ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿ ಮೂಡಿಸಿದರೆ ಸೈಬರ್‌ ವಂಚನೆ ತಡೆಗಟ್ಟಲು ಸಾಧ್ಯ: ಥಾವರಚಂದ್ ಗೆಹಲೋತ್‌ ಸಲಹೆ

20 ಸಾವಿರ ಸೈಬರ್‌ ವಂಚನೆ ಪ್ರಕರಣ ದಾಖಲು: ದಯಾನಂದ್‌
Published 2 ಸೆಪ್ಟೆಂಬರ್ 2023, 16:05 IST
Last Updated 2 ಸೆಪ್ಟೆಂಬರ್ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಸೈಬರ್‌ ವಂಚನೆ ಪ್ರಕರಣಗಳ ವಿರುದ್ಧ ಅರಿವು ಮೂಡಿಸುವುದರಿಂದ ಸೈಬರ್‌ ಅಪರಾಧ ಪ್ರಕರಣ ತಡೆಗಟ್ಟಲು ಸಾಧ್ಯವಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಸಲಹೆ ನೀಡಿದರು.

ಕೆಂಗೇರಿಯ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಎರಡು ದಿನ ನಡೆದ ಸೈಬರ್‌ ಭದ್ರತೆ ಕುರಿತ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

‘ಜನಸಾಮಾನ್ಯರ ಬದುಕಿನಲ್ಲಿ ಇಂದು ಇಂಟರ್‌ನೆಟ್‌ ಹಾಸುಹೊಕ್ಕಾಗಿದೆ. ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನದ ಪ್ರಭಾವವು ಹೆಚ್ಚಾಗಿದೆ. ಅದೇ ರೀತಿ ಅದರ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ ವಹಿಸುವುದೂ ಅಗತ್ಯ’ ಎಂದು ಹೇಳಿದರು.

ಐಸಿಟಿ ಸಿಇಒ ಹರಿ ಬಾಲಚಂದ್ರನ್‌ ಮಾತನಾಡಿ, ‘ಐಟಿ ಕ್ಷೇತ್ರವು ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ತಕ್ಷಣವೇ 3 ಲಕ್ಷದಷ್ಟು ಸೈಬರ್‌ ಭದ್ರತಾ ವೃತ್ತಿಪರರ ಅಗತ್ಯವಿದೆ’ ಎಂದು ಹೇಳಿದರು.

ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಡಿ.ಅಶ್ವಿನ್‌ಗೌಡ ಮಾತನಾಡಿ, ‘ಹಲವು ಕ್ಷೇತ್ರಗಳಿಗೆ ಕೌಶಲವುಳ್ಳ ಯುವಕರ ಅಗತ್ಯವಿದೆ. ನಿಗಮವು ಪ್ರತಿಭಾನ್ವಿತ ಯುವಕರಿಗೆ ಕೌಶಲ ಕಲಿಸುವ ಯೋಜನೆ ರೂಪಿಸಿದೆ’ ಎಂದು ಹೇಳಿದರು.

ವಿ.ವಿ ಕುಲಪತಿ ಸಿ.ಸಿ. ಜೋಸೆಫ್‌ ಮಾತನಾಡಿ, ವೃತ್ತಿಪರರಿಗೆ ಅನುಕೂಲ ಆಗುವಂತೆ ಸೈಬರ್‌ ಶಿಕ್ಷಣವನ್ನು ಸಂಸ್ಥೆ ಕಲಿಸುತ್ತಿದೆ ಎಂದು ಹೇಳಿದರು.

ಅದಕ್ಕೂ ಮೊದಲು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ್‌ ವಿಚಾರ ಸಂಕಿರಣ ಉದ್ಘಾಟಿಸಿದ್ದರು.

‘ವೈಜ್ಞಾನಿಕ ಹಾಗೂ ತಂತ್ರಜ್ಞಾನ ಆವಿಷ್ಕಾರವನ್ನು ಸಮಾಜವು ಸ್ವಾಗತಿಸಿದೆ. ಅಷ್ಟೇ ವೇಗದಲ್ಲಿ ಸೈಬರ್‌ ಅಪರಾಧಗಳು ನಡೆಯುತ್ತಿವೆ. ಬೆಂಗಳೂರು ನಗರದಲ್ಲೇ 20 ಸಾವಿರ ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿವೆ’ ಎಂದು ದಯಾನಂದ ಹೇಳಿದರು.

ತರಬೇತಿ ವಿಭಾಗದ ಡಿಜಿಪಿ ಪಿ.ರವೀಂದ್ರನಾಥ್‌ ಮಾತನಾಡಿ, ‘ಮಕ್ಕಳನ್ನು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ದೂರ ಇರಿಸಬೇಕು’ ಎಂದು ಎಚ್ಚರಿಸಿದರು.

ಸಂಚಾರ ವಿಭಾಗದ ಜಂಟಿ ಕಮಿಷನರ್‌ ಎಂ.ಎನ್‌.ಅನುಚೇತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT