ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳಲ್ಲಿ ಕಲಾತ್ಮಕ ಬೋಧನೆ?

ಕಲಾವಿದರಿಂದ ಮಕ್ಕಳಿಗೆ ಚಿತ್ರಸಹಿತ ಕಲಿಕೆ, ಕರ್ನಾಟಕ ಲಲಿತಕಲಾ ಅಕಾಡೆಮಿ ಚಿಂತನೆ
Last Updated 1 ಮಾರ್ಚ್ 2020, 19:27 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕ ಮಕ್ಕಳಿಗೆ ಚಿತ್ರಗಳ ಮೂಲಕ ಕಲಾತ್ಮಕವಾಗಿ ಬೋಧಿಸುವ ಉದ್ದೇಶದಿಂದರಾಜ್ಯದ ಎಲ್ಲ ಅಂಗನವಾಡಿಗಳಿಗೆ ಚಿತ್ರ ಕಲಾವಿದರನ್ನು ನಿಯೋಜಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿ ಚಿಂತನೆ ನಡೆಸಿದೆ.

ರಾಜ್ಯದಲ್ಲಿರುವ ಚಿತ್ರಕಲಾವಿದರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಿ, ಆರ್ಥಿಕ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಅಕಾಡೆಮಿ ಈ ಯೋಜನೆ ರೂಪಿಸಿದೆ.

ಈ ಬಗ್ಗೆ ಲಲಿತಕಲಾ ಅಕಾಡೆಮಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡುವೆ ಚರ್ಚೆ ನಡೆದಿದ್ದು, ಅಂಗನವಾಡಿಗಳಿಗೆ ನಿಯೋಜನೆಗೊಳ್ಳುವ ಚಿತ್ರಕಲಾವಿದ ರಿಗೆ ತಿಂಗಳ ಗೌರವಧನ ನೀಡಲು ಉದ್ದೇಶಿಸಿದೆ.

‘5 ವರ್ಷದೊಳಗಿನ ಮಕ್ಕಳು ಅಕ್ಷರಗಳಿಗಿಂತ ಹೆಚ್ಚಾಗಿ ಚಿತ್ರಗಳಿಂದ ವಿಷಯ ಅರಿತುಕೊಳ್ಳುತ್ತಾರೆ. ಒಂದು ವಿಷಯವನ್ನು ಬಾಯಿ ಮಾತಿನಲ್ಲಿ ಅಥವಾ ಅಕ್ಷರಗಳಲ್ಲಿ ತಿಳಿಸಿದಾಗ ಎಳೆಯ ವಯಸ್ಸಿಗೆ ನಾಟುವುದಿಲ್ಲ. ಬದಲಿಗೆ ಒಂದು ಚಿತ್ರದ ಮೂಲಕ ತಿಳಿಸಿದಾಗ ಮಕ್ಕಳು ವಿಷಯವನ್ನು ಹೆಚ್ಚು ಗ್ರಹಿಸುತ್ತಾರೆ. ಕಲಾವಿದರ ಸಹಾಯದಿಂದಅಂಗನವಾಡಿ ಶಿಕ್ಷಕಿಯರು ಮಕ್ಕಳಿಗೆ ಬೋಧಿಸಲು ಸಹಕಾರಿಯಾಗಲಿದೆ’ ಎಂದು ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಿತ್ರ ಕಲಾವಿದರಿದ್ದಾರೆ. ಅಂಗನವಾಡಿಗಳಲ್ಲಿನ ಕಲಿಕೆಗೆ ಸ್ಥಳೀಯ ಕಲಾವಿದರನ್ನೇ ನಿಯೋಜಿಸಲಾಗುವುದು. ಕಲಾವಿದರನ್ನು ಸ್ವಇಚ್ಛೆಯಿಂದ ಬೋಧನೆಗೆ ಆಹ್ವಾನಿಸಲಾಗುವುದು. ಅವರು ಇಷ್ಟ ಪಡುವ ಅಂಗನವಾಡಿಗಳಲ್ಲೇ ಅವಕಾಶ ನೀಡುತ್ತೇವೆ. ಆಸಕ್ತಿಯಿದ್ದಲ್ಲಿ ಒಬ್ಬರೇ ಎರಡು ಮೂರು ಅಂಗನವಾಡಿಗಳಿಗೂ ತೆರಳಬಹುದು. ವಾರದಲ್ಲಿ ಒಂದು ದಿನ ಅಥವಾ ತಿಂಗಳಲ್ಲಿ 10 ದಿನಗಳು ಮಕ್ಕಳಿಗೆ ಕಲಾತ್ಮಕ ಬೋಧನೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕಂಪನಿಗಳು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಕಲಾವಿದರಿಗೆ ಗೌರವಧನ ನೀಡಲು ಉದ್ದೇಶಿಸಲಾಗಿದೆ. ಕನಿಷ್ಠ ₹ 5 ಸಾವಿರ ಗೌರವ ಧನ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆಗೆ ಚರ್ಚೆ ನಡೆಸಲಾಗಿದೆ. ಶೀಘ್ರವೇ ಈ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ’ ಎಂದರು.

ಅಂಕಿ ಅಂಶ
5 ಲಕ್ಷ:ಮಕ್ಕಳಿಗೆ ಉಪಯೋಗ
₹5 ಸಾವಿರ:ಕಲಾವಿದರಿಗೆ ಗೌರವಧನ (ಅಂದಾಜು)
3 ಸಾವಿರ:ವೃತ್ತಿಪರ ಚಿತ್ರ ಕಲಾವಿದರು
65,977:ರಾಜ್ಯದಲ್ಲಿರುವ ಒಟ್ಟು ಅಂಗನವಾಡಿಗಳು

**
ಚಿತ್ರಕಲಾವಿದರಿಗೆ ಸ್ಥಳೀಯವಾಗಿ ಅವಕಾಶ ಕಲ್ಪಿಸುವುದು ಹಾಗೂ ಮಕ್ಕಳ ಕಲಿಕೆಯನ್ನು ಸುಲಭ ಮಾಡುವುದು ಈ ಯೋಜನೆ ಉದ್ದೇಶ.
–ಡಿ.ಮಹೇಂದ್ರ, ಲಲಿತ ಕಲಾ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT