ಗುರುವಾರ , ಮೇ 26, 2022
23 °C

ಮತ್ತೆ ‘ಬೇಸಿಗೆ ಶಿಬಿರ’ದ ರಂಗು- ಬಾಲಭವನದಲ್ಲಿ ನಾಳೆಯಿಂದ ಶಿಬಿರ ನಡೆಸಲು ಸಿದ್ಧತೆ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೇಸಿಗೆ ರಜೆಯಲ್ಲಿರುವ ಚಿಣ್ಣರಿಗಾಗಿ ಬಾಲಭವನದ ‘ಬೇಸಿಗೆ ಶಿಬಿರ’ ಮತ್ತೆ ಬಂದಿದೆ. ಮೂರು ವರ್ಷಗಳಿಂದ ನಿಂತಿದ್ದ ಶಿಬಿರವು ಏಪ್ರಿಲ್‌ 21ರಿಂದ ಆರಂಭವಾಗಲಿದೆ.

ಕಬ್ಬನ್‌ ಉದ್ಯಾನದಲ್ಲಿರುವ ಬಾಲಭವನ ಮಕ್ಕಳ ಆಕರ್ಷಣೆ ಕೇಂದ್ರ. ಬೇಸಿಗೆ ಬಂತೆಂದರೆ, ಇಲ್ಲಿ ಪ್ರತಿನಿತ್ಯ ಚಿಣ್ಣರ ಕಲರವ ಮೊಳಗುತ್ತಿತ್ತು. ಬಾಲಭವನದ ವತಿಯಿಂದ ಮಕ್ಕಳಿಗೆಂದೇ ಬೇಸಿಗೆ ಯಲ್ಲಿ ವಿಶೇಷ ಶಿಬಿರ ಆಯೋಜಿಸಲಾಗುತ್ತಿತ್ತು.

ಕೋವಿಡ್‌ನ ಅಡ್ಡಿಯೂ ಸೇರಿದಂತೆ ಹಲವು ಕಾರಣಗಳಿಂದ ಎರಡು ವರ್ಷಗಳಲ್ಲಿ ಶಿಬಿರ ಆಯೋಜನೆ ಸಾಧ್ಯವಾಗಿರಲಿಲ್ಲ. ಇದರಿಂದ ಚಿಣ್ಣರಿಲ್ಲದೆ ಭಣಗುಡುತ್ತಿದ್ದ ಬಾಲಭವನದಲ್ಲಿ ಮತ್ತೆ ಮಕ್ಕಳ ಆಟದ ಕೇಕೆ ಕೇಳಿ ಬರಲಿದೆ.

ಬಾಲಭವನದವರು ಈ ಬಾರಿ ಬೇಸಿಗೆ ಶಿಬಿರಕ್ಕೆ ಬರುವ ಮಕ್ಕಳನ್ನು ರಂಜಿಸಲು ವಿಶೇಷ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಒಟ್ಟು 20 ದಿನಗಳವರೆಗೆ ಶಿಬಿರ ನಡೆಯಲಿದೆ. 

‘ಶಿಬಿರದಲ್ಲಿ ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಸಮೂಹ ನೃತ್ಯ, ಸಮೂಹ ಗೀತೆ, ಕರಾಟೆ, ಯೋಗ, ತಬಲಾ ವಾದನ, ಕೀಬೋರ್ಡ್‌, ಯಕ್ಷಗಾನ, ರಂಗ ತರಬೇತಿ, ಆಭರಣ ತಯಾರಿ, ಮೆಹೆಂದಿ, ಮಡಿಕೆ ಮೇಲೆ ಚಿತ್ರ ರಚನೆ ಸೇರಿದಂತೆ ವಿವಿಧ ಕಲೆಗಳ ಕುರಿತು ಅನುಭವಿ ಬೋಧಕರಿಂದಲೇ ತರಬೇತಿ ನೀಡಲಿದ್ದೇವೆ’ ಎಂದು ಜವಾಹರ ಬಾಲಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬ್ಬನ್‌ ಉದ್ಯಾನದ ಬಾಲಭವನವೂ ಸೇರಿದಂತೆ ರಾಜಾಜಿನಗರ, ಎಚ್‌.ಎಸ್‌.ಆರ್.ಬಡಾವಣೆ ಹಾಗೂ ಕೋಲ್ಸ್‌ ಪಾರ್ಕ್‌ನಲ್ಲಿರುವ ‘ಮಿನಿ ಬಾಲಭವನ’ಗಳಲ್ಲಿಯೂ ಶಿಬಿರ ನಡೆಯಲಿದೆ’ ಎಂದು ಹೇಳಿದರು.

‘5ರಿಂದ 16 ವರ್ಷದೊಳಗಿನ ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗವಹಿಸಬಹುದು. 5ರಿಂದ 7 ವರ್ಷ, 8ರಿಂದ 12 ವರ್ಷ ಹಾಗೂ 13ರಿಂದ 16 ವರ್ಷದ ಮಕ್ಕಳಿಗೆ ಶಿಬಿರದಲ್ಲಿಪ್ರತ್ಯೇಕವಾದ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುವುದು. ಶಿಬಿರಕ್ಕೆ ನೋಂದಣಿಗಾಗಿ ಆಸಕ್ತರು ಬಾಲಭವನದ ಕಚೇರಿ ಅಥವಾ ದೂರವಾಣಿ ಸಂಖ್ಯೆ 080–22864189 ಅನ್ನು ಸಂಪರ್ಕಿಸಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು