ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೂ ವ್ಯಾಪಿಸಿದ ಆಕ್ರೋಶದ ಜ್ವಾಲೆ

ನಿಷೇಧಾಜ್ಞೆ ಉಲ್ಲಂಘಿಸಿ ಬೀದಿಗಿಳಿದ ಪ್ರತಿಭಟನಕಾರರು l ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ
Last Updated 19 ಡಿಸೆಂಬರ್ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದೇಶದ ವಿವಿಧೆಡೆ ಎದ್ದಿರುವ ಆಕ್ರೋಶದ ಜ್ವಾಲೆ, ಗುರುವಾರ ನಗರಕ್ಕೂ ವ್ಯಾಪಿಸಿತು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪುರಭವನ, ಸ್ವಾತಂತ್ರ್ಯ ಉದ್ಯಾನ, ಮೈಸೂರು ಬ್ಯಾಂಕ್ ವೃತ್ತ ಸೇರಿದಂತೆ ವಿವಿಧೆಡೆ ಪ್ರತಿಭಟನಕಾರರು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‌ವಿವಿಧ ಸಂಘಟನೆಗಳು ಬೆಳಗ್ಗಿನಿಂದಲೇ ಪ್ರತಿಭಟನೆಗಿಳಿದವು. ‘ಸಂಜೆ 4 ಗಂಟೆಗೆ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ವಾಪಸು ಪಡೆದಿದ್ದೀವೆ’ ಎಂದು ಘೋಷಿಸಿದ ಪ್ರತಿಭಟನಕಾ
ರರು, ‘ಪ್ರಜಾಸತ್ತಾತ್ಮಕ ಹಕ್ಕು ಕಸಿದುಕೊಳ್ಳುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಮ್ಮ ಹೋರಾಟ ಶುಕ್ರವಾರವೂ ಮುಂದುವರಿಯಲಿದೆ’ ಎಂದು ಘೋಷಿಸಿದರು.

ಪ್ರತಿಭಟನೆಯಿಂದ ಪುರಭವನ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತು. ವಾಟಾಳ್ ನಾಗರಾಜ್‌ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರುವ ಮೊದಲೇ ಹೋರಾಟಗಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅಲ್ಲದೆ, ಸಿಕ್ಕ ಸಿಕ್ಕ ವಾಹನಗಳಲ್ಲಿ ತುಂಬಿ‌ ವಶಕ್ಕೆ ಪಡೆದರು.

ಗುರುವಾರ ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದುದರಿಂದ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆದರೂ, ನೂರಾರು ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಕೆಲವರು ಬಿಎಂಟಿಸಿ ಬಸ್ಸಿಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿ, ಕರಪತ್ರಗಳನ್ನು ಹಂಚಿದರು.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿ ಪರಿಸ್ಥಿತಿ
ನಿಯಂತ್ರಣಕ್ಕೆ ತಂದರು. ಅಲ್ಲದೆ, ಪೊಲೀಸ್ ವಾಹನ, ಬಿಎಂಟಿಸಿ ಬಸ್ ಸಾಕಾಗದೆ, ಸಿಕ್ಕ ಸಿಕ್ಕ ಖಾಸಗಿ ವಾಹನ
ಗಳಲ್ಲಿ ಹೋರಾಟಗಾರರನ್ನು ಸಾಗಿಸಿದರು. ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ, ‘ನಿಷೇಧಾಜ್ಞೆ ವಿಧಿಸಿರುವುದರ ಕುರಿತು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಕಮಿಷನರ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದರು.

ಇತ್ತ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಿಂದಲೂ ಬಂದ ವಿದ್ಯಾರ್ಥಿಗಳ ಗುಂಪು ಪ್ರತಿಭಟನೆಗಿಳಿದಾಗ, ಪೊಲೀಸರು ಮನವೊಲಿಸಲು ಯತ್ನಿಸಿದರು. ಇದ್ಯಾವುದಕ್ಕೂ ಒಪ್ಪದ ವಿದ್ಯಾರ್ಥಿಗಳು ಧರಣಿ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದರು.

ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ‘ಪುರಭವನ, ಮೈಸೂರು ಬ್ಯಾಂಕ್ ವೃತ್ತದ ಬಳಿ ಹೆಚ್ಚು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರ-ವಿರೋಧ ಪ್ರತಿಭಟನೆಗೆ ಅನುಮತಿ ಕೋರಿ ಬುಧವಾರ ಮಧ್ಯಾಹ್ನ ಕೇಂದ್ರ ವಿಭಾಗಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದವು. ಅದನ್ನು ಆಧರಿಸಿಯೇ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿ
ಸಿದರೆ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ: ‘ಭಾರತದಂಥ ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ’ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು. ಪುರಭವನ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾಡಿದ ಅವರು, ‘ನೀವು ಸೆಕ್ಷನ್‌ 144 ಜಾರಿಗೊಳಿಸಿದ್ದು ಯಾಕೆ’ ಎಂದು ಪೊಲೀಸರನ್ನು ಪ್ರಶ್ನಿಸಿದರು.

‘ರಾಜ್ಯದಾದ್ಯಂತ ನಿಷೇಧಾಜ್ಞೆ ಘೋಷಿಸಿರುವ ರಾಜ್ಯ ಸರ್ಕಾರದ ಕ್ರಮಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಬಂಧಿತ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸುವುದು ಉತ್ತಮ ನಿರ್ಧಾರ. ಇದು ಪ್ರಜಾಪ್ರಭುತ್ವ ದೇಶ, ನೀವು ಯಾಕೆ ಹಠ ಮಾಡುತ್ತಿದ್ದೀರಿ’ ಎಂದರು.

‘ಬಡತನ ಮತ್ತು ನಿರೋದ್ಯೊಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಹೋರಾಟ ಮಾಡುತ್ತೇವೆ. ಅದೇ ರೀತಿ, ಈ ತಿದ್ದುಪಡಿ ಕಾಯ್ದೆ ವಿರುದ್ಧವೂ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿಲ್ಲ. ಜನ ಸ್ವತಂತ್ರವಾಗಿ ಪ್ರತಿಭಟಿಸುತ್ತಿ
ದ್ದಾರೆ. ಪ್ರತಿಭಟನಕಾರರ ಕೂಗು ಕೇಳಿಸಿಕೊಳ್ಳಬೇಕು’ ಎಂದು ಸೌಮ್ಯಾ ರೆಡ್ಡಿ ಕಿಡಿಕಾರಿದರು.

‘ಪ್ರತಿಭಟನೆ ಕೈಬಿಟ್ಟಿಲ್ಲ. ಇನ್ನೂ ಮುಂದುವರಿಯಲಿದೆ. ಕಮಿಷನರ್‌ ಸೆಕ್ಷನ್‌ 144 ಹೇರಿರುವುದರ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ್ದೇವೆ. ಸೆಕ್ಷನ್‌ 144 ಹೇರಿ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸು ಪಡೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ, ಪ್ರತಿಭಟನೆ ಮುಂದುವರಿಯಲಿದೆ’ ಎಂದು ‘ಭಾರತಕ್ಕಾಗಿ ನಾವು’ ಸಂಘಟನೆಯ ಮಲ್ಲಿಕಾ ಹೇಳಿದರು.

‘ಹೋರಾಟವನ್ನು ತಾತ್ಕಾಲಿಕವಾಗಿ ವಾಪಸು ಪಡೆದಿದ್ದೇವೆ. ಮೋದಿ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ’ ಎಂದು ಹೋರಾಟಗಾರ ವಿನಯ್‌ ಶ್ರೀನಿವಾಸ್‌ ಹೇಳಿದರು.

‘ಹೆಚ್ಚುವರಿ ಪೊಲೀಸರ ನಿಯೋಜನೆ’

‘ಪ್ರತಿಭಟನೆ ಸಂದರ್ಭದಲ್ಲಿ ಹಲವು ಕಡೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಸಂಚಾರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪ್ರತಿಭಟನೆ ನಾಳೆಯೂ ಮುಂದುವರಿದರೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗು
ವುದು. ಸಂಚಾರ ದಟ್ಟಣೆ ಉಂಟಾಗಲು ಅವಕಾಶ ನೀಡುವುದಿಲ್ಲ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್‌ ಬಿ.ಆರ್‌. ರವಿಕಾಂತೇಗೌಡ ಹೇಳಿದರು.

ಎಐಎಲ್‌ಯು ಪ್ರತಿಭಟನೆ

ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ವತಿಯಿಂದ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಅಖಿಲ ಭಾರತ ವಕೀಲರ ‌ಸಂಘ‌ದ (ಎಐಎಲ್‌ಯು) ರಾಜ್ಯ ಸಮಿತಿಯ ಅಧ್ಯಕ್ಷ ಎಸ್. ಶಂಕರಪ್ಪ, ಉಪಾಧ್ಯಕ್ಷ ಕೆ. ಕೊಟೇಶ್ವರ ರಾವ್, ವಕೀಲ ಅನಂತ್ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಕೀಲರಾದ ಮಂಡ್ಯದ ಶ್ರೀನಿವಾಸ, ಕೆ.ಎಚ್. ಪಾಟೀಲ, ರಾಮಚಂದ್ರ ರೆಡ್ಡಿ‌ ಸೇರಿದಂತೆ ಹಲವರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT