ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನದಲ್ಲಿ ಕಾರ್ಯಕರ್ತೆಯರ ವಾಸ್ತವ್ಯ: ಬ್ಯಾಗ್‌ಗಳೇ ತಲೆದಿಂಬು

Published 14 ಫೆಬ್ರುವರಿ 2024, 0:15 IST
Last Updated 14 ಫೆಬ್ರುವರಿ 2024, 0:15 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಅಹೋರಾತ್ರಿ ಹೋರಾಟ ಆರಂಭಿಸಿರುವ ಆಶಾ ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದ್ದರು. ತಮ್ಮ ಬ್ಯಾಗ್‌ಗಳನ್ನೇ ತಲೆದಿಂಬು ಮಾಡಿಕೊಂಡು ನಿದ್ದೆಗೆ ಜಾರಿದರು.

ಹೋರಾಟಕ್ಕೆ ಅನುಕೂಲವಾಗಲೆಂದು ಪೆಂಡಾಲ್ ನಿರ್ಮಿಸಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಪೆಂಡಾಲ್ ಒಳಗೆ ಹಾಗೂ ಹೊರಗೆ ಗುಂಪು ಗುಂಪಾಗಿ ಕಾರ್ಯಕರ್ತೆಯರು ಮಲಗಿದ್ದ ದೃಶ್ಯಗಳು ಮಂಗಳವಾರ ರಾತ್ರಿ ಕಂಡಬಂದವು.

ಕಲಬುರ್ಗಿ, ಬೆಳಗಾವಿ, ಯಾದಗಿರಿ, ಕೊಪ್ಪಳ, ಧಾರವಾಡ, ಹಾವೇರಿ, ದಾವಣಗೆರೆ, ಬಳ್ಳಾರಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿರುವ ಕಾರ್ಯಕರ್ತೆಯರಿಗೆ ಉದ್ಯಾನದ ಆವರಣವೇ ಮನೆಯಂತಾಯಿತು. ಕಾರ್ಯಕರ್ತೆಯರು, ಗುಂಪು ಗುಂಪಾಗಿ ಊಟ ಮಾಡುತ್ತಿದ್ದ ದೃಶ್ಯಗಳು ಕಾಣಿಸಿದವು.

ಸೌಕರ್ಯ ಕಲ್ಪಿಸುವವರು ಯಾರು: ಪ್ರತಿಭಟನಾ ಸ್ಥಳದಲ್ಲಿ ಮೂಲ ಸೌಕರ್ಯ ಇಲ್ಲದಿದ್ದಕ್ಕೆ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು. ಶೌಚಾಲಯ ಹಾಗೂ ಸ್ನಾನ ಗೃಹಗಳ ಸಮಸ್ಯೆ ಹೆಚ್ಚಿದೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಪ್ರತಿಭಟನೆಗೆ ಅನುಮತಿ ನೀಡುವುದು ನಮ್ಮ ಕರ್ತವ್ಯ. ಆದರೆ, ಸೌಕರ್ಯ ಕಲ್ಪಿಸುವುದು ಹೇಗೆ? ಅದಕ್ಕೆ ಹಣ ಎಲ್ಲಿಂದ ತರಬೇಕು. ಸಂಬಂಧಪಟ್ಟ ಪ್ರಾಧಿಕಾರಕ್ಕೆ ಹೇಳಿದರೆ, ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಪ್ರತಿಭಟನಕಾರರ ಗೋಳು ನಮಗೂ ನೋಡಲು ಆಗುತ್ತಿಲ್ಲ. ಸ್ಥಳೀಯ ಬಿಬಿಎಂಪಿ ಅವರು ಸೌಕರ್ಯ ಕಲ್ಪಿಸಲು ಗಮನ ಹರಿಸಬೇಕು. ಈ ಬಗ್ಗೆ ಅವರಿಗೂ ಹಲವು ಬಾರಿ ಪತ್ರ ಬರೆಲಾಗಿದೆ’ ಎಂದರು.

ಸಚಿವ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಾರ್ಯಕರ್ತೆಯರಿಂದ ಮನವಿ ಸ್ವೀಕರಿಸಿದರು. ‘ಪ್ರತಿ ತಿಂಗಳು ₹ 5 ಸಾವಿರ ಬದಲು ₹ 7 ಸಾವಿರ ಗೌರವ ಧನವನ್ನು ನೇರ ವರ್ಗಾವಣೆಗೆ ಕ್ರಮ ಕೈಗೊಳ್ಳುತ್ತೇವೆ. ಹೋರಾಟ ಕೈಬಿಡಿ’ ಎಂದು ಸಚಿವರು ಕೋರಿದರು. ಅದಕ್ಕೆ ಕಾರ್ಯಕರ್ತೆಯರು ಒಪ್ಪಲಿಲ್ಲ. ಹೋರಾಟ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT