ಸೋಮವಾರ, ಆಗಸ್ಟ್ 15, 2022
24 °C
ಬೆಂಗಳೂರಿನ ಮೇಲೆ ಹಿಡಿತಕ್ಕೆ ಕಂದಾಯ ಸಚಿವ ಆರ್‌.ಅಶೋಕ ಹರಸಾಹಸ

ಬೆಂಗಳೂರು ಮೇಲಿನ ಆಶೋಕ್‌ ಹಿಡಿತಕ್ಕೆ ಬಿಬಿಎಂಪಿಗೆ ‘ಆಪ್ತ’ ಅಧಿಕಾರಿಗಳ ನೇಮಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಗೌರವ್‌ ಗುಪ್ತ ಅವರ ಆಯ್ಕೆ ಬೆಂಗಳೂರು ನಗರದಲ್ಲಿ ಕಂದಾಯ ಸಚಿವ ಆರ್‌.ಅಶೋಕ ಅವರ ಹಿಡಿತ ಪ್ರಬಲವಾಗುತ್ತಿರುವುದರ ಸಂಕೇತ ಎಂಬುದಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಹೆಚ್ಚು ಆದಾಯ ತರಬಲ್ಲ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಯಾರಿಗೂ ಹಂಚಿಕೆ ಮಾಡದೇ ಮುಖ್ಯಮಂತ್ರಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಉಪಮುಖ್ಯಮಂತ್ರಿ ಆಗಿರುವುದರಿಂದ ಸಹಜವಾಗಿ ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಚರ್ಚೆ ಆರಂಭದಲ್ಲಿ ಬಿಜೆಪಿ ವಲಯದಲ್ಲಿ ನಡೆದಿತ್ತು. ಆದರೆ, ಅವರಿಗೆ ರಾಮನಗರ ಜಿಲ್ಲೆಯ ಉಸ್ತುವಾರಿ ನೀಡಲಾಯಿತು. ಅಶೋಕ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ವಹಿಸಲಾಯಿತು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಉಪ ಮುಖ್ಯಮಂತ್ರಿ ಹುದ್ದೆ ಹೊಂದಿದ್ದ ಅಶೋಕ ಅವರು ಬೆಂಗಳೂರು ನಗರದ ಉಸ್ತುವಾರಿಯನ್ನೂ ಹೊಂದಿದ್ದರು. ಆದರೆ, ಈ ಬಾರಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ, ಈ ಎರಡೂ ಅವಕಾಶಗಳು ಕೈತಪ್ಪಿದ್ದವು. ಆದರೆ, ಸಮಯ ಸಂದರ್ಭ ಸಿಕ್ಕಿದ್ದಾಗ ನಗರದ ಆಡಳಿತದ ಹಿಡಿತ ತಮ್ಮ ಕೈಯಲ್ಲಿದೆ ಎಂಬುದನ್ನು ಪದೇ ಪದೇ ತೋರಿಸುವ ಪ್ರಯತ್ನವನ್ನು ಅಶೋಕ ನಡೆಸಿದ್ದಾರೆ.

ಬಿಬಿಎಂಪಿ ಆಯುಕ್ತರನ್ನಾಗಿ ಮಂಜುನಾಥ್‌ ಪ್ರಸಾದ್‌ ಅವರನ್ನು ಮರುನೇಮಕ ಮಾಡುವುದರ ಹಿಂದೆ ಅಶೋಕ ಅವರ ಆಸಕ್ತಿ ಕೆಲಸ ಮಾಡಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರಿಗೆ ಆಯುಕ್ತರ ಹುದ್ದೆ ಹೆಚ್ಚುವರಿಯಾಗಿ ನೀಡಲಾಗಿತ್ತು. 

ಅಶೋಕ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಹೀಗಾಗಿ ಅವರು ಹೇಳಿದ ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ಹಾಕಲಾಗುತ್ತಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ. ತಮ್ಮ ಮಾತನ್ನು ಕೇಳದೆ ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿ ಮಾಡಿದ ಬಗ್ಗೆ ಯಡಿಯೂರಪ್ಪ ಅವರಿಗೆ ಅಸಮಾಧಾನವಿದೆ. ಇದರ ‘ಪ್ರಯೋಜನ’ವನ್ನು ಅಶೋಕ ಅವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಕೋವಿಡ್‌ ನಿರ್ವಹಣೆ ಸಂದರ್ಭದಲ್ಲಿ ಬೆಂಗಳೂರು ಉಸ್ತುವಾರಿ ಬಗ್ಗೆ ಅಶೋಕ ಮತ್ತು ಅಶ್ವತ್ಥನಾರಾಯಣ ನಡುವೆ ಸಣ್ಣ ಮಟ್ಟದ ಮುಸುಕಿನ ಗುದ್ದಾಟ ನಡೆದಿತ್ತು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಡಾ. ಅಶ್ವತ್ಥನಾರಾಯಣ ಅವರು ಕೊರೊನಾ ಸೋಂಕಿನಿಂದ ಕ್ವಾರಂಟೈನ್ ಆದಾಗ, ಬೆಂಗಳೂರು ಉಸ್ತುವಾರಿ ನೋಡಿಕೊಳ್ಳಲು ಅಶೋಕ ಅವರಿಗೆ ಯಡಿಯೂರಪ್ಪ ಸೂಚಿಸಿದ್ದರು. ಆ ವಿಷಯವನ್ನು ಎಲ್ಲ ಮುಂದೆ ಹೇಳಿಕೊಂಡಿದ್ದ ಕಂದಾಯ ಸಚಿವರು ‘ಇನ್ನು ಮುಂದೆ ತಾವೇ ಬೆಂಗಳೂರಿನ ಕೋವಿಡ್‌ ಉಸ್ತುವಾರಿ’ ಎಂದು ಪದೇ ಪದೇ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು. 

ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಆದ ದಿನವೇ ಅಶೋಕ ಸ್ಥಳಕ್ಕೆ ಭೇಟಿ ನೀಡಿದ್ದರು. ಇತರ ಸಚಿವರು ಹೋಗುವುದಕ್ಕೆ ಮುನ್ನವೇ ಅಶೋಕ ಅಲ್ಲಿಗೆ ಹಾಜರಾಗಿ, ಸ್ಥಳ ಪರಿಶೀಲನೆ ನಡೆಸಿದ್ದರು. ಅಖಂಡ ಶ್ರೀನಿವಾಸಮೂರ್ತಿಯವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಕರೆಸಿ, ಮಾತುಕತೆಯ ವ್ಯವಸ್ಥೆಯನ್ನೂ ಮಾಡಿಸಿದ್ದರು. ಗೌರವ್‌ ಗುಪ್ತ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ ಬಗ್ಗೆ ಬಿಜೆಪಿಯ ಕೆಲವು ಶಾಸಕರಲ್ಲಿ ಅಸಮಾಧಾನವಿದೆ. ಎಂಬ ಮಾತುಗಳು
ಕೇಳಿ ಬರುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು