ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಎಟಿಎಂ ಹಣ ದೋಚಲು ಯತ್ನಿಸಿ ಹಲ್ಲೆ, ಅಪರಾಧಿಗೆ ಶಿಕ್ಷೆ

Published 27 ಜೂನ್ 2023, 14:01 IST
Last Updated 27 ಜೂನ್ 2023, 14:01 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಯಂತ್ರದಿಂದ ಹಣ ದೋಚಲು ಯತ್ನಿಸಿ, ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಅಪರಾಧಿ ನಮಶಿವಾಯ (36) ಎಂಬಾತನಿಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ ನ್ಯಾಯಾಲಯ ಆದೇಶ ಹೊರಡಿಸಿದೆ.

2013ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು 64ನೇ ಸಿಸಿಎಚ್‌ ನ್ಯಾಯಾಧೀಶರಾದ ಅಣ್ಣುಗೌಡ ವಿ. ಪಾಟೀಲ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಶರಣಗೌಡ ಪಾಟೀಲ ವಾದಿಸಿದ್ದರು.

‘ಚೆನ್ನೈನ ನಮಶಿವಾಯ, 2013ರಲ್ಲಿ ಬೆಂಗಳೂರಿಗೆ ಬಂದಿದ್ದ. ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ. ಪತ್ನಿಯೂ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ, ಭದ್ರತಾ ಸಿಬ್ಬಂದಿ ಇರದ ಎಟಿಎಂ ಘಟಕದ ಯಂತ್ರದಿಂದ ಹಣ ದೋಚಲು ಸಂಚು ರೂಪಿಸಿದ್ದ.’

‘ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್‌ ಎಟಿಎಂ ಘಟಕದೊಳಗೆ ಮಾರಕಾಸ್ತ್ರ ಸಮೇತ ಜೂನ್ 23ರಂದು ರಾತ್ರಿ ನುಗ್ಗಿದ್ದ. ತನ್ನ ಗುರುತು ಸಿಗಬಾರದೆಂದು, ಘಟಕದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಕ್ಕೆ ಚ್ಯೂವಿಂಗ್ ಗಮ್ ಅಂಟಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಉಪಕರಣದಿಂದ ಯಂತ್ರವನ್ನು ಕತ್ತರಿಸಲು ಯತ್ನಿಸಿದ್ದ. ಅದು ಸಾಧ್ಯವಾಗಿರಲಿಲ್ಲ. ನಂತರ, ಮಾರಕಾಸ್ತ್ರದಿಂದ ಹಲವು ಬಾರಿ ಯಂತ್ರಕ್ಕೆ ಹೊಡೆದಿದ್ದ. ಅಷ್ಟಾದರೂ ಯಂತ್ರದಲ್ಲಿದ್ದ ಹಣವನ್ನು ಹೊರಗೆ ತೆಗೆಯಲು ಆಗಿರಲಿಲ್ಲ.  ಅದೇ ರಸ್ತೆಯಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ ಮೋಹನ್‌ಕುಮಾರ್ ಹಾಗೂ ಅನಂತ್‌ಕುಮಾರ್, ಶಬ್ದ ಕೇಳಿ ಘಟಕದೊಳಗೆ ಹೋಗಿದ್ದರು. ಪೊಲೀಸರನ್ನು ಕಂಡ ಆರೋಪಿ, ಅವರಿಬ್ಬರಿಗೆ ಮಾರಕಾಸ್ತ್ರದಿಂದ ಹೊಡೆದು ಪರಾರಿಯಾಗಲು ಯತ್ನಿಸಿದ್ದ.’

‘ಪೊಲೀಸರು, ಆರೋಪಿಯನ್ನು ಬೆನ್ನಟ್ಟಿ ಹಿಡಿದಿದ್ದರು. ದರೋಡೆಗೆ ಯತ್ನ ಹಾಗೂ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ಆರೋಪದಡಿ ನಮಶಿವಾಯನನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT