ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೂಗುಚ್ಛ ನಿಷೇಧ ಮೂರ್ಖತನದ ಪರಮಾವಧಿ’: ಆರ್.ಕೆ. ನಲ್ಲೂರು ಪ್ರಸಾದ್ ಆಕ್ರೋಶ

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಆರ್.ಕೆ. ನಲ್ಲೂರು ಪ್ರಸಾದ್ ಆಕ್ರೋಶ
Last Updated 14 ಆಗಸ್ಟ್ 2021, 16:36 IST
ಅಕ್ಷರ ಗಾತ್ರ

ಬೆಂಗಳೂರು: ‘ಸಭೆ, ಸಮಾರಂಭಗಳಲ್ಲಿ ಹೂಗುಚ್ಛ–ಹೂವಿನ ಹಾರಗಳನ್ನು ಬಳಸಬಾರದೆಂಬ ಸರ್ಕಾರದ ಆದೇಶ ಮೂರ್ಖತನದ ಪರಮಾವಧಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಆರ್.ಕೆ. ನಲ್ಲೂರು ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಬಿ.ಎಂ.ಶ್ರೀ. ಪ್ರತಿಷ್ಠಾನ ನಗರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಲೇಖಕಿ ಪ್ರೇಮಾ ಭಟ್ ಅವರಿಗೆ ‘ಡಾ. ವಿಜಯಾ ಸುಬ್ಬರಾಜ್ ಗಣ್ಯ ಲೇಖಕಿ ಪ್ರಶಸ್ತಿ’ ಹಾಗೂ ಸಾಹಿತಿಚಿದಾನಂದ ಸಾಲಿ ಅವರಿಗೆ ‘ಪ್ರೊ.ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಒಳಗೊಂಡಿವೆ.

‘ನಾವು ಪುಸ್ತಕಗಳ ವಿರೋಧಿಗಳಲ್ಲ. ಸಭೆ–ಸಮಾರಂಭಗಳಲ್ಲಿ ಎರಡೆರಡು ಪುಸ್ತಕಗಳನ್ನು ಬೇಕಾದರೂ ನೀಡಲಿ. ಆದರೆ, ಹೂಗುಚ್ಛ–ಹೂವಿನ ಹಾರಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ನೀಡಬಾರದು ಎನ್ನುವುದು ಸರಿಯಲ್ಲ. ಈ ನೆಲವನ್ನೇ ನಂಬಿ ರೈತರು ಬೆಳೆಯುವ ಹೂವು ಕೂಡ ಪುಸ್ತಕದಷ್ಟೇ ಮುಖ್ಯ. ಹೂವಿನ ಹಾರ–ಹೂಗುಚ್ಛ ನಿಷೇಧಿಸಲು ರೈತರು ಸರ್ಕಾರಕ್ಕೆ ಕಂದಾಯ ಕಟ್ಟುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಚಿಕ್ಕ ವಯಸ್ಸಿನಿಂದಲೂ ನನಗೆ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ. ವಿಜ್ಞಾನ ವಿಷಯ ವ್ಯಾಸಂಗ ಮಾಡುವುದಿಲ್ಲವೆಂದು ಹೇಳಿ, ನಾಲ್ಕು ವರ್ಷಗಳು ದನ ಕಾಯುವ ಕೆಲಸ ಮಾಡಿದೆ. ಆ ವೇಳೆಯಲ್ಲೇ ನಾನು ಸಣ್ಣ ಕವಿತೆಗಳನ್ನು ಬರೆದೆ. ಕನ್ನಡದ ಮೇಲಿನ ಒಲವು ನನ್ನನ್ನು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು’ ಎಂದರು.

ನಿವೃತ್ತ ಪ್ರಾಧ್ಯಾಪಕಿ ಡಿ. ಮಂಗಳಾ ಪ್ರಿಯದರ್ಶಿನಿ ಮಾತನಾಡಿ, ‘ಬೃಹತ್ ಕೃತಿಗಳನ್ನು ಬರೆಯುವುದಕ್ಕಿಂತ ಸಣ್ಣ ಕತೆಗಳನ್ನು ರಚಿಸುವುದು ಕಷ್ಟದ ಕೆಲಸ. ಆದರೆ, ಪ್ರೇಮಾ ಭಟ್ ಅವರು ಕತೆಗಳನ್ನು ಕಲಾತ್ಮಕವಾಗಿ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿದಾನಂದ ಸಾಲಿ ಅವರು ಕತೆ, ಕವಿತೆ, ಗಜಲ್, ನಾಟಕ, ಸಂಶೋಧನೆ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೊಡುಗೆ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT