ಭಾನುವಾರ, ಸೆಪ್ಟೆಂಬರ್ 20, 2020
21 °C
ಅಂಗವಿಕಲ ವೈದ್ಯೆಗೆ ಗಾಲಿ ಕುರ್ಚಿ ವ್ಯತ್ಯಯ: ಮೇಲ್ಮನವಿ ವಿಚಾರಣೆ

ಏರ್‌ ಇಂಡಿಯಾಗೆ 10 ಲಕ್ಷ ಠೇವಣಿ ಇರಿಸಲು ಹೈಕೋರ್ಟ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಅಂಗವಿಕಲ ವೈದ್ಯೆ ಹಾಗೂ ಆಕೆಯ ತಾಯಿ ಯುರೋಪ್ ಪ್ರವಾಸದ ವೇಳೆ ಗಾಲಿ ಕುರ್ಚಿ ಸಿಗದೆ ಯಾತನೆ ಅನುಭವಿಸಬೇಕಾದ ಪರಿಣಾಮ ಏರ್ ಇಂಡಿಯಾ ವಿಮಾನ ಸಂಸ್ಥೆಗೆ ₹ 20 ಲಕ್ಷ ದಂಡ ವಿಧಿಸಿದ್ದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ.

ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಏರ್ ಇಂಡಿಯಾ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕಂಪನಿ ಪರ ವಕೀಲರು, ‘ಸೇವೆ ಒದಗಿಸುವಲ್ಲಿ ವಿಮಾನ ಯಾನ ಕಂಪನಿಯ ತಪ್ಪಿಲ್ಲ. ಟ್ರಾವೆಲ್ ಎಜೆಂಟರ ತಪ್ಪಿನಿಂದ ಪ್ರಮಾದವಾಗಿದೆ. ಈಗಾಗಲೇ ಕಂಪನಿ ₹ 5 ಲಕ್ಷ ಮೊತ್ತವನ್ನು ರಿಜಿಸ್ಟ್ರಾರ್ ಬಳಿ ಠೇವಣಿ ಇರಿಸಿದೆ. ಆದ್ದರಿಂದ ದಂಡದ ಮೊತ್ತದ ಬಗ್ಗೆ ಮರು ಪರಿಶೀಲನೆ ಮಾಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ‘₹ 10 ಲಕ್ಷ ಮೊತ್ತವನ್ನು ಜನವರಿ 2ರೊಳಗೆ ಹೈಕೋರ್ಟ್‌ ರಿಜಿಸ್ಟ್ರಾರ್ ಅವರಲ್ಲಿ ಠೇವಣಿ ಇರಿಸಬೇಕು’ ಎಂಬ ಷರತ್ತು ವಿಧಿಸಿ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ಅರ್ಜಿದಾರರಾದ ಡಾ.ಎಸ್.ಜೆ.ರಾಜಲಕ್ಷ್ಮಿ ಹಾಗೂ ಅವರ ತಾಯಿ ಡಾ.ಕೆ.ಶೋಭಾ ಬೆಂಗಳೂರಿನ ಗಿರಿನಗರದ ವೈದ್ಯರು. 2016ರ ಜುಲೈ 25 ರಿಂದ ಆಗಸ್ಟ್ 8ರವರೆಗೆ ಯುರೋಪ್ ಪ್ರವಾಸ ಕೈಗೊಂಡಿದ್ದರು. ‘ಲಂಡನ್‌ಗೆ ತೆರಳಿದಾಗ ವಿಮಾನ ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಗಾಲಿ ಕುರ್ಚಿ ಸಿಗದೆ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ’ ಎಂದು ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

‘ಪ್ರಯಾಣದ ವೇಳೆ ಉಂಟಾದ ಕಷ್ಟದಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದು, ಬೆಂಗಳೂರಿಗೆ ಹಿಂದಿರುಗಿದ ಬಳಿಕ 6 ತಿಂಗಳು ಚಿಕಿತ್ಸೆ ಪಡೆಯಬೇಕಾಯಿತು. ಆದ್ದರಿಂದ, ಪ್ರವಾಸಕ್ಕೂ ಮುನ್ನ ಪಾವತಿಸಿದ್ದ ₹ 5.7 ಲಕ್ಷ ಹಿಂದಿರುಗಿಸಲು ಹಾಗೂ 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ದದಕ್ಕೆ ₹ 15 ಲಕ್ಷ ಪರಿಹಾರ ಬೇಕು. ನಮಗೆ ಟಿಕೆಟ್ ಕಾಯ್ದಿರಿಸಿದ್ದ ಟ್ರಾವೆಲ್ಸ್‌ ಏಜೆಂಟ್ ಹಾಗೂ ಏರ್ ಇಂಡಿಯಾ ಸಂಸ್ಥೆಗಳು ವೈದ್ಯಕೀಯ ವೆಚ್ಚ ಭರಿಸಲು ನಿರ್ದೇಶಿಸಬೇಕು’ ಎಂದು ಅವರು ಕೋರಿದ್ದರು.

ಈ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿತ್ತು. ‘ಏರ್ ಇಂಡಿಯಾ ಸಂಸ್ಥೆಯು, ಅರ್ಜಿದಾರರಿಗೆ 8 ವಾರಗಳಲ್ಲಿ ದಂಡದ ರೂಪದಲ್ಲಿ ತಲಾ ₹ 10 ಲಕ್ಷ ಪರಿಹಾರ ನೀಡಬೇಕು’ ಎಂದು ಆದೇಶಿಸಿತ್ತು.

ಅರ್ಜಿದಾರರಿಬ್ಬರೂ ಸುಮಿತ್ರಾ ಇಜಿ ಡ್ರೈವ್ ಮತ್ತು ಟ್ರಾವೆಲ್ಸ್‌ನಲ್ಲಿ 16 ದಿನಗಳ ಪ್ರವಾಸ ಬುಕ್ ಮಾಡಿದ್ದರು. ಬೆಂಗಳೂರಿನಿಂದ ಲಂಡನ್‌ಗೆ ಹೋಗಲು ಮತ್ತು ಲಂಡನ್‌ನಿಂದ ಬೆಂಗಳೂರಿಗೆ ಬರಲು ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು, ಆಗ ಗಾಲಿ ಕುರ್ಚಿ ಆಯ್ಕೆಯನ್ನೂ ಪಡೆದಿದ್ದರು. ಆದರೆ, ಲಂಡನ್‌ ವಿಮಾನ ನಿಲ್ದಾಣದಲ್ಲಿ ಗಾಲಿ ಕುರ್ಚಿ ಸಿಗದೆ ತೊಂದರೆ ಅನುಭವಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು