ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಂಭ್ರಮ ಸಮಾರಂಭ| ಮಹಿಳಾ ಸ್ವಾಭಿಮಾನದ ಸಂಕೇತ ಅಕ್ಕಮಹಾದೇವಿ: ಸೋಮಶೇಖರ್ ಬಣ್ಣನೆ

Published 27 ಏಪ್ರಿಲ್ 2024, 16:08 IST
Last Updated 27 ಏಪ್ರಿಲ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ಹನ್ನೆರಡನೆ ಶತಮಾನದ ಶರಣ ಚಳವಳಿಯಲ್ಲಿ ಗುರುತಿಸಿಕೊಂಡ ಅಕ್ಕಮಹಾದೇವಿ ಅವರು ಮಹಿಳಾ ಸ್ವಾಭಿಮಾನದ ಸಂಕೇತವಾಗಿ ಕಾಣುತ್ತಾರೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಬಣ್ಣಿಸಿದರು. 

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ಅಕ್ಕಮಹಾದೇವಿ ಜಯಂತಿ, ವಚನ ಸಂಭ್ರಮ ಸಮಾರಂಭ ಉದ್ಘಾಟಿಸಿ, ಇತ್ತೀಚೆಗೆ ‘ಜಾಗತಿಕ ಸಾಹಿತ್ಯ ಪ್ರಶಸ್ತಿ’ ಪಡೆದ ಕವಯತ್ರಿ ಮಮತಾ ಸಾಗರ್ ಅವರನ್ನು ಅಭಿನಂದಿಸಿದರು. 

ಈ ವೇಳೆ ಮಾತನಾಡಿದ ಅವರು, ‘ಹನ್ನೆರಡನೆ ಶತಮಾನದ ಕಾಲಘಟ್ಟವು ಸವಾಲು, ಸಂಕಷ್ಟದಿಂದ ಕೂಡಿತ್ತು. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ, ಮೂಢನಂಬಿಕೆ ತಾಂಡವವಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ವಿಶಿಷ್ಟ ಕ್ರಾಂತಿ ಮಾಡಿದರು. ಇಡೀ ಮಹಿಳಾ ಸಮಾಜದ ಸಂವೇದನೆಯ ಸಂಕೇತವಾಗಿ ಅಕ್ಕಮಹಾದೇವಿ ಕಾಣಿಸಿಕೊಂಡರು. ಅವರ ವಚನಗಳಲ್ಲಿ ಕಾವ್ಯ ರಮಣಿಯತೆಯನ್ನು ಕಾಣಬಹುದಾಗಿದೆ’ ಎಂದು ಹೇಳಿದರು. 

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘ಯಾರಲ್ಲಿ ಒಳ್ಳೆಯ ಕವಿತೆ, ಕಾವ್ಯದ ಗುಣ ಇರುತ್ತದೆಯೋ ಅವರು ಮಾತ್ರ ಉಳಿಯುತ್ತಾರೆ. ಹಾಗೆ ಉಳಿದವರಲ್ಲಿ ಅಕ್ಕಮಹಾದೇವಿ ಪ್ರಮುಖರು. ಅವರು ಸತ್ವಯುತವಾಗಿ ಬರೆದಿದ್ದರಿಂದ ಕಾಲ, ದೇಶವನ್ನು ಮೀರಿದ್ದಾರೆ. ಕಾವ್ಯಮೀಮಾಂಸೆ ಇಲ್ಲದ ಸಂದರ್ಭದಲ್ಲಿ ಬಸವಾದಿ ಶರಣರು ವಚನ ರಚಿಸಿ, ಹಾಡಿದರು. ಇತ್ತೀಚೆಗೆ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುತ್ತೇವೆ. ಆದರೆ, ಹನ್ನೆರಡನೆ ಶತಮಾನದಲ್ಲಿ ಯಾವುದೇ ಕಾವ್ಯ ಗುರುವನ್ನೂ ಹೊಂದದೆ ಉತ್ಕೃಷ್ಟ ಸಾಹಿತ್ಯ ಸೃಷ್ಟಿಸಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ‘ಅಕ್ಕಮಹಾದೇವಿ ಅವರು ಜಗತ್ತಿನ ಪ್ರಥಮ ಪ್ರಗತಿಪರ ಕವಯಿತ್ರಿ. ಪುರುಷ ಕವಿಗಳಿಗಿಂತ ಮಹಿಳಾ ಕವಿಗಳು ಹೆಚ್ಚು ಪ್ರಗತಿಪರರಾಗಿದ್ದಾರೆ. ಕವಯಿತ್ರಿ ಮಮತಾ ಸಾಗರ್ ಅವರು ಕನ್ನಡ ಕಾವ್ಯದ ದೊಡ್ಡ ಆಸ್ತಿ’ ಎಂದು ಹೇಳಿದರು. 

ಇದೇ ವೇಳೆ ವಚನ ಗಾಯನ, ವಚನ ವಾಚನ ಹಾಗೂ ವಚನ ನೃತ್ಯ ನಡೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT