ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಗುಂಪು ಸೇರುವಂತಿಲ್ಲ: ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Last Updated 23 ಮಾರ್ಚ್ 2020, 3:19 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ವೈರಾಣು ಹರಡುವಿಕೆ ತಡೆಯಲು ಹಾಗೂ ಜನರ ಆರೋಗ್ಯದ ಹಿತದೃಷ್ಟಿಯಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದನ್ನು ಪ್ರತಿಯೊಬ್ಬರು ಪಾಲಿಸಬೇಕು. ಇಬ್ಬರು ಹಾಗೂ ಅದಕ್ಕಿಂತ ಹೆಚ್ಚು ಜನ ಗುಂಪು ಸೇರಬಾರದು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಷೇಧಾಜ್ಞೆ ಜಾರಿ ವೇಳೆ ನಾಲ್ಕು ಹಾಗೂ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಗುಂಪು ಸೇರಬಾರದೆಂಬ ನಿಯಮವಿತ್ತು. ಈಗ ಕೊರೊನಾ ವೈರಾಣು ವೇಗವಾಗಿ ಹರಡುತ್ತಿರುವುದರಿಂದ ಇಬ್ಬರು ಹಾಗೂ ಅದಕ್ಕಿಂತ ಹೆಚ್ಚು ಜನ ಒಟ್ಟಿಗೆ ಸೇರಬಾರದು ಎಂದು ಬದಲಾವಣೆ ಮಾಡಲಾಗಿದೆ’ ಎಂದರು.

‘ಜನರು ಅನಗತ್ಯವಾಗಿ ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಅಂಗಡಿ–ಮುಂಗಟ್ಟುಗಳನ್ನು ತೆರೆಯುವುದು ಹಾಗೂ ವಾತಾವರಣವನ್ನು ಕಲುಷಿತಗೊಳಿಸುವಂಥ ಎಲ್ಲ ರೀತಿಯ ಕೃತ್ಯಗಳನ್ನು ನಿಷೇಧಿಸಿದೆ. ಜನರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು’ ಎಂದು ಹೇಳಿದರು.

500ಕ್ಕೂ ಹೆಚ್ಚು ತಂಡ ರಚನೆ: ‘ವಿದೇಶದಿಂದ ಬಂದು ನಗರಲ್ಲಿ ನೆಲೆಸಿ ರುವರ ಮೇಲೆ ನಿಗಾ ಇರಿಸಲು 500ಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ. ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ಈ ತಂಡದಲ್ಲಿದ್ದಾರೆ’ ಎಂದು ಹೇಳಿದರು.

‘ಮಾ. 8ರಿಂದ ಮಾ.19ರವರೆಗೆ ವಿದೇಶದಿಂದ ರಾಜ್ಯಕ್ಕೆ 43 ಸಾವಿರ ಮಂದಿ ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅರ್ಜಿಯೊಂದರಲ್ಲಿ ಸ್ವವಿವರ ಹಾಗೂ ವಿಳಾಸ ಭರ್ತಿ ಮಾಡಿಕೊಟ್ಟಿದ್ದಾರೆ. ಅದರಲ್ಲಿ 20 ಸಾವಿರ ಮಂದಿಯ ವಿಳಾಸವನ್ನು ಈಗಾಗಲೇ ಗುರುತಿಸಲಾಗಿದೆ. ಇನ್ನುಳಿದವರ ವಿಳಾಸ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದರು.

ವ್ಯಕ್ತಿ ನಡುವೆ ಅಂತರವಿರಲಿ: ‘ಜನರ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿ ಪೊಲೀಸರ ಮೇಲೂ ಇದೆ. ಹೀಗಾಗಿ ಪೊಲೀಸರು ರೂಪಿಸುವ ನಿಯಮಗಳನ್ನು ಜನತೆ ಪಾಲಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಕೊರೊನಾ ವೈರಾಣು ಹರಡುವಿಕೆಯನ್ನು ತಪ್ಪಿಸಬೇಕು’ ಎಂದು ಕಮಿಷನರ್ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT