ಬೆಂಗಳೂರು: ರೈಲುಗಳಿಗೆ ಇಂಧನ ತುಂಬಿಸುವ ವ್ಯವಸ್ಥೆಯನ್ನು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗವು ಉನ್ನತೀಕರಿಸಿದೆ. ರೈಲುಗಳಿಗೆ ಸಿಬ್ಬಂದಿ ಬದಲು ಸ್ವಯಂ ಚಾಲಿತವಾಗಿ ಡೀಸೆಲ್ ತುಂಬಿಸುವ ವ್ಯವಸ್ಥೆಗೆ ಶುಕ್ರವಾರ ಚಾಲನೆ ನೀಡಿದೆ.
‘ರೈಲುಗಳ ಎಂಜಿನ್‌ಗಳು ಮತ್ತು ಪವರ್ ಕಾರ್‌ಗಳಿಗೆ (ಹವಾನಿಯಂತ್ರಿತ ಕೋಚ್‌ಗಳಿಗೆ) ಈ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಮಾಹಿತಿ ನೀಡಿದರು.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಲಿಮಿಟೆಡ್ (ಎಂಆರ್‌ಪಿಎಲ್) ಪಾಲುದಾರಿಕೆಯಲ್ಲಿ ಸ್ವಯಂಚಾಲಿತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಒಂದು ರೈಲಿನಲ್ಲಿ 5,000 ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದ್ದು, ಅದು ತುಂಬಿದ ತಕ್ಷಣ ಮಷಿನ್ ತನ್ನಷ್ಟಕ್ಕೆ ಬಂದ್ ಆಗುತ್ತದೆ. ಎಷ್ಟು ಲೀಟರ್ ತುಂಬಿಸಲಾಗಿದೆ? ದರ ಎಷ್ಟು ಎಂಬ ರಸೀದಿಯು ಕೂಡಲೇ ಮುದ್ರಿತವಾಗಿ ಬರುತ್ತದೆ ಎಂದು ತಿಳಿಸಿದರು.
ನೂತನ ತಂತ್ರಜ್ಞಾನದಿಂದಾಗಿ ಇಂಧನ ಬಳಕೆಯನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಸುಲಭವಾಗಿದೆ. ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇಂಧನ ಸಮಸ್ಯೆಯನ್ನು ಪತ್ತೆಹಚ್ಚಿ ಮಾಡಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳುವುದು ಸುಲಭವಾಗುತ್ತದೆ ಎಂದರು.
ಇಂಧನ ಬಳಕೆ ಮತ್ತು ಬಳಕೆಯ ಮಾದರಿಗಳ ನೈಜ ಸಮಯದ ಅಂಕಿಅಂಶವು ಇಂಧನ ಸಂಗ್ರಹಣೆ, ರೈಲು ಕಾರ್ಯಾಚರಣೆಗಳು ಮತ್ತು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇಂಧನ ದಾಸ್ತಾನು ಮತ್ತು ಬಳಕೆಯ ವಿವರಗಳು ನಿಖರವಾಗಿರುತ್ತದೆ. ಕೊರತೆ ಅಥವಾ ಮಿತಿಮೀರಿದ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದರು.
ಎಂಆರ್‌ಪಿಎಲ್‌ನ ಪ್ರಧಾನ ವ್ಯವಸ್ಥಾಪಕ ರವಿಶಂಕರ್ ಮಾತನಾಡಿ, ‘5 ಲಕ್ಷ ಲೀಟರ್‌ನ ಸಂಗ್ರಹದ ಎರಡು ಟ್ಯಾಂಕ್‌ಗಳು ಈ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ದಿನಕ್ಕೆ 40 ಸಾವಿರ ಲೀಟರ್ ಬಳಕೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪುರಿಯಾ, ಎಂಆರ್‌ಪಿಎಲ್ ಉಪ ಪ್ರಧಾನ ವ್ಯವಸ್ಥಾಪಕ ನಿಖಿಲ್ ಸಿಂಗ್, ಹಿರಿಯ ವಿಭಾಗೀಯ ಎಲೆಕ್ಟ್ರಿಕಲ್ ಎಂಜಿನಿಯರ್ ಸುರೇಂದ್ರನಾಥ್ ವಿ., ಎಂಆರ್‌ಪಿಎಲ್ ಮುಖ್ಯ ವ್ಯವಸ್ಥಾಪಕ ಪ್ರದೀಪ್ ತಿವಾರಿ, ಸಹಾಯಕ ಕಾರ್ಯನಿರ್ವಾಹಕ ರಾಜ್ ವರ್ಮಾ, ಮೋನಿಕಾ ನೇಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.