ಅಜಿತಾಬ್ ನಾಪತ್ತೆ ಪ್ರಕರಣ : ಸಿಬಿಐ ತನಿಖೆಯ ಮೊರೆ

7

ಅಜಿತಾಬ್ ನಾಪತ್ತೆ ಪ್ರಕರಣ : ಸಿಬಿಐ ತನಿಖೆಯ ಮೊರೆ

Published:
Updated:

ಬೆಂಗಳೂರು: ಟೆಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ಮು ಸಿಬಿಐಗೆ ಒಪ್ಪಿಸಬೇಕೋ ಬೇಡವೋ ಎಂಬ ಬಗ್ಗೆ ಹೈಕೋರ್ಟ್ ಗುರುವಾರ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಈ ಕುರಿತಂತೆ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ವಿವರ ಸಲ್ಲಿಸಿದರು.

"ಘಟನೆ ನಡೆದು ಎಂಟು ತಿಂಗಳಾದರೂ ಅಜಿತಾಬ್ ಆಗಲಿ ಅಥವಾ ಅವರು ಮಾರಾಟ ಮಾಡಲು ಹೋಗಿದ್ದ ಕಾರ್ ಆಗಲಿ, ಇಲ್ಲವೇ ನಾಪತ್ತೆಯಾಗಿರುವ ಕುರಿತಂತೆ ಸ್ವಲ್ಪವೂ ಸುಳಿವು ಸಿಕ್ಕಿಲ್ಲ. ಪೊಲೀಸರು ತಮ್ಮ ಶ್ರಮವನ್ನೇನೋ ಹಾಕಿ ಹುಡುಕಾಟ ನಡೆಸಿದ್ದಾರೆ. ಆದರೆ, ಯಶಸ್ಸು ಸಿಕ್ಕಿಲ್ಲ ಎಂದರು.

" ಅಜಿತಾಬ್‌ ಅವರ ಕುಟುಂಬದವರ ದುಃಖ ಹೇಳತೀರದಂತಾಗಿದೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ವಹಿಸುವುದೇ ಸೂಕ್ತ" ಎಂದು ಪರ ವಕೀಲರು ಪ್ರತಿಪಾದಿಸಿದರು.

ಪ್ರತಿವಾದಿಗಳಾದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರನ್ನು, "ನೀವು ಹೇಗೆ ಪತ್ತೆ ಹಚ್ಚಬಲ್ಲಿರಿ" ಎಂದು ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್, "ಸಿಬಿಐ ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ತನಿಖಾ ಸಂಸ್ಥೆಯಾಗಿದೆ" ಎಂದು ತಿಳಿಸಿದರಲ್ಲದೆ, ಸಿಬಿಐ ನಿರ್ವಹಿಸಿರುವ ಕೆಲವು ಪ್ರಕರಣಗಳನ್ನು ನ್ಯಾಯಪೀಠಕ್ಕೆ ಉದಾಹರಿಸಿದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ವಿ. ಶ್ರೀನಿಧಿ, "ಪೊಲೀಸರ ತನಿಖೆ ಸಮರ್ಪಕವಾಗಿಯೇ ಇದೆ" ಎಂದು ಸಮರ್ಥಿಸಿಕೊಂಡರು. ಅಂತೆಯೇ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯ ವಿವರವನ್ನೂ ನ್ಯಾಯಪೀಠಕ್ಕೆ ಸಲ್ಲಿಸಿದರು.

"ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಕೆಲವು ಪ್ರಮುಖ ಅಂಶಗಳನ್ನು ನ್ಯಾಯಪೀಠಕ್ಕೆ ವಿವರಿಸಬೇಕಿದೆ. ಸದ್ಯ ಅವರು ಬೇರೊಂದು ಪ್ರಕರಣದಲ್ಲಿ ಕಾರ್ಯನಿರತರಾಗಿದ್ದು ಒಂದು ದಿನದ ಮಟ್ಟಿಗೆ ಕಾಲಾವಕಾಶ ನೀಡಬೇಕು" ಎಂದು ಮನವಿ ಮಾಡಿದರು.

ಇದನ್ನು ಮನ್ನಿಸಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರಕ್ಕೆ (ಆ.‌6ಕ್ಕೆ) ಮುಂದೂಡಿತು.

ಪ್ರಕರಣವೇನು?:
ಕುಮಾರ್ ಅಜಿತಾಬ್ 2017ರ ಡಿಸೆಂಬರ್ 18ರ‌ ಸಂಜೆ 6.30ಕ್ಕೆ ತಮ್ಮ ಮನೆಯಿಂದ ಹೊರ ಹೋದವರು ಈವರೆಗೂ ಪತ್ತೆಯಾಗಿಲ್ಲ. 

ಈ ಬಗ್ಗೆ ಅಜಿತಾಬ್ ತಂದೆ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಡಿಸೆಂಬರ್ 20 ಹಾಗೂ 29ರಂದು ಎರಡು ಎಫ್‌ಐಆರ್ ದಾಖಲಿಸಿದ್ದಾರೆ. 

"ಅಜಿತಾಬ್  ಪತ್ತೆ ಮಾಡುವಲ್ಲಿ ಪೊಲೀಸರು ಯಾವುದೇ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು" ಎಂದು ಕೋರಿ ಅಶೋಕ್ ಕುಮಾರ್ ಸಿನ್ಹಾ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !