ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕಾತಿ | ಇನ್ನಷ್ಟು ಹುದ್ದೆ ಸೇರಿಸಿ; ಆಕಾಂಕ್ಷಿಗಳ ಮೊರೆ

ಅಭ್ಯರ್ಥಿಗಳಿಗೆ ವಯೋಮಿತಿ ಮೀರುವ ಆತಂಕ
Last Updated 18 ಆಗಸ್ಟ್ 2022, 22:05 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ಮಧ್ಯೆಯೇ, ಇನ್ನಷ್ಟು ಹುದ್ದೆಗಳನ್ನು ಇದೇ ನೇಮಕಾತಿ ಪ್ರಕ್ರಿಯೆಗೆ ಸೇರ್ಪಡೆಗೊಳಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ.

ರಾಜ್ಯದಲ್ಲಿ ಕಳೆದ 12 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ ನಡೆದಿದೆ. ಹಾಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಸದ್ಯ ಖಾಲಿಯಿರುವ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳು ಇಲ್ಲ. ಹೀಗಾಗಿ, ಹೆಚ್ಚುವರಿಯಾಗಿ 600ರಿಂದ 800 ಹುದ್ದೆಗಳನ್ನು ಇದೇ ನೇಮಕಾತಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಭ್ಯರ್ಥಿಗಳ ಈ ಮನವಿಗೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಈ ಬಗ್ಗೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವಂತೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ. ಅಲ್ಲದೆ, ವಿಧಾನಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ ಮತ್ತು ಶಶೀಲ್‌ ಜಿ. ನಮೋಶಿ ಅವರುಸಿ.ಎಂಗೆ ಪತ್ರ ಬರೆದು, ಸದ್ಯ ನಡೆಯುವ ನೇಮಕಾತಿಗೆ ಇನ್ನೂ 448 ಹುದ್ದೆ ಸೇರಿಸಲು ಕೋರಿದ್ದಾರೆ.

2015ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ 1,298 ಹುದ್ದೆಗಳಿಗೆ ಮತ್ತೆ 862 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು. ಆ ವರ್ಷ ಅರ್ಜಿ ಆಹ್ವಾನಿಸಿದ ಹುದ್ದೆಗಳು ಹೆಚ್ಚು ಇತ್ತಾದರೂ ಅರ್ಹ ಅಭ್ಯರ್ಥಿಗಳು ಕಡಿಮೆ ಇದ್ದರು. ಆದರೆ, ಪ್ರಸಕ್ತ ಸಾಲಿನಲ್ಲಿ ಅರ್ಜಿ ಆಹ್ವಾನಿಸಿರುವ ಹುದ್ದೆಗಳ ಸಂಖ್ಯೆ ಸಾವಿರದಷ್ಟು ಕಡಿಮೆ. ಆದರೆ, ಅರ್ಹ ಅಭ್ಯರ್ಥಿಗಳ ಸಂಖ್ಯೆ ಹೆಚ್ಚು ಇದೆ. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್‌ ಗಳಿಸಿದ ಅಭ್ಯರ್ಥಿ ಕೂಡಾ ನೇಮಕಾತಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿದರೂ ಹುದ್ದೆ ಸಿಗುವುದು ಅನುಮಾನ. ಮುಂದಿನ ನೇಮಕಾತಿ ವೇಳೆಗೆ ವಯೋಮಿತಿ ಮೀರಲಿದೆ ಎನ್ನುವುದು ಹುದ್ದೆ ಆಕಾಂಕ್ಷಿಗಳ ಆತಂಕ.

‘ಸದ್ಯ ನಡೆದಿರುವ ನೇಮಕಾತಿಯಲ್ಲಿ ಕೆಲವು ವಿಷಯಗಳಿಗೆ ಕನಿಷ್ಠ ಸಂಖ್ಯೆಯ ಹುದ್ದೆಯೂ ಇಲ್ಲ. ನಿರ್ವಹಣಾ ಶಾಸ್ತ್ರ (ಮ್ಯಾನೇಜ್‌ಮೆಂಟ್‌) ವಿಷಯದಲ್ಲಿ ಕೇವಲ ಒಂದು ಹುದ್ದೆಗಷ್ಟೆ ನೇಮಕಾತಿಗೆ ನಡೆಯುತ್ತಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 9 ಸಾವಿರದಿಂದ 10 ಸಾವಿರ ಪೂರ್ಣಕಾಲಿಕ ಹುದ್ದೆಗಳಿದ್ದು, ಕೇವಲ 1,242 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳಿಗೆ ಅರ್ಹತೆಯಾದ ನೆಟ್, ಸೆಟ್, ಪಿಎಚ್.ಡಿ ಪಡೆದಿರುವ ಬಹುತೇಕ ಅರ್ಹ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ. ಹೀಗಾಗಿ, ಪ್ರಸಕ್ತ ನೇಮಕಾತಿಯಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಅಭ್ಯರ್ಥಿಯೊಬ್ಬರು ಆಗ್ರಹಿಸಿದರು.

ಸಹಾಯಕ ಪ್ರಾಧ್ಯಾಪಕ ಹುದ್ದೆ ಅಂಕಿಅಂಶ
ವಿಷಯ; ಹುದ್ದೆ ಖಾಲಿ; ಸದ್ಯ ನೇಮಕಾತಿ
ನಿರ್ವಹಣಾ ಶಾಸ್ತ್ರ; 550; 01
ವಾಣಿಜ್ಯ ಶಾಸ್ತ್ರ; 1,507; 134
ಕನ್ನಡ; 989;105
ಇಂಗ್ಲಿಷ್; 723; 34
ರಸಾಯನ ವಿಜ್ಞಾನ; 585; 82

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT