ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿಹಣ್ಣು ನೇರ ಮಾರಾಟಕ್ಕೆ ಕೃಷಿ ವಿ.ವಿ ಹಳೆ ವಿದ್ಯಾರ್ಥಿಗಳ ಸಂಘದ ನೆರವು

Last Updated 8 ಏಪ್ರಿಲ್ 2020, 20:46 IST
ಅಕ್ಷರ ಗಾತ್ರ

ಯಲಹಂಕ: ಲಾಕ್‌ಡೌನ್‌ನಿಂದ ದ್ರಾಕ್ಷಿಬೆಳೆ ಮಾರಾಟಕ್ಕೆ ಸಾಗಣೆ ಸಮಸ್ಯೆ ಎದುರಾಗಿ, ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಧಾವಿಸಿದೆ. ಆ ಮೂಲಕ ವಿವಿಧ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದೊಂದಿಗೆ ರೈತರು ಬೆಳೆದ ದ್ರಾಕ್ಷಿ ಹಣ್ಣನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ವೇದಿಕೆ ಕಲ್ಪಿಸಿದೆ.

ಚಿಕ್ಕಬಳ್ಳಾಪುರ, ದೇವನಹಳ್ಳಿ ಭಾಗಗಳಲ್ಲಿ ಏಕಕಾಲಕ್ಕೆ ದ್ರಾಕ್ಷಿಬೆಳೆಯು ಕೊಯ್ಲಿಗೆ ಬಂದಿದ್ದು, ಇತರೆ ರಾಜ್ಯಗಳಿಗೆ ಹೆಚ್ಚಾಗಿ ಹೋಗುತ್ತಿದ್ದ ಈ ಬೆಳೆಯನ್ನು ಈಗ ಮಾರಾಟಮಾಡಲು ಸಾಧ್ಯವಾಗದೆ ರೈತರು ದಿಕ್ಕು ತೋಚದಂತಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ರೈತರ ತೋಟಗಳಿಗೆ ಭೇಟಿ ನೀಡಿ, ಹಣ್ಣಿನ ಗುಣಮಟ್ಟ, ರುಚಿ ಮತ್ತಿತರ ಅಂಶಗಳನ್ನು ಪರಿಶೀಲಿಸಿ, ಹಣ್ಣಿನ ದರವನ್ನೂ ನಿಗದಿಪಡಿಸಿದ್ದಾರೆ.

ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮೂಲಕ ವಾಟ್ಸ್‌ಆ್ಯಪ್‌ ಗುಂಪುಗಳಿಗೆ ಈ ಮಾಹಿತಿ ರವಾನಿಸಿ, ಮಾರಾಟಕ್ಕೆ ಅನುವು ಮಾಡಿದ್ದಾರೆ. ಅಲ್ಲದೆ ಸಂಘದ ಕಾರ್ಯನಿರ್ವಾಹಕ ಸದಸ್ಯರೊಬ್ಬರು ಮಾರಾಟದ ಸ್ಥಳದಲ್ಲಿದ್ದು, ಗ್ರಾಹಕರು ಮತ್ತು ರೈತರ ನಡುವೆ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸುವುದರ ಜೊತೆಗೆ ಅಂತರ ಕಾಯ್ದುಕೊಳ್ಳಲು ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇತರೆ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟಮಾಡಲು ಈಗ ಮಾರುಕಟ್ಟೆ ಲಭ್ಯವಿದ್ದು, ಎಲ್ಲ ವರ್ಗದವರೂ ಇದನ್ನು ಕೊಳ್ಳಲಿದ್ದು, ಕಾಲಾವಕಾಶವೂ ಇರುತ್ತದೆ. ಆದರೆ ದ್ರಾಕ್ಷಿಹಣ್ಣನ್ನು ಒಂದು ವರ್ಗದ ಜನರು ಮಾತ್ರ ಉಪಯೋಗಿಸಲಿದ್ದು, ಏಕಕಾಲಕ್ಕೆ ಈ ಬೆಳೆಯು ಕೊಯ್ಲಿಗೆ ಬಂದಿರುವುದರಿಂದ 15 ದಿನಗಳೊಳಗಾಗಿ ಮಾರಾಟ ಮಾಡಬೇಕಾದ ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ರೈತರು ಮತ್ತು ಗ್ರಾಹಕರ ಮದ್ಯೆ ನೇರಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಕೆ.ನಾರಾಯಣಗೌಡ ತಿಳಿಸಿದರು.

ಸಹಕಾರನಗರ, ಕಾಫಿಬೋರ್ಡ್ ಲೇಔಟ್ ಮತ್ತಿತರ ಬಡಾವಣೆಗಳಲ್ಲಿ ಈಗಾಗಲೇ ದ್ರಾಕ್ಷಿಹಣ್ಣು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈತರು ತಂದಿದ್ದ ದ್ರಾಕ್ಷಿಹಣ್ಣು ಸಂಪೂರ್ಣವಾಗಿ ಮಾರಾಟವಾಗುತ್ತಿದೆ. ಬೆಂಗಳೂರು ಉತ್ತರ ಭಾಗದ ಯಲಹಂಕ, ಜಕ್ಕೂರು, ಭುವನೇಶ್ವರಿ ನಗರ, ನ್ಯಾಯಾಂಗ ಬಡಾವಣೆ, ಆರ್.ಟಿ.ನಗರ ಮತ್ತಿತರ ಬಡಾವಣೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಉತ್ತಮ ಗುಣಮಟ್ಟದ ತಾಜಾ ಹಣ್ಣುಗಳನ್ನು ತೋಟದಲ್ಲಿ ಕತ್ತರಿಸಿದ ತಕ್ಷಣ ಪರಿಸರಸ್ನೇಹಿ ಪೇಪರ್‌ನಿಂದ 1, 2 ಮತ್ತು 3 ಕೆ.ಜಿಯಂತೆ ಪ್ಯಾಕ್ ಮಾಡಲಾಗುತ್ತದೆ. ಸೂಪರ್ ಮಾರ್ಕೆಟ್ ಗಳಲ್ಲಿ ಕೆ.ಜಿಗೆ ₹120ರಂತೆ ಮಾರಾಟವಾಗುವ ಸೊನಾಲಿಕ, ಶರದ್ ತಳಿಯ ಹಣ್ಣುಗಳನ್ನು ಕೇವಲ ₹55ಕ್ಕೆ ಹಾಗೂ ₹250ಕ್ಕೆ ಮಾರಾಟಮಾಗುವ ರೆಡ್ಗ್ಲೋಬ್ ಹಣ್ಣನ್ನು ₹90ಕ್ಕೆ ಮಾರಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ತಾಜಾಹಣ್ಣು ದೊರೆಯುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಇತರೆ ಬೆಳೆಗಳ ಮಾರಾಟಕ್ಕೂ ಇಂತಹ ವೇದಿಕೆ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಸಹಕಾರನಗರ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನಕಾರ್ಯದರ್ಶಿ ಎ.ಶಿವರಾಮ ಶೆಟ್ಟಿ ತಿಳಿಸಿದರು.

ಒಟ್ಟು 3 ಎಕರೆಯಲ್ಲಿ ಶರದ್ ತಳಿಯ ದ್ರಾಕ್ಷಿಹಣ್ಣನ್ನು ಬೆಳೆಯಲಾಗಿದ್ದು, ಕೊಯ್ಲಿಗೆ ಬಂದಿತ್ತು. ಈ ಹಿಂದೆ ಇತರೆ ರಾಜ್ಯಗಳಿಂದ ವ್ಯಾಪಾರಿಗಳು ತೋಟಕ್ಕೆ ಬಂದು ಹಣ್ಣನ್ನು ಖರೀದಿಸುತ್ತಿದ್ದರು. ಆದರೆ ಈ ಭಾರಿ ಮಾರಾಟಕ್ಕೆ ಅವಕಾಶವಾಗಿರಲಿಲ್ಲ. ನೇರಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಬೆಳೆದ ದ್ರಾಕ್ಷಿ ಮಾರಾಟವಾಗುತ್ತಿದೆ ಎಂದು ವೆಂಕಟಗಿರಿಕೋಟೆಯ ರೈತ ನಾರಾಯಣಸ್ವಾಮಿ ತಿಳಿಸಿದರು.

ಹೆಚ್ಚಿನ ಮಾಹಿತಿಗೆ: 9731651925

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT