ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಆ್ಯಪ್‌’ ಹೂಡಿಕೆ: ₹ 5.17 ಕೋಟಿ ಕಳೆದುಕೊಂಡ ಉದ್ಯಮಿ

ದುಪ್ಪಟ್ಟು ಲಾಭದ ಆಮಿಷ: ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ವಂಚನೆ
Published 6 ಮೇ 2024, 15:44 IST
Last Updated 6 ಮೇ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕಡಿಮೆ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಿ’ ಎಂಬುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶ ನಂಬಿದ್ದ ಉದ್ಯಮಿಯೊಬ್ಬರು ₹ 5.17 ಕೋಟಿ ಕಳೆದುಕೊಂಡಿದ್ದು, ಸೈಬರ್ ವಂಚಕರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಹೂಡಿಕೆ ಹೆಸರಿನಲ್ಲಿ ವಂಚನೆ ಮಾಡಿರುವ ಬಗ್ಗೆ ಉದ್ಯಮಿ ದೂರು ನೀಡಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಮೊಬೈಲ್ ನಂಬರ್ ಹಾಗೂ ಮೊಬೈಲ್ ಖಾತೆಗಳ ವಿವರ ನೀಡಿದ್ದಾರೆ. ಅವುಗಳನ್ನು ಆಧರಿಸಿ ಪ್ರಕರರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜನರಿಗೆ ಲಾಭದ ಆಮಿಷವೊಡ್ಡಿ ವಂಚಿಸುವ ಜಾಲ ಇದಾಗಿದೆ. ಹೊರ ರಾಜ್ಯದವರು ಕೃತ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಉದ್ಯಮಿಯ ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸಿ, ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿದರು.

ಅಪರಿಚಿತ ಲಿಂಕ್, ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರ್ಪಡೆ: ‘ದೂರುದಾರರ ಮೊಬೈಲ್ ನಂಬರ್‌ಗೆ ಅಪರಿಚಿತ ಸಂಖ್ಯೆಯಿಂದ ಲಿಂಕ್ ಬಂದಿತ್ತು. ಹೂಡಿಕೆ ಬಗ್ಗೆ ಸಂದೇಶದಲ್ಲಿ ಬರೆಯಲಾಗಿತ್ತು. ದೂರುದಾರ ಲಿಂಕ್ ಒತ್ತಿದ್ದರು. ಆದರೆ, ಯಾವುದೇ ಜಾಲತಾಣ ತೆರೆದುಕೊಂಡಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ನಕಲಿ ಸಂದೇಶವಿರಬಹುದೆಂದು ದೂರುದಾರ ಸುಮ್ಮನಾಗಿದ್ದರು. ಆದರೆ, ಕೆಲ ಹೊತ್ತಿನ ನಂತರ ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರಲ್ಲಿ ಅವರ ನಂಬರ್ ಸೇರ್ಪಡೆ ಮಾಡಲಾಗಿತ್ತು. ಗ್ರೂಪ್‌ನಲ್ಲಿ ಹಲವರು ಸಂದೇಶ ಪೋಸ್ಟ್ ಮಾಡುತ್ತಿದ್ದರು. ‘ನನಗೆ ಇಂದು ದುಪ್ಪಟ್ಟು ಲಾಭ ಆಯಿತು’ ಎನ್ನುತ್ತಿದ್ದರು.’

‘ಗ್ರೂಪ್‌ನಲ್ಲಿ ಇರುವವರು ಹಣ ಹೂಡಿಕೆ ಮಾಡಿ ಲಾಭ ಗಳಿಸುತ್ತಿರಬಹುದೆಂದು ದೂರುದಾರ ತಿಳಿದುಕೊಂಡಿದ್ದರು. ಇದಾದ ಕೆಲ ಹೊತ್ತಿನಲ್ಲಿ ಗ್ರೂಪ್‌ನಲ್ಲಿದ್ದ ಮೂವರು ಅಪರಿಚಿತರು, ದೂರುದಾರರಿಗೆ ಕರೆ ಮಾಡಿದ್ದರು. ‘ಕಡಿಮೆ ಹಣ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ಸಿಗುತ್ತದೆ. ನೀವು ಇಂದೇ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿ’ ಎಂದಿದ್ದರು. ಜೊತೆಗೆ, ಆ್ಯಪ್‌ ಲಿಂಕ್ ಸಹ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

ಹಂತ ಹಂತವಾಗಿ ಹೂಡಿಕೆ: ‘ಆರೋಪಿಗಳ ಮಾತು ನಂಬಿದ್ದ ದೂರುದಾರ, ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿದ್ದ ತಮ್ಮ ಖಾತೆಯಿಂದ ಆ್ಯಪ್‌ನಲ್ಲಿದ್ದ ಖಾತೆಗೆ ಸ್ವಲ್ಪ ಹಣ ವರ್ಗಾಯಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಹೂಡಿಕೆ ಹಾಗೂ ಲಾಭದ ಮಾಹಿತಿ ಆ್ಯಪ್‌ನಲ್ಲಿ ನೋಡಲು ಲಭ್ಯವಾಗುತ್ತಿತ್ತು. ಹೂಡಿಕೆ ಮಾಡಿದ್ದ ಹಣಕ್ಕೆ ಲಾಭ ಬಂದಿರುವುದಾಗಿ ಆ್ಯಪ್‌ನಲ್ಲಿ ನಮೂದಿಸಲಾಗಿತ್ತು. ಲಾಭದ ಹಣವನ್ನು ವಾಪಸು ಪಡೆಯಲು, ದೂರುದಾರ ಪ್ರಯತ್ನಿಸಿದ್ದರು. ಆರೋಪಿಗಳು, ‘ಲಾಭದ ಹಣವನ್ನು ಪುನಃ ಹೂಡಿಕೆ ಮಾಡಿ, ನಿಮಗೆ ಮತ್ತಷ್ಟು ಲಾಭ ಬರುತ್ತದೆ’ ಎಂದಿದ್ದರು. ಅದನ್ನೂ ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 5.17 ಕೋಟಿ ಹೂಡಿಕೆ ಮಾಡಿದ್ದರು’ ಎಂದು ತಿಳಿಸಿದರು.

‘ದೂರುದಾರರಿಗೆ ಇತ್ತೀಚೆಗೆ ಹಣದ ಅವಶ್ಯಕತೆ ಇತ್ತು. ಹೂಡಿಕೆ ಹಣವನ್ನು ವಾಪಸು ಪಡೆಯಲು ಆ್ಯಪ್‌ನಲ್ಲಿ ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ. ಆರೋಪಿಗಳು ಸಹ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅವಾಗಲೇ ದೂರುದಾರರಿಗೆ ತಾವು ವಂಚನೆಗೀಡಾಗಿದ್ದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT