ಶನಿವಾರ, ಫೆಬ್ರವರಿ 29, 2020
19 °C
ಬೆಂಗಳೂರು ನಗರದಲ್ಲಿ ಸುಸ್ಥಿರ ಸಂಚಾರ ಸಂವಾದದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಹೇಳಿಕೆ

2022ರ ಬಳಿಕ ಇ–ಬಸ್‌ ಮಾತ್ರ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) 2022ರ ಬಳಿಕ ಎಲೆಕ್ಟ್ರಿಕ್‌ ಬಸ್‌ಗಳನ್ನು ಮಾತ್ರ ಖರೀದಿ ಮಾಡಲಿದೆ. 2030ರ ವೇಳೆಗೆ ಹಸಿರು ಇಂಧನ ಬಳಸುವ ಬಸ್‌ಗಳನ್ನು ಮಾತ್ರ ಹೊಂದಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.

‘ಬೆಂಗಳೂರು ನಗರದಲ್ಲಿ ಸುಸ್ಥಿರ ಸಂಚಾರ’ ಕುರಿತು ಬಿ–ಪ್ಯಾಕ್‌ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘2030ರ ವೇಳೆಗೆ 15 ಸಾವಿರ ಬಸ್‌ಗಳನ್ನು ಹೊಂದುವ ಗುರಿ ಇದೆ. ಈಗಾಗಲೇ ಸಂಸ್ಥೆಯು 10 ಸಾವಿರ ಬಸ್‌ಗಳನ್ನು ಹೊಂದಿರಬೇಕಿತ್ತು. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿಲ್ಲ. ಪ್ರತಿ ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ₹2 ಕೋಟಿ ಬೇಕು. ಸರ್ಕಾರ ಆರ್ಥಿಕ ನೆರವು ನೀಡದ ಹೊರತು ಇವುಗಳ ಖರೀದಿ ಸಾಧ್ಯವಿಲ್ಲ‌’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಎಂಟಿಸಿಯ ಮುಖ್ಯ ಮೆಕ್ಯಾನಿಕಲ್‌ ಎಂಜಿನಿಯರ್‌ ಎಂ.ಎನ್‌.ಶ್ರೀನಿವಾಸ್‌, ‘ಈ ಆರ್ಥಿಕ ವರ್ಷದಲ್ಲಿ ನಿರ್ವಹಣಾ ವೆಚ್ಚ (ಅಪೆಕ್ಸ್) ಮಾದರಿಯಲ್ಲಿ 12 ಮೀ ಉದ್ದದ 300 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಯ ಟೆಂಡರ್‌ ಪ್ರಕ್ರಿಯೆ ಕೊನೆಯ ಹಂತದ ತಲುಪಿದೆ. ಒಲೆಕ್ಟ್ರಾ ಕಂಪನಿ ಈ ಬಸ್‌ಗಳನ್ನು ಪೂರೈಸಲಿದ್ದು, ದರ ಸಂಧಾನ ನಡೆಯುತ್ತಿದೆ.  ಪ್ರತಿ ಬಸ್‌ಗೆ ಕೇಂದ್ರ ಸರ್ಕಾರ ₹55 ಲಕ್ಷ ಸಬ್ಸಿಡಿ ನೀಡಲಿದೆ’ ಎಂದರು.

‘ಎಲೆಕ್ಟ್ರಿಕ್‌ ಬಸ್‌ಗಳು ನಿತ್ಯ ಹೆಚ್ಚು ದೂರ ಸಂಚರಿಸಿದಷ್ಟೂ ಅವುಗಳ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ನಿತ್ಯ ಸರಾಸರಿ 200 ಕಿ.ಮೀ.ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದರೆ ಮಾತ್ರ ಅವು ಲಾಭ ತರಬಲ್ಲವು. ಅವುಗಳನ್ನು ವಿಮಾನ ನಿಲ್ದಾಣ ಸಂಪರ್ಕ ಸಾರಿಗೆಗೆ ಬಳಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಮೆಟ್ರೊ ಸಂಪರ್ಕ ಸಾರಿಗೆ ಸಲುವಾಗಿ 90 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ 15 ದಿನಗಳಲ್ಲಿ ಟೆಂಡರ್‌ ಕರೆಯಲಿದ್ದೇವೆ. ಈ ಬಸ್‌ಗಳಿಗೆ ಕೇಂದ್ರ ಸರ್ಕಾರ ₹50 ಲಕ್ಷ ಸಬ್ಸಿಡಿ ನೀಡಲಿದೆ’ ಎಂದರು.

ಬಾಷ್‌ ಸಂಸ್ಥೆಯ ನಗರ ಸಂಚಾರ ವಿಭಾಗದ ಮುಖ್ಯಸ್ಥ ಪವನ್‌, ‘ಈಗಿನ ಬಸ್‌ಗಳಿಗೆ ಹೋಲಿಸಿದರೆ ಬಿಎಸ್‌–6 ಮಾದರಿಯ ಬಸ್‌ಗಳಿಂದ ಮಾಲಿನ್ಯ ಪ್ರಮಾಣ ಶೇ 80ರಷ್ಟು ಕಡಿಮೆಯಾಗಲಿದೆ. ದುಬಾರಿ ಎಲೆಕ್ಟ್ರಿಕ್ ಬಸ್‌ಗಳಿಗೆ ಹೂಡಿಕೆ ಮಾಡುವ ಬದಲು ಬಿಎಸ್‌–6 ಬಸ್‌ ಖರೀದಿಸುವುದು ಜಾಣ ನಡೆ’ ಎಂದರು.

ಲಿಥಿಯಂ ಸಂಸ್ಥೆಯ ಸಂಸ್ಥಾಪಕ ಸಂಜಯ್‌ ಕೃಷ್ಣನ್‌, ‘ಹಸಿರು ಇಂಧನ ಎಂಬ ಕಾರಣಕ್ಕೆ ಎಲೆಕ್ಟ್ರಿಕ್‌ ವಾಹನ ಖರೀದಿಗೆ ಯಾರೂ ಮುಂದೆ ಬರುವುದಿಲ್ಲ. ಅದು ಮಿತವ್ಯಯಕಾರಿ ಎಂಬುದನ್ನು ಮನದಟ್ಟಾದರೆ ಜನ ಖರೀದಿಸುತ್ತಾರೆ’ ಎಂದರು.

ಚಾರ್ಜಿಂಗ್‌ ಕೇಂದ್ರ ಶೀಘ್ರ ಆರಂಭ’
‘ನಗರದ 126 ಕಡೆ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿದೇಶ ಪ್ರವಾಸದಿಂದ ಮರಳಿದ ಬಳಿಕ ಇವುಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ’ ಎಂದು ಬೆಸ್ಕಾಂ ಉಪಪ್ರಧಾನ ವ್ಯವಸ್ಥಾಪಕ ಶ್ರೀನಾಥ್‌ ತಿಳಿಸಿದರು.

‘ಈ ಪೈಕಿ ದ್ವಿಚಕ್ರ ವಾಹನಗಳನ್ನು ಚಾರ್ಜ್ ಮಾಡಲು ಬಳಸುವ 26 ಡಿಸಿ ಚಾರ್ಜಿಂಗ್‌ ಕೇಂದ್ರಗಳು ಹಾಗೂ ಕಾರುಗಳ ಚಾರ್ಜಿಂಗ್‌ಗೆ ನೆರವಾಗುವ 100 ಎಸಿ ಚಾರ್ಜಿಂಗ್‌ ಕೇಂದ್ರಗಳು ಸೇವೆಗೆ ಲಭ್ಯವಾಗಲಿವೆ’ ಎಂದರು.

ಬಿಎಸ್‌– 4 ಮಾದರಿ 357 ಬಸ್‌ ಖರೀದಿ
‘ಏಪ್ರಿಲ್‌ ಬಳಿಕ ಬಿಎಸ್‌–4 ಮಾದರಿಯ ಬಸ್‌ ಖರೀದಿಗೆ ಅವಕಾಶ ಇಲ್ಲ. ಅಲ್ಲಿವರೆಗೆ ಬಿಎಸ್‌–4 ಮಾದರಿಯ 357 ಬಸ್‌ ಖರೀದಿಗೆ ಹಸಿರು ನ್ಯಾಯಮಂಡಳಿ ಅನುಮತಿ ನೀಡಿದೆ’ ಎಂದು ಶ್ರೀನಿವಾಸ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು