ಹಣ ನೀಡದಿದ್ದಕ್ಕೆ ಪತ್ನಿಗೆ ಚಾಕು ಇರಿತ
ಬೆಂಗಳೂರು: ಮದ್ಯ ಖರೀದಿಸಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಜಯಶ್ರೀ (33) ಎಂಬುವವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ನಾಗರಾಜ್ ಅವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ಕಲಬುರಗಿಯ ನಾಗರಾಜ್ ಹಾಗೂ ಜಯಶ್ರೀ, ಇಬ್ಬರು ಮಕ್ಕಳ ಜೊತೆ ಕೆಲ ವರ್ಷಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಜಕ್ಕೂರಿನಲ್ಲಿ ವಾಸವಿದ್ದರು. ನಾಗರಾಜ್, ಕೂಲಿ ಕೆಲಸ ಮಾಡುತ್ತಿದ್ದರು. ಜಯಶ್ರೀ, ಶಾಲೆಯೊಂದರಲ್ಲಿ ಸಹಾಯಕಿ’ ಎಂದು ಪೊಲೀಸರು ಹೇಳಿದರು.
‘ಮದ್ಯವ್ಯಸನಿಯಾಗಿದ್ದ ನಾಗರಾಜ್, ದುಡಿದ ಹಣವನ್ನೆಲ್ಲ ಮದ್ಯಕ್ಕೆ ಖರ್ಚು ಮಾಡುತ್ತಿದ್ದ. ಜಯಶ್ರೀ ಅವರು ತಮ್ಮ ಸಂಬಳದಲ್ಲಿ ಮನೆ ನಡೆಸುತ್ತಿದ್ದರು. ನಿತ್ಯವೂ ಕುಡಿದು ಬರುತ್ತಿದ್ದ ನಾಗರಾಜ್, ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ಮದ್ಯಕ್ಕೆ ಹಣ ನೀಡುವಂತೆ ಪತ್ನಿಯನ್ನು ಪದೇ ಪದೇ ಒತ್ತಾಯಿಸುತ್ತಿದ್ದ’ ಎಂದು ತಿಳಿಸಿದರು.
‘ಭಾನುವಾರವೂ ಪತ್ನಿ ಜಯಶ್ರೀ ಜೊತೆ ಜಗಳ ತೆಗೆದಿದ್ದ ಆರೋಪಿ, ಮದ್ಯ ಖರೀದಿಗೆ ಹಣ ನೀಡುವಂತೆ ಪೀಡಿಸಿದ್ದ. ತಮ್ಮ ಬಳಿ ಹಣವಿಲ್ಲವೆಂದು ಪತ್ನಿ ಹೇಳಿದ್ದರು. ಕೋಪಗೊಂಡಿದ್ದ ಆರೋಪಿ, ಚಾಕುವಿನಿಂದ ಇರಿದಿದ್ದ. ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಜಯಶ್ರೀ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ನಾಗರಾಜ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.