ಬೆಂಗಳೂರು: ಹುಟ್ಟುತ್ತಾ ಹುಲ್ಲಾದ, ಬೆಳೆಯುತ್ತಾ ಮರವಾದ, ಕಜ್ಜಾಯದ ಬುಟ್ಟಿಯಾದ, ಹತ್ತುವವರಿಗೆ ಏಣಿಯಾದ, ಸತ್ತವರಿಗೆ ಚಟ್ಟವಾದ ಬಿದಿರನ್ನು ಬೆಂಗಳೂರಿನಲ್ಲಿಯೂ ನಳನಳಿಸುವಂತೆ ಮಾಡುವ ಕನಸು ಗರಿಗೆದರಿದೆ. ಬಿದಿರು ಬೆಳೆಸುವ ಮತ್ತು ಬಳಸುವ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಬಿದಿರಿನಿಂದ ಆಕರ್ಷಕವಾಗಿ ಒಳವಿನ್ಯಾಸ ಮಾಡಿರುವುದು ವಿಶ್ವಮಟ್ಟದಲ್ಲಿ ಗಮನಸೆಳೆಯಿತು. ಅತಿ ಭದ್ರತೆಯ, ಅತಿ ಸೂಕ್ಷ್ಮ ಪ್ರದೇಶವಾಗಿರುವ ವಿಮಾನ ನಿಲ್ದಾಣದಲ್ಲಿಯೇ ಬಿದಿರು ಬಳಸಬಹುದಾದರೆ, ಮೆಟ್ರೊ ನಿಲ್ದಾಣಗಳಲ್ಲಿ, ಕಚೇರಿಗಳಲ್ಲಿ ಯಾಕೆ ಬಳಸಬಾರದು ಎಂಬ ಪ್ರಶ್ನೆ ಯನ್ನು ಬಿದಿರು ಸೊಸೈಟಿ ಆಫ್ ಇಂಡಿಯಾ (ಬಿಎಸ್ಐ), ಬಿಬಿಎಂಪಿ ಮತ್ತು ಬಿಎಂಆರ್ಸಿಎಲ್ ಎದುರು ಇಟ್ಟಿತು. ಬಿಎಸ್ಐ ಮಾತಿಗೆ ಎರಡೂ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿದವು. ಈಗ ‘ಮೆಟ್ರೊ ವ್ಯಾಪ್ತಿ‘ಯಲ್ಲಿ ಬಿದಿರು ನೆಡುವ, ಬಿದಿರಿನಿಂದ ಬಿಬಿಎಂಪಿ ಕಚೇರಿ, ಮೆಟ್ರೊ ನಿಲ್ದಾಣಗಳನ್ನು ವಿನ್ಯಾಸಗೊಳಿಸುವ ಯೋಜನೆಗಳು ರೂಪುಗೊಂಡಿವೆ.

ಪ್ರಾಥಮಿಕವಾಗಿ, ಬಿಬಿಎಂಪಿಯ ಅರಣ್ಯ ವಿಭಾಗದ ಕಚೇರಿಯ ಒಳಾಂಗಣ ವಿನ್ಯಾಸವನ್ನು ಬಿದಿರಿನಿಂದ ಮಾಡಲು ಯೋಜಿಸಲಾಗಿದೆ. ‘ನಮ್ಮ ಮೆಟ್ರೊ’ದ ಪಾಟರಿ ಟೌನ್ ಮತ್ತು ಗೊಟ್ಟಿಗೆರೆ ನಿಲ್ದಾಣಗಳನ್ನು ಬಿದಿರಿನಿಂದ ವಿನ್ಯಾಸಗೊಳಿಸಬೇಕು ಎಂದು ಬಿದಿರು ಸೊಸೈಟಿ ಬೇಡಿಕೆ ಇಟ್ಟಿದೆ. ಮೊದಲ ಹಂತದಲ್ಲಿ ಬಿಎಂಆರ್ಸಿಎಲ್, ಪಾಟರಿ ಟೌನ್ ಮೆಟ್ರೊ ನಿಲ್ದಾಣವನ್ನು ಬಿದಿರಿನ ಅಲಂಕಾರದೊಂದಿಗೆ ನಿರ್ಮಿಸಲು ನಿರ್ಧರಿಸಿದೆ.

ಮೆಟ್ರೊ ಮಾರ್ಗದಲ್ಲಿ ಅವಕಾಶ ಇರುವಲ್ಲೆಲ್ಲ ಬಿದಿರು ಬೆಳೆಯಲು ಬಿದಿರು ಸೊಸೈಟಿ ಕೇಳಿಕೊಂಡಿದೆ. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಮಾರತ್ಹಳ್ಳಿಯಲ್ಲಿ ಎರಡು ಕಿಲೋ ಮೀಟರ್ನಷ್ಟು ಉದ್ದಕ್ಕೆ ಮೆಟ್ರೊ ಮಾರ್ಗದ ಅಡಿಯಲ್ಲಿ ಬಿದಿರು ಬೆಳೆಸುವ ಯೋಜನೆ ರೂಪಿಸಲಾಗಿದೆ. ಇಲ್ಲಿ 650 ಬಿದಿರಿನ ಗಿಡಗಳು ಬೆಳೆಯಲಿವೆ. ಬನ್ನೇರುಘಟ್ಟ ರಸ್ತೆಯಲ್ಲಿ ಜಯದೇವ ಆಸ್ಪತ್ರೆಯಿಂದ ಮುಂದಕ್ಕೆ ಮೀನಾಕ್ಷಿ ದೇವಸ್ಥಾನದವರೆಗೆ ಮೆಟ್ರೊ ಮಾರ್ಗದ ಅಡಿಯಲ್ಲಿ ಬಿದಿರು ಬೆಳೆಸುವ ಪ್ರಸ್ತಾವ ಕೂಡ ಇದೆ.

30 ಸಾವಿರ ಗಿಡ: ನಗರದ ಪಾರ್ಕ್ಗಳಲ್ಲಿ, ಕೆರೆಗಳ ಸುತ್ತ ಇರುವ ನಡಿಗೆ ಪಥದ ಇಕ್ಕೆಲಗಳಲ್ಲಿ ಮುಂದಿನ ಮಳೆಗಾಲದಲ್ಲಿ 30 ಸಾವಿರ ಬಿದಿರು ಗಿಡ ನೆಡುವ ಯೋಜನೆಯನ್ನು ಬಿದಿರು ಸೊಸೈಟಿ ಹಾಕಿಕೊಂಡಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು, ಗ್ರೀನ್ ಸ್ಕೂಲ್ನ ವಿದ್ಯಾರ್ಥಿಗಳು ಗಿಡಗಳನ್ನು ನೆಡಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಪುನತಿ ಶ್ರೀಧರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಗರದಲ್ಲಿ ಯಾವ ಬಿದಿರು?

ಮುಳ್ಳುಬಿದಿರು ಉಳಿದವುಗಳಿಗಿಂತ ಬಲಿಷ್ಠವಾಗಿದೆ ಮತ್ತು ಎತ್ತರಕ್ಕೆ ಬೆಳೆಯುತ್ತದೆ. ಆದರೆ, ಅದನ್ನು ನೆಟ್ಟು ಬೆಳೆಸುವುದು ಕಷ್ಟ. ಹಾಗಾಗಿ ನಗರಗಳಲ್ಲಿ ಮುಳ್ಳು ಬಿದಿರು ಬೆಳೆಸುವುದಿಲ್ಲ. 6 ರಿಂದ 7 ಅಡಿ ಹಾಗೂ 15ರಿಂದ 20 ಅಡಿ ಬೆಳೆಯುವ ಬಿದಿರು ಪ್ರಭೇದಗಳನ್ನು ಮಾತ್ರ ಮೆಟ್ರೊ ಎತ್ತರಿಸಿದ ಮಾರ್ಗಗಳ ಅಡಿಯಲ್ಲಿ ಬೆಳೆಸಲಾಗುತ್ತದೆ.

ಪರಿಸರಕ್ಕೆ ಪೂರಕವಾದ ಬಿದಿರು, ಅಂದವನ್ನು ಹೆಚ್ಚಿಸುವ ಬಿದಿರು ನಗರದಲ್ಲಿ ಹೆಚ್ಚುತ್ತಿರುವುದು, ಮನೆಗಳ ಬಳಕೆಯಲ್ಲಿಯೂ ಉಪಯೋಗವಾಗುತ್ತಿರುವುದು ಉತ್ತಮ ಬೆಳವಣಿಗೆ. ಕಟ್ಟಡ ನಿರ್ಮಾಣ ಮಾಡುವಾಗ ಅಟ್ಟಣಿಗೆಯಾಗಿ ಬಿದಿರನ್ನು ಬಳಕೆ ಮಾಡುವುದನ್ನು ಹೆಚ್ಚಿಸಬೇಕು. ಚರಂಡಿ ನಿರ್ಮಾಣದ ವೇಳೆ ಸಿಮೆಂಟ್ ಹಾಕುವಾಗ ಬಿದಿರು ಬಳಕೆ ಮಾಡಬಹುದು. ನಿರ್ಮಾಣ ಕಾರ್ಯಗಳಲ್ಲಿ ಬಿದಿರು ಬಳಕೆಗೆ ಹೆಚ್ಚಿನ ಅವಕಾಶವಿದೆ ಎಂದು ಬಿದಿರು ಪ್ರೇಮಿ ಎಲೆಕ್ಟ್ರಾನಿಕ್ ಸಿಟಿಯ ಸೃಜನ್ ಪಿ. ತಿಳಿಸಿದರು.

- ಬಿದಿರಿನ ಬೈಸಿಕಲ್

ವರ್ತೂರಿನ ದಿ ಗ್ರೀನ್ ಸ್ಕೂಲ್– ಬೆಂಗಳೂರು (ಟಿಜಿಎಸ್– ಬಿ) ಶಾಲೆ ತನ್ನ ‘ಬ್ಯಾಂಬೂ 4 ಬೆಂಗಳೂರು’ ಕಾರ್ಯಕ್ರಮದ ಭಾಗವಾಗಿ ವಿದ್ಯಾರ್ಥಿಗಳಿಗಾಗಿ ಬಿದಿರಿನ ಬೈಸಿಕಲ್ಗಳನ್ನು ತಯಾರಿಸಿದೆ. ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬಿದಿರಿನ ಬೈಸಿಕಲ್ಗಳು 20 ರಿಂದ 30 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ‘ಜೀರೊ ಕಾರ್ಬನ್(ತಟಸ್ಥ ಇಂಗಾಲ)’ ಶಾಲೆಯಾಗಿ ಮಾಡುವ ಯೋಜನೆಯ ಭಾಗವಾಗಿ ಪ್ರಾಚಾರ್ಯೆ ಉಷಾ ಅಯ್ಯರ್ ನೇತೃತ್ವದಲ್ಲಿ ಆರು ಬೈಸಿಕಲ್ಗಳನ್ನು ತಯಾರಿಸಲಾಗಿದೆ. ಕರಕುಶಲ ವಸ್ತುಗಳಿಗೆ ಬೇಡಿಕೆ ಪೀಠೋಪಕರಣಗಳು ನೆಲಹಾಸು ಗೋಡೆ ಅಲಂಕಾರ ವಸ್ತುಗಳು ಗಿಫ್ಟ್ಗಳು ದೀಪದ ಕಂಬ ಏಣಿ ತೊಟ್ಟಿಲು ಕೊಳಲು ಕುರ್ಚಿ ಮೇಜು ಚಾಪೆ ಬುಟ್ಟಿ ಶಾಮಿಯಾನ ಮೊರ ಮಂಕರಿ ಬೀಸಣಿಗೆ ಸಹಿತ ಬಿದಿರಿನ ಅನೇಕ ವಸ್ತುಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಹಸಿರು ಕಟ್ಟಡ ಸಾಮಗ್ರಿ ಮತ್ತು ತಂತ್ರಜ್ಞಾನ ಕೇಂದ್ರ–ಸಿಜಿಬಿಎಂಟಿ’ಯು ಬಿದಿರಿನಿಂದ ಕರಕುಶಲ ಮತ್ತು ನಿರ್ಮಾಣ ಸಾಮಗ್ರಿಗಳ ವಿನ್ಯಾಸ ಕಾರ್ಯಾಗಾರವನ್ನು ಆಗಾಗ ನಡೆಸಿ ಕೌಶಲ ಹೆಚ್ಚಿಸುವ ಕೆಲಸ ಮಾಡುತ್ತಿದೆ.

₹6 ಕೋಟಿ ವೆಚ್ಚ

₹ 6 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೊ ಕಾಳೇನಅಗ್ರಹಾರ–ನಾಗವಾರ (ಗುಲಾಬಿ) ಮಾರ್ಗದಲ್ಲಿ ಬಂಬೂಬಜಾರ್ ಸಮೀಪದ ನಿಲ್ದಾಣವನ್ನು (ಪಾಟರಿ ಟೌನ್) ಬಿದಿರಿನ ಅಲಂಕಾರದಲ್ಲಿ ನಿರ್ಮಿಸಲಿದೆ. ಇದು ದೇಶದ ಮೊದಲ ಬಿದಿರು ಅಲಂಕಾರದ ಮೆಟ್ರೊ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಲಿದೆ. ‘ಬಿದಿರು ಎಷ್ಟು ಬೆಳೆಯುತ್ತದೆ? ಮೆಟ್ರೊದ ಹಳಿಗಳನ್ನು ಮೀರಿ ಬೆಳೆಯುತ್ತದೆಯೇ ? ಎಂಬುದನ್ನೆಲ್ಲ ಚರ್ಚೆ ನಡೆಸಿ ಗಿಡ್ಡ ಬಿದಿರು ಬೆಳೆಸಲು ಅವಕಾಶ ನೀಡಲಾಗುವುದು. ಪಾಟರಿ ಟೌನ್ ಮೆಟ್ರೊ ನಿಲ್ದಾಣವನ್ನು ಬೆಂಕಿ ನಿರೋಧಕ ಬಿದಿರು ಬಳಸಿ ವಿನ್ಯಾಸಗೊಳಿಸಲಾಗುವುದು’ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್. ಮಹೇಶ್ವರ ರಾವ್ ತಿಳಿಸಿದರು. ‘ನಮ್ಮ ಮೆಟ್ರೊ ಮತ್ತು ಮುಖ್ಯ ವಾಸ್ತುಶಿಲ್ಪಿಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ. ಅವರು ವಿನ್ಯಾಸ ಅಂತಿಮಗೊಳಿಸಲಿದ್ದಾರೆ’ ಎಂದು ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮುಖ್ಯ ಎಂಜಿನಿಯರ್ ದಯಾನಂದ ಶೆಟ್ಟಿ ಮಾಹಿತಿ ನೀಡಿದರು.

ಉತ್ತಮ ಪ್ರಭೇದ; ಬಾಳಿಕೆ ದೀರ್ಘ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಬಿದಿರು ಬಳಸಿ ಒಳಾಂಗಣ ವಿನ್ಯಾಸವನ್ನು ಆಕರ್ಷಕಗೊಳಿಸಲಾಗಿದೆ. ದೆಹಲಿಯ ನೂತನ ಸಂಸತ್ತಿನ ಗೋಡೆ ಮತ್ತು ನೆಲಹಾಸು ಗಳಿಗೆ ಬಿದಿರು ಬಳಸಲಾಗಿದೆ. ಉತ್ತಮ ಪ್ರಭೇದವಾದ ‘ತ್ರಿಪುರನ್ ಬಂಬುಸಾ ತುಲ್ಡಾ’ ಬಿದಿರು ಬಳಸಿದರೆ ದೀರ್ಘ ಕಾಲ ಬಾಳಿಕೆ ಬರುತ್ತದೆ ಎಂದು ಬಿಎಸ್ಐ ಅಧ್ಯಕ್ಷ ಪುನತಿ ಶ್ರೀಧರ್ ತಿಳಿಸಿದರು. ಯಾವುದೇ ಬಿದಿರು ಬಳಕೆ ಮಾಡುವ ಮೊದಲು ರಾಸಾಯನಿಕ ಬಳಸಿ ಬಿದಿರು ಸ್ಟಾರ್ಗಳನ್ನು ತೆಗೆದು ಹುಳ ಬೀಳದಂತೆ ಮಾಡಿದರೆ 40–50 ವರ್ಷ ಹಾಳಾಗುವುದಿಲ್ಲ ಎಂದು ವಿವರ ನೀಡಿದರು. ಬಿದಿರು ಬೆಳೆದರೆ ಮರಗಳಿಗಿಂತ ಹೆಚ್ಚು ಆಮ್ಲಜನಕವನ್ನು ವಾತಾವರಣಕ್ಕೆ ಬಿಡುತ್ತದೆ. ತುಂಬಾ ಕಡಿಮೆ ನೀರಿನಲ್ಲಿ ಬಿದಿರು ಬೆಳೆಸಬಹುದು. ಹಾಗೆಯೇ ಬಿದಿರು ಮಳೆ ನೀರನ್ನು ಭೂಮಿಗೆ ಇಂಗಿಸುತ್ತದೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.