ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಶಹಬ್ಬಾಸ್‌ಗಿರಿ ಪಡೆಯಲು ಎನ್‌ಇಪಿ ಜಾರಿ: ಎಐಟಿಯುಸಿ ಆರೋಪ

ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸುವ ಮುನ್ನ ಚರ್ಚೆ ಅಗತ್ಯ
Last Updated 2 ಸೆಪ್ಟೆಂಬರ್ 2022, 20:09 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದ ಶಹಬ್ಬಾಸ್‌ಗಿರಿ ಪಡೆಯಲು ಅಂಗನ ವಾಡಿ ಕೇಂದ್ರಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿಗೊಳಿಸಲು ಮುಂದಾಗಿದೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಆರೋಪಿಸಿದೆ.

‘ಅಕ್ಟೋಬರ್‌–ನವೆಂಬರ್ ತಿಂಗಳಲ್ಲಿ 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಇನ್‌ಇಪಿ ಜಾರಿಗೊಳಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಘೋಷಿಸಿದ್ದಾರೆ. ಈ ಮೂಲಕ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿಸುವ ಸರ್ಕಾರದ ನಿಲುವೇ ಗೊಂದಲದಿಂದ ಕೂಡಿದೆ.

ಇವರಿಗೆ ಯಾವುದೇ ರೀತಿಯ ತರಬೇತಿಯನ್ನು ನೀಡಿಲ್ಲ’ ಎಂದು ಫೆಡರೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಬಿ. ಅಮ್ಜದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘6 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಆರೋಗ್ಯ, ಶಿಕ್ಷಣ, ಮಕ್ಕಳ ಲಾಲನೆ–ಪಾಲನೆ ಮತ್ತು ಕಲಿಕೆಯಂತಹ ಸೇವೆಗಳ ನಿರ್ವ ಹಣೆಗಾಗಿ ಸ್ಥಾಪಿತವಾಗಿರುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್) ಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪ್ತಿಗೆ ಒಳಪಡಿಸಿದರೆ ಇಡೀ ಅಂಗನವಾಡಿ ವ್ಯವಸ್ಥೆಯೇ ದುರ್ಬಲಗೊಳ್ಳುತ್ತದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಶಾಲಾ ಆವರಣಕ್ಕೆ ಸೇರಿಸಿದರೆ ಮಕ್ಕಳ ಬಾಲ್ಯಪೂರ್ವ ಶಿಕ್ಷಣ, ಆರೈಕೆ, ಆಹಾರ ಪೋಷಣೆಯಂತಹ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಉಂಟಾಗುವ ಅಪಾಯವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎನ್‌ಇಪಿಯನ್ನು ದೇಶದ ಯಾವುದೇ ರಾಜ್ಯದಲ್ಲಿ ಜಾರಿಗೊಳಿಸುತ್ತಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಜಾರಿಗೊಳಿಸುವುದರಿಂದ ಐಸಿಡಿಎಸ್‌ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರದಂತೆ ಭಾಸವಾಗುತ್ತಿದೆ. ಶಿಕ್ಷಣ ಸಚಿವರು ಹಾರಿಕೆ ಉತ್ತರಗಳನ್ನು ನೀಡಬಾರದು. ಇಲ್ಲದಿದ್ದರೆ ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಜಯಮ್ಮ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT