ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಫಲಕ ತೆರವು: ಬಿಎಸ್‌ಪಿ ಕಾಲ್ನಡಿಗೆ ಜಾಥಾ

Last Updated 11 ಏಪ್ರಿಲ್ 2022, 16:49 IST
ಅಕ್ಷರ ಗಾತ್ರ

ಬೆಂಗಳೂರು: ‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾನ್ಶಿರಾಮ್ ನಗರದಲ್ಲಿ ಅಳವಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕಾನ್ಶಿರಾಮ್ ಅವರ 9 ಫಲಕಗಳನ್ನು ನಿಯಮಬಾಹಿರವಾಗಿ ತೆರವು ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಕಾಲ್ನಡಿಗೆ ಜಾಥಾ ನಡೆಸಿದರು.

ಎಂ.ಎಸ್.ಪಾಳ್ಯದಿಂದ ಲಕ್ಷ್ಮಿಪುರ ವೃತ್ತದವರೆಗೆ ಜಾಥಾ ಸಾಗಿತು. ಕಾನ್ಶಿರಾಮ್ ನಗರ, ಲಕ್ಷ್ಮಿಪುರ, ವಡೇರಹಳ್ಳಿ, ಗುಣಿ ಅಗ್ರಹಾರ, ವಿಶ್ವನಾಥ್ ನಗರ, ಬೆಸ್ಟ್ ಕೌಂಟಿ ಹಾಗೂ ಸುತ್ತಮುತ್ತ ಪ್ರದೇಶಗಳ ನಿವಾಸಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

‘ಫಲಕ ತೆರವು ಮಾಡಿದವರನ್ನು ಗಡಿಪಾರು ಮಾಡಿ’, ‘ಮೂಲ ಸೌಕರ್ಯ ಕಲ್ಪಿಸಿ’ ಸೇರಿದಂತೆ ಹಲವು ಘೋಷಣಾ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.

‘ಕಾನ್ಶಿರಾಮ್ ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಯಲಹಂಕ ಶಾಸಕ ಎಸ್‌.ಆರ್. ವಿಶ್ವನಾಥ್, ವಡೇರಹಳ್ಳಿ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯ, ಪಿಡಿಒ ಹಾಗೂ ಇತರರು ಸೇರಿಕೊಂಡು ಫಲಕ ತೆರವು ಮಾಡಿದ್ದಾರೆ. ಅದೇ ಜಾಗವನ್ನು ಅಕ್ರಮವಾಗಿ ಬೇರೆ ಫಲಕಗಳನ್ನು ನಿಲ್ಲಿಸಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

ಮೂಲ ಸೌಕರ್ಯ ಕಲ್ಪಿಸಲು ಆಗ್ರಹ: ‘ಕಾನ್ಶಿರಾಮ್ ನಗರ, ಲಕ್ಷ್ಮಿಪುರ, ವಡೇರಹಳ್ಳಿ, ಗುಣಿ ಅಗ್ರಹಾರ, ವಿಶ್ವನಾಥ್ ನಗರ, ಬೆಸ್ಟ್ ಕೌಂಟಿ ಪ್ರದೇಶಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ರಸ್ತೆ ಡಾಂಬರೀಕರಣ ಹಾಗೂ ಬೀದಿ ದೀಪ ವ್ಯವಸ್ಥೆ ಮಾಡಬೇಕು. ಕಾವೇರಿ ಕುಡಿಯುವ ನೀರಿನ ಸಂಪರ್ಕ ನೀಡಬೇಕು. ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು’ ಎಂದೂ ಆಗ್ರಹಿಸಿದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT