂಗಾಳ ಸರ್ಕಾರದ ನಿಯೋಗ ಮಂಗಳೂರಿಗೆ ಭೇಟಿ ನೀಡಿರುವುದರ ಹಿಂದೆ ರಾಜಕೀಯ ಕಾರಣವಿದೆ. ಇಲ್ಲಿರುವವರ ಬಗ್ಗೆ ಟಿಎಂಸಿಗೆ ಪ್ರೀತಿಯೂ ಇಲ್ಲ, ಭಕ್ತಿಯೂ ಇಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

‘ಪ್ರಕರಣದಲ್ಲಿ ಕ್ರಿಮಿನಲ್‍ಗಳು ಭಾಗಿಯಾದರೆ ಯಾವುದೇ ಕಾರಣಕ್ಕೂ ಪರಿಹಾರ ನೀಡಲಾಗದು. ಪರಿಹಾರ ನೀಡಿದರೆ ಅದು ಬಹಳಷ್ಟು ಕೆಟ್ಟ ಪರಿಣಾಮ ಬೀರಲಿದೆ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಪೌರತ್ವ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಈಗಾಗಲೇ ಒಂದು ಸಮುದಾಯಕ್ಕೆ ದೇಶವನ್ನೇ ನೀಡಲಾಗಿದೆ. ಪೌರತ್ವ ವಿರೋಧಕ್ಕೆ ಇದು ಸಕಾಲವಲ್ಲ. ಕಾಂಗ್ರೆಸ್ ಈ ವಿಚಾರದಲ್ಲಿ ದೇಶಘಾತುಕ ಕೆಲಸಕ್ಕೆ ಕೈ ಜೋಡಿಸಿದೆ’ ಎಂದು ದೂರಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ: ಪ್ರಧಾನಿಗೆ ಚಿ.ಮೂ. ಅಭಿನಂದನಾ ಪತ್ರ
ಬೆಂಗಳೂರು:
ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅಭಿನಂದನಾ ಪತ್ರ ಬರೆದಿದ್ದಾರೆ.

‘ಕಾಯ್ದೆಯು ಮುಸ್ಲಿಮರವಿರೋಧಿಯಲ್ಲ. ಭಾರತೀಯತ್ವದ, ಭಾರತೀಯ ಸಂಸ್ಕೃತಿಯ, ದೇಶಪ್ರೇಮಿಗಳ ಪರವಾದ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ದಿಟ್ಟ ಕ್ರಮ ತೆಗೆದುಕೊಂಡಿದ್ದೀರಿ’ ಎಂದು ಅವರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT