ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯದ ಅಮಲಿನಲ್ಲಿದ್ದ ಪುಂಡರಿಂದ ಆಂಬುಲೆನ್ಸ್‌ ಚಾಲಕನ ಮೇಲೆ ಹಲ್ಲೆ: ಮೂವರ ಬಂಧನ

Published 10 ಜೂನ್ 2024, 15:45 IST
Last Updated 10 ಜೂನ್ 2024, 15:45 IST
ಅಕ್ಷರ ಗಾತ್ರ

ನೆಲಮಂಗಲ: ಪಟ್ಟಣದ ಜಾಸ್‌ಟೋಲ್‌ ಬಳಿ ಆಂಬುಲೆನ್ಸ್‌ವೊಂದನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಆರೋಪ ಸಂಬಂಧ ಮೂವರು ಆರೋಪಿಗಳನ್ನು ನೆಲಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಚೇನಹಳ್ಳಿಯ ಯುವರಾಜ್‌ ಸಿಂಗ್‌, ಮಂಜುನಾಥ್‌, ಲತೀಶ್‌ ಬಂಧಿತ ಆರೋಪಿಗಳು. ಮತ್ತೊಬ್ಬ ತಲೆಮರೆಸಿಕೊಂಡಿದ್ಧಾನೆ ಎಂದು ಮೂಲಗಳು ತಿಳಿಸಿವೆ.

‘ತುಮಕೂರು ಆಸ್ಪತ್ರೆಯಿಂದ ಬೆಂಗಳೂರಿನ ವಾಣಿವಿಲಾಸ್‌ ಆಸ್ಪತೆಗೆ ಭಾನುವಾರ ಸಂಜೆ ಐದು ತಿಂಗಳ ಮಗುವನ್ನು ತುರ್ತು ಚಿಕಿತ್ಸೆಗೆ ಆಮ್ಲಜನಕದ ನೆರವಿನೊಂದಿಗೆ ಕರೆತರಲಾಗುತ್ತಿತ್ತು. ಹೆದ್ದಾರಿಯಲ್ಲಿ ಆಂಬುಲೆನ್ಸ್ ವೇಗವಾಗಿ ಬರುತ್ತಿತ್ತು. ಅದೇ ಮಾರ್ಗದಲ್ಲಿ ಕಾರು ಸಹ ಬರುತ್ತಿತ್ತು. ಮಾರ್ಗ ಮಧ್ಯದಲ್ಲಿ ಕಾರನ್ನು ಆಂಬುಲೆನ್ಸ್‌ ಹಿಂದಿಕ್ಕಿದ್ದರಿಂದ ಕುಪಿತರಾದ ಕಾರಿನಲ್ಲಿದ್ದ ಆರೋಪಿಗಳು, ಆರು ಕಿ.ಮೀ ದೂರದಿಂದಲೂ ಆಂಬುಲೆನ್ಸ್‌ ಅನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಜಾಸ್‌ಟೋಲ್‌ ಬಳಿ ಆಂಬುಲೆನ್ಸ್‌ ನಿಲ್ಲಿಸಿದ್ದರಿಂದ ಅಡ್ಡಗಟ್ಟಿ ವೇಗವಾಗಿ ಓಡಿಸುತ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಹಲ್ಲೆ ನಡೆಸಿ ಆಂಬುಲೆನ್ಸ್‌ ಕೀ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆಂಬುಲೆನ್ಸ್ ಚಾಲಕ ಜಾನ್‌ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಮಗುವಿನ ಪೋಷಕರು ಎಷ್ಟು ಮನವಿ ಮಾಡಿದರೂ ಬಿಡಲಿಲ್ಲ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಟೋಲ್‌ನಲ್ಲಿದ್ದ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ನೆಲಮಂಗಲ ಠಾಣೆ ಪೊಲೀಸರು, ಮೊದಲು ಆಂಬುಲೆನ್ಸ್ ಅನ್ನು ಮುಂದಕ್ಕೆ ಕಳುಹಿಸಿದ್ದರು. ನಂತರ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು’ ಎಂದು ಮೂಲಗಳು ಹೇಳಿವೆ.

‘ಹಲ್ಲೆ ನಡೆಸಿದ ಯುವಕರು ಮದ್ಯದ ಅಮಲಿನಲ್ಲಿ ಇದ್ದರು ಎಂದು ಆಂಬುಲೆನ್ಸ್‌ ಚಾಲಕ ತಿಳಿಸಿದ್ದಾರೆ. ಅವರು ನೀಡಿದ ದೂರು ಆಧರಿಸಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಂಡಕಂಡಲ್ಲಿ ಪುಂಡರ ಅಟ್ಟಹಾಸ, ಸುಲಿಗೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆಗಳಲ್ಲಿ ಹಗಲಲ್ಲೇ ಕುಡಿದ ಮತ್ತಿನಲ್ಲಿ ವಾಹನ ಓಡಿಸಿದರೂ ಪೊಲೀಸರು ಅಡ್ಡಗಟ್ಟುವುದಿಲ್ಲ. ಆಂಬುಲೆನ್ಸ್‌ನ್ನೇ ತಡೆಗಟ್ಟಿ ಚಾಲಕನಿಗೆ ಥಳಿಸಿ ಪುಂಡರು ಅಟ್ಟಹಾಸ ಮೆರೆಯುತ್ತಿರುವುದು ಅರಾಜಕತೆ ಹೇಗೆ ತಾಂಡವವಾಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿಕೆ ಕೊಡುವುದಕ್ಕೆ ಸೀಮಿತವಾಗಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮ  ‘ಎಕ್ಸ್‌’ನಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಯುವರಾಜ್‌ ಸಿಂಗ್‌
ಯುವರಾಜ್‌ ಸಿಂಗ್‌
ಮಂಜುನಾಥ್‌
ಮಂಜುನಾಥ್‌
ಲತೀಶ್‌
ಲತೀಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT