ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಸಿಪಾಳ್ಯ: 800 ವರ್ಷ ಹಿಂದಿನ ಶಿಲ್ಪಕಲಾಕೃತಿ–ಫಿರಂಗಿ ಗುಂಡು ಪತ್ತೆ

Last Updated 4 ಜನವರಿ 2021, 5:27 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಲಾಸಿಪಾಳ್ಯ ಬಸ್‌ ನಿಲ್ದಾಣ ಮತ್ತು ವಾಣಿ ವಿಲಾಸ್‌ ಬಳಿಯ ಖಾಲಿ ಜಾಗದಲ್ಲಿ ಪುರಾತನ ಕಾಲದ ವಿಗ್ರಹ ಮತ್ತು ಫಿರಂಗಿ ಗುಂಡುಗಳುಭಾನುವಾರ ಪತ್ತೆಯಾಗಿವೆ.

ಪ್ರಾಚೀನ ಜಲಕಂಠೇಶ್ವರ ದೇಗುಲದ ಬಳಿಯ ಈ ಸ್ಥಳದಲ್ಲಿ ಹಿಂದೆ ಕಲ್ಯಾಣಿ ಇತ್ತು. ಕಾಲ ಕ್ರಮೇಣ ಅದು ಮುಚ್ಚಿ ಹೋಗಿತ್ತು ಎಂದು ಸ್ಥಳೀಯರು ಹೇಳಿದರು. ಸದ್ಯ ಈ ಜಾಗವನ್ನು ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ನೀಡಲಾಗಿದೆ. ದಶಕದ ಕಾಲದಿಂದಲೂ ಕಾಲೇಜು ಒಡೆತನದಲ್ಲಿ ಈ ಸ್ಥಳ ಇದೆ.

ಈಗ ಹೊಸ ಕಟ್ಟೆ ಕಟ್ಟಲು ಪಾಯ ತೆಗೆಯಲಾಗುತ್ತಿತ್ತು. ಈ ವೇಳೆ ಪ್ರಾಚೀನ ಕಾಲದ ವಿಗ್ರಹಗಳಿರುವ ಕಲ್ಲು ಮತ್ತು ಕಲ್ಯಾಣಿಯ ಕುರುಹುಗಳು ಪತ್ತೆಯಾಗಿವೆ.

ಸ್ಥಳದಲ್ಲಿ ಪ್ರಾಚೀನ ಕಟ್ಟಡ ಇರಬಹುದು ಎಂದು ಸ್ಥಳೀಯರು ಊಹಿಸುತ್ತಿದ್ದು, ಗುಂಡಿ ತೆಗೆಯುವ ಕಾರ್ಯವನ್ನು ನಿಲ್ಲಿಸಿದ್ದಾರೆ.

‘ಪುರಾತತ್ವ ಶಾಸ್ತ್ರ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಾಚೀನ ಶಿಲ್ಪಕಲಾಕೃತಿಗಳ ಅಥವಾ ಕಟ್ಟಡದ ರಕ್ಷಣೆಗೆ ಮುಂದಾಗಬೇಕು’ ಎಂದು ಅರ್ಚಕರು ಒತ್ತಾಯಿಸಿದರು.

'ಸುಮಾರು 700ರಿಂದ 800 ವರ್ಷ ಹಿಂದಿನ ಶಿಲೆಯಲ್ಲಿ ನಂದಿ, ಶಿವ ಮತ್ತು ಪಾರ್ವತಿ, ಭೃಂಗಿ ಮಹರ್ಷಿಯ ಕೆತ್ತನೆ ಇದೆ‌. ಜೊತೆಗೆ, ವ್ಯಕ್ತಿಯೊಬ್ಬ ಮೃದಂಗ ಬಾರಿಸುತ್ತಿರುವ ಚಿತ್ರವಿದೆ. ಜಲಕಂಠೇಶ್ವರ ದೇವಾಲಯ ನಿರ್ಮಾಣ ವೇಳೆ ಇದನ್ನು ಕೆತ್ತಿರುವ ಸಾಧ್ಯತೆ ಇದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಆರ್. ಗೋಪಾಲ್ ಹೇಳಿದ್ದಾರೆ.

'ಈ ಕಲಾಕೃತಿ ಅಪೂರ್ಣವಾಗಿದೆ ಎನಿಸುತ್ತದೆ. ಜೊತೆಗೆ ಸಿಕ್ಕಿರುವ ಫಿರಂಗಿ ಗುಂಡು ಟಿಪ್ಪು ಸುಲ್ತಾನ್ ಕಾಲಕ್ಕೆ ಸೇರಿದ್ದಾಗಿರಬಹುದು' ಎಂದೂ ತಿಳಿಸಿದ್ದಾರೆ.

ಈ ಹಿಂದೆ ಚಾಮರಾಜಪೇಟೆಯ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ ನಿರ್ಮಾಣ ವೇಳೆಯೂ 23 ಫಿರಂಗಿ ಗುಂಡುಗಳು ದೊರಕಿದ್ದವು. ಅಲ್ಲದೆ, ಇದೇ ಕೆ.ಆರ್. ಮಾರುಕಟ್ಟೆ ವ್ಯಾಪ್ತಿಯಲ್ಲಿ ಮೆಟ್ರೊ ರೈಲು ಸುರಂಗ ಕಾಮಗಾರಿ ವೇಳೆ 3 ಫಿರಂಗಿಗಳು ಕೂಡ ದೊರಕಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT