ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಲ ದೊರೆಯುತ್ತಿಲ್ಲ, ಸಂಕಷ್ಟ ತಪ್ಪಿಲ್ಲ’

‘ಬಡವರ ಬಂಧು’ ಯೋಜನೆ: ಸಾಲ ಮರುಪಾವತಿಸಿದವರಿಗೆ ಮತ್ತೆ ಸಿಗುತ್ತಿಲ್ಲ ಸೌಲಭ್ಯ
Last Updated 20 ಸೆಪ್ಟೆಂಬರ್ 2019, 20:21 IST
ಅಕ್ಷರ ಗಾತ್ರ

ಬೆಂಗಳೂರು:ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವರ್ತಕರಿಗೆ ಕಿರುಸಾಲ ನೀಡಲು ರೂಪಿಸಲಾಗಿರುವ ‘ಬಡವರ ಬಂಧು’ ಯೋಜನೆಯಡಿ ಈಗ ಸಾಲ ಸೌಲಭ್ಯ ದೊರಕುತ್ತಿಲ್ಲ. ಮೂರು ತಿಂಗಳ ಗಡುವಿನೊಳಗೆ ಸಾಲ ಮರುಪಾವತಿಸಿದರೂ, ಮತ್ತೆ ಸಾಲ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ದೂರುತ್ತಾರೆ.

ಯೋಜನೆ ಪ್ರಾರಂಭವಾದಾಗಿನಿಂದ ಈವರೆಗೆಬೆಂಗಳೂರು ನಗರ ಸಹಕಾರ ಬ್ಯಾಂಕ್‌ 536 ಫಲಾನುಭವಿಗಳಿಗೆ ₹35.65 ಲಕ್ಷ ಸಾಲ ನೀಡಲಾಗಿದೆ. ಈ ಪೈಕಿ, ₹29.22 ಲಕ್ಷ ಮರುಪಾವತಿಯಾಗಿದೆ. ಕೇವಲ ₹5.43 ಲಕ್ಷ ಬಾಕಿ ಉಳಿದಿದೆ.

‘ನಮ್ಮ ಸಂಘದ ಸದಸ್ಯತ್ವ ಪಡೆದಿರುವ ಬಹುತೇಕರು ಈ ಯೋಜನೆಯಡಿ ಸಾಲ ಪಡೆದಿದ್ದಾರೆ. ಈ ಪೈಕಿ, ಶೇ 95ರಷ್ಟು ಜನ ನಿಗದಿತ ಗಡುವಿನೊಳಗೆ ಸಾಲವನ್ನು ಮರುಪಾವತಿ ಮಾಡಿದ್ದಾರೆ. ಆದರೆ, ಈಗ ಮತ್ತೆ ಸಾಲ ಕೇಳಲು ಹೋದರೆ ಸಿಗುತ್ತಿಲ್ಲ’ ಎಂದುಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಇ.ಸಿ. ರಂಗಸ್ವಾಮಿ ಹೇಳಿದರು.

‘ಯೋಜನೆಯಡಿ ಸಾಲ ಪಡೆಯಲು ಬ್ಯಾಂಕ್‌ ಖಾತೆ ಇರಬೇಕು. ಈ ಖಾತೆ ಮಾಡಿಸಲು ಒಂದೆರಡು ದಿನ ಓಡಾಡಿಸುತ್ತಾರೆ. ಅಂದಿನ ದುಡಿಮೆ ಅಂದಿಗೆ ಎನ್ನುವಂತಿರುವ ನಮಗೆ ಕಷ್ಟವಾಗುತ್ತಿದೆ.ಸಾಲ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಿದರೆ ವ್ಯಾಪಾರಿಗಳಿಗೆ ಅನುಕೂಲ’ ಎಂದು ವಿಜಯನಗರದಲ್ಲಿ ಹಣ್ಣು ಮಾರುವ ಪರಮೇಶ್‌ ಹೇಳುತ್ತಾರೆ.

₹10 ಕೋಟಿ ಇದೆ: ‘ಸಹಕಾರ ಬ್ಯಾಂಕುಗಳಿಗೆ ಈ ಯೋಜನೆಯಡಿ ಸರ್ಕಾರ ₹10 ಕೋಟಿ ನೀಡಲಿದೆ. ಅಲ್ಲದೆ, ಕನಿಷ್ಠ 50 ಸಾವಿರ ಜನರಿಗೆ ಸಾಲ ನೀಡಬೇಕು ಎಂದು ಗುರಿಯನ್ನು ನಿಗದಿಪಡಿಸಲಾಗುವುದು’ ಎಂದು ಸಹಕಾರ ಸೊಸೈಟಿಗಳ ಹೆಚ್ಚುವರಿ ರಿಜಿಸ್ಟ್ರಾರ್‌ (ಸಾಲ) ಆರ್. ಶಿವಪ್ರಕಾಶ್‌ ಹೇಳಿದರು.

ಸಂಚಾರಿ ಘಟಕ: ಬ್ಯಾಂಕ್‌ಗೆ ಓಡಾಡುವುದಕ್ಕೆ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ, ಸಂಚಾರಿ ಘಟಕಗಳನ್ನು ಸ್ಥಾಪಿಸಲು ಚಿಂತನೆ ನಡೆದಿದೆ. ವ್ಯಾಪಾರಿಗಳಿರುವ ಬೀದಿ, ಸಂತೆಯಂತಹ ಸ್ಥಳಗಳಲ್ಲಿ ಈ ಘಟಕಗಳು ಕಾರ್ಯ ನಿರ್ವಹಿಸಲಿದ್ದು, ಸ್ಥಳದಲ್ಲಿಯೇ ಖಾತೆ ತೆರೆಯುವ, ಸಾಲ ವಿತರಿಸಲಿವೆ ಎಂದು ಶಿವಪ್ರಕಾಶ್‌ ತಿಳಿಸಿದರು.

**
ನಂತರ ಬನ್ನಿ ಅನ್ನುತ್ತಾರೆ
ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ನಿಂದ ₹10 ಸಾವಿರ ಸಾಲ ತೆಗೆದುಕೊಂಡು ಹೂವಿನ ವ್ಯಾಪಾರ ಮಾಡುತ್ತಿದ್ದೆ. ಈಗ ಸಾಲ ತೀರಿಸಿದ್ದೇನೆ. ಮತ್ತೆ ಕೇಳಿದರೆ ಸ್ವಲ್ಪ ದಿನಗಳ ನಂತರ ಬನ್ನಿ ಎನ್ನುತ್ತಿದ್ದಾರೆ.
-ಮುನಿಲಕ್ಷ್ಮಿ,ಇಸ್ರೊ ಲೇಔಟ್‌

**
ಸೂಚನೆ ಬಂದಿಲ್ಲ
ಟಿಫನ್‌ ಸೆಂಟರ್‌ ನಡೆಸುತ್ತಿರುವ ನಾನು ಬೆಂಗಳೂರು ಸಹಕಾರಿ ಬ್ಯಾಂಕ್‌ನ ಗೊಲ್ಲರಹಟ್ಟಿ ಶಾಖೆಯಿಂದ ₹8 ಸಾವಿರ ತೆಗೆದುಕೊಂಡು ಗಡುವಿನೊಳಗೆ ಪಾವತಿಸಿದ್ದೇನೆ. ಮತ್ತೆ ಸಾಲ ಕೇಳಿದರೆ, ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
-ಶಶಿಕುಮಾರ್‌,ಹೇರೋಹಳ್ಳಿ

**
ಕ್ರಮ ವಹಿಸಿಲ್ಲ
ಸರ್ಕಾರದಿಂದ ಸ್ಪಷ್ಟ ಆದೇಶ ಬಾರದ ಕಾರಣ ಸಾಲ ನೀಡಲಾಗುವುದಿಲ್ಲ ಎಂದು ಮಲ್ಲೇಶ್ವರ ಗುರು ರಾಘವೇಂದ್ರ ಬ್ಯಾಂಕ್‌ನವರು ಹೇಳಿದರು. ಈ ಸರ್ಕಾರ ಬಂದ ಮೇಲೆಯೂ ಈ ಬಗ್ಗೆ ಮನವಿ ಕೊಟ್ಟಿದ್ದೇವೆ. ಆದರೂ, ಯಾವುದೇ ಕ್ರಮ ವಹಿಸಿಲ್ಲ.
-ಕೇಶವಮೂರ್ತಿ,ತಿಪ್ಪಸಂದ್ರ ಮಾರ್ಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT