ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿಗೆ ಬದ್ಧ: ಯಡಿಯೂರಪ್ಪ ಭರವಸೆ

2018ನೇ ಸಾಲಿನ ವಿವಿಧ ಪ್ರಶಸ್ತಿಗಳು ಪ್ರದಾನ
Last Updated 13 ನವೆಂಬರ್ 2019, 23:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಸಾಧಕರಿಗೆ 2018ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

‘ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನರಾದಸ್ವಾತಂತ್ರ್ಯ ಹೋರಾಟಗಾರ ಹೆಚ್‌.ಎಸ್. ದೊರೆಸ್ವಾಮಿ, ‘ಸರೋಜಿನಿ ಮಹಿಷಿ ವರದಿಯನ್ನು ಎಲ್ಲ ರಾಜ್ಯಗಳು ಒಪ್ಪಿಕೊಳ್ಳುವಂತಹದ್ದಾಗಿದ್ದೆ. ಮಾತೃಭಾಷೆ ಆಡುವವರಿಗೆ ಉದ್ಯೋಗದಲ್ಲಿ ಅವಕಾಶ ನೀಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಕನ್ನಡಿಗರಿಗೆ ಈ ನಾಡಿನಲ್ಲಿ ಶೇ 80 ರಷ್ಟು ಉದ್ಯೋಗ ಮೀಸಲಿಡಬೇಕು ಎಂದು ಒತ್ತಾಯಿಸಿ. ಈ ವರದಿ ಜಾರಿಗೊಳಿಸಿದಲ್ಲಿ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸರೋಜಿನಿ ಮಹಿಷಿ ವರದಿ ಜಾರಿಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ’ ಎಂದರು.

‘ನಾಡಿನ ಅಂತಃಸತ್ವವನ್ನು ಅಳೆಯುವುದು ಅಲ್ಲಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ. ಜಾಗತಿಕರಣ, ಉದಾರಿಕರಣದಿಂದಾಗಿ ಜ್ಞಾನದ ಪರೀಧಿ ವಿಸ್ತರಣೆಯ ನೆಪದಲ್ಲಿ ಅನ್ಯಭಾಷೆಗಳು ನಾಡನ್ನು ಪ್ರವೇಶಿಸಿವೆ. ಮಾತೃಭಾಷೆ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಆಡಳಿತದಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ಸಿಗುವ ಜತೆಗೆ ಮನೆಯಲ್ಲಿ ಹಾಗೂ ಕಲಿಕೆಯಲ್ಲೂ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘ಸಚಿವನಾದ ಬಳಿಕ‌ ಎರಡು ವಿಷಯಗಳಲ್ಲಿ‌ ವಿವಾದವನ್ನು ಸೃಷ್ಟಿ ಮಾಡಲಾಯಿತು. ಜಾತಿ, ಭಾಷೆ ಹಾಗೂ ಸಮಾಜವನ್ನು ಒಡೆಯುವವರಿಗೆ ಮನೆಹಾಳರು ಎಂಬ ಪದವನ್ನು ಪ್ರಯೋಗ ಮಾಡಿದ್ದೆ. ಯಾವುದೇ ನಿರ್ದಿಷ್ಟ ವ್ಯಕ್ತಿ, ಸಂಘಟನೆಯನ್ನುಉದ್ದೇಶಿಸಿ ಹೇಳಿರಲಿಲ್ಲ. ಅದೇ ರೀತಿ, ಬಾವುಟದ ವಿಚಾರವಾಗಿಯೂ ವಿವಾದ ಸೃಷ್ಟಿಸಲಾಯಿತು.ಹಳದಿ, ಕೆಂಪು ಬಣ್ಣದ ಧ್ವಜವನ್ನು ನಾಡಿನ ಜನರು ಒಪ್ಪಿದ್ದಾರೆ. ಆದರೆ‌, ಸಂವಿಧಾನದಲ್ಲಿ ದೇಶಕ್ಕೆ ಒಂದೇ ಧ್ವಜ ಎಂದು ಸೂಚಿಸಲಾಗಿದೆ.‌ ನಾನು ಕೂಡಾ ಇದನ್ನೇ ಹೇಳಿದ್ದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನ್ನಡದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬೆಳೆದಿದ್ದು, ಕೆಲವೊಮ್ಮೆ ಸತ್ಯದ ಮಾತುಗಳೂ ವಿವಾದವಾಗುತ್ತವೆ. ಹಾಗಂತ, ಸತ್ಯವನ್ನು ಹೇಳಲು ಹಿಂಜರಿಯುವುದಿಲ್ಲ’ ಎಂದು ತಿಳಿಸಿದರು.

ಗೈರು: ‘ಸಂಗೋಳ್ಳಿ ರಾಯಣ್ಣ ಪ್ರಶಸ್ತಿ’ಗೆ ಆಯ್ಕೆಯಾಗಿದ್ದ ಎಸ್.ಆರ್. ಹಿರೇಮಠ ಹಾಗೂ ‘ಅಕ್ಕಮಹಾದೇವಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದದು. ಸರಸ್ವತಿ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT