ಭಾನುವಾರ, ಸೆಪ್ಟೆಂಬರ್ 19, 2021
30 °C

ಅನಂತಕುಮಾರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪದ್ಮನಾಭನಗರ ಕ್ಷೇತ್ರದಲ್ಲಿ ₹25 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಂದಾಯ ಸಚಿವ ಮತ್ತು ಕ್ಷೇತ್ರದ ಶಾಸಕ ಆರ್. ಅಶೋಕ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಕರಿಸಂದ್ರ ವಾರ್ಡ್‌ನಲ್ಲಿ ದಿವಂಗತ ಎಚ್.ಎನ್. ಅನಂತಕುಮಾರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ ನೆರವೇರಿಸಲಾಯಿತು. ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ ಅಡಿ ಈ ಆಸ್ಪತ್ರೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ ಇದಾಗಲಿದ್ದು, ಹಲವು ಸಮಸ್ಯೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡುವ ಉದ್ದೇಶವಿದೆ. 15 ಹಾಸಿಗೆಗಳ ಡಯಾಲಿಸಿಸ್ ಕೇಂದ್ರ, 30 ಹಾಸಿಗೆಗಳ ಹೆರಿಗೆ ಕೇಂದ್ರ ಮತ್ತು 30 ಹಾಸಿಗೆಗಳ ಮಕ್ಕಳ ಚಿಕಿತ್ಸಾ ಘಟಕದ ಜೊತೆಗೆ, ಅತೀ ಕಡಿಮೆ ಬೆಲೆಗೆ ಔಷಧಿ ನೀಡುವ ಜನೌಷಧಿ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವು ಕೂಡಾ ಈ ಆಸ್ಪತ್ರೆ ಕಟ್ಟಡದಲ್ಲಿ ತಲೆ ಎತ್ತಲಿದೆ.

‘ಈ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕೆಂಬ ಸದಾಶಯದೊಂದಿಗೆ ಈ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಬಿಜೆಪಿಯ ಜನಪ್ರಿಯ ನಾಯಕರಾಗಿದ್ದ, ಈ ಭಾಗದ ಜನಾನುರಾಗಿ ಸಂಸದರೂ ಆಗಿದ್ದ ಕೇಂದ್ರದ ಅನಂತಕುಮಾರ್ ಅವರ ಹೆಸರಿನಲ್ಲಿ ಆರಂಭವಾಗಲಿರುವ ಆಸ್ಪತ್ರೆಯು ಈ ಭಾಗದ ಜನರ ಪಾಲಿಗೆ ಸಂಜೀವಿನಿಯಾಗಲಿದೆ’ ಎಂದು ಅಶೋಕ ಹೇಳಿದರು.

ವಿವಿಧೋದ್ದೇಶದ ಕಟ್ಟಡ:

ಕ್ಷೇತ್ರದಲ್ಲಿ ವಿವಿಧೋದ್ದೇಶ ಕಟ್ಟಡ ನಿರ್ಮಾಣ ಕಾಮಗಾರಿಗೂ ಆರ್. ಅಶೋಕ ಗುದ್ದಲಿ ಪೂಜೆ ನೆರವೇರಿಸಿದರು. ಈ ಕಟ್ಟಡದಲ್ಲಿ ಬಾಲ ಭವನ, ಇ ಗ್ರಂಥಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಹಾಪ್‌ಕಾಮ್ಸ್ ಮಳಿಗೆ ಇರಲಿವೆ. 

ಇದರ ಜೊತೆಗೆ, ಕ್ಷೇತ್ರದ ಕಾವೇರಿ ವಾರ್ಡ್‌ನಲ್ಲಿ ಎಪಿಜೆ ಅಬ್ದುಲ್ ಕಲಾಂ ಉದ್ಯಾನಕ್ಕೂ ಸಚಿವರು ಭೂಮಿಪೂಜೆ ನೆರವೇರಿಸಿದರು. ಪಕ್ಷದ ಸ್ಥಳೀಯ ಮುಖಂಡರಾದ ಯಶೋದಾ ಲಕ್ಷ್ಮೀಕಾಂತ್‌ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು