ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಸವಾಡಿ ಕೆರೆ: ಪ್ರತಿರೋಧದ ನಡುವೆ ತೆರವು

Last Updated 28 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಆರೋಪ, ಪ್ರತ್ಯಾರೋಪ, ಒತ್ತಡ, ಅಡೆ– ತಡೆಗಳ ನಡುವೆ ಬಾಣಸವಾಡಿ ಕೆರೆ ಅಂಗಳದ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರವೂ ನಡೆಯಿತು.

ಮುಖ್ಯರಸ್ತೆಯಲ್ಲಿ ಒತ್ತುವರಿಯಾಗಿದ್ದ ದೇವಸ್ಥಾನ, ಪೆಟ್ರೋಲ್‌ ಬಂಕ್‌ ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊರತುಪಡಿಸಿದಂತೆ ಇತರೆ ಶೆಡ್‌ ಹಾಗೂ ಕಟ್ಟಡಗಳನ್ನು ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್‌ ನೇತೃತ್ವದಲ್ಲಿ ಸಿಬ್ಬಂದಿ ತೆರವುಗೊಳಿಸಿದರು. ಸುಮಾರು 75ಕ್ಕೂ ಹೆಚ್ಚು ಕಟ್ಟಡ ಹಾಗೂ ಇತರೆ ರೀತಿಯ ಅತಿಕ್ರಮಣವನ್ನು ತೆರವುಗೊಳಿಸಲು ಮೂರು ದಿನ ಕಾರ್ಯಾಚರಣೆಯನ್ನು ಗುರುವಾರ ತಾಲ್ಲೂಕು ಆಡಳಿತ ಆರಂಭಿಸಿದೆ.

‘ಎಲ್ಲ ರೀತಿಯ ಒತ್ತುವರಿಯನ್ನೂ ತೆರವುಗೊಳಿಸಲಾಗುತ್ತದೆ. ಯಾವುದನ್ನೂ ಉಳಿಸುವುದಿಲ್ಲ. ಒಂದು ಬಾರಿ ಒತ್ತುವರಿಯನ್ನು ತೆರವು ಮಾಡಿದ್ದರೂ ಅದೇ ಸ್ಥಳದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಯಾವ ರೀತಿಯಲ್ಲೂ ಮುಲಾಜು ತೋರುವುದಿಲ್ಲ’ ಎಂದು ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ತಿಳಿಸಿದರು.

ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ‘ಆ ಕಟ್ಟಡ ತೆರವು ಮಾಡಿ, ಅದನ್ನು ಒಡೆಯಿರಿ, ಇದನ್ನು ಒಡೆಯಬೇಡಿ’ ಎಂದೆಲ್ಲ ಸ್ಥಳೀಯರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಆಗ್ರಹಿಸಿದರು.

ಒತ್ತುವರಿ ತೆರವು ಮಾಡದಂತೆ ಸಚಿವರು ಹಾಗೂ ಶಾಸಕರಿಂದ ತಹಶೀಲ್ದಾರ್‌ ಅವರ ಮೇಲೆ ಒತ್ತಡಹಾಕಲು ಸಾಕಷ್ಟು ಪ್ರಯತ್ನಪಟ್ಟರು. ಬಾಣಸವಾಡಿ ಕೆರೆ ಅಂಗಳದಲ್ಲಿ ಒತ್ತುವರಿಯಾಗಿರುವ ಎಲ್ಲ ಪ್ರದೇಶಗಳನ್ನೂ ತಾಲ್ಲೂಕು ಆಡಳಿತ ಗುರುತು ಮಾಡಿದೆ. ಎಲ್ಲವನ್ನೂ ತೆರವು ಮಾಡಲಾಗುತ್ತದೆ. ಎಲ್ಲಿಯವರೆಗೆ ಎಲ್ಲ ತೆರವು ಮುಗಿಯುವುದಿಲ್ಲವೋ ಅಲ್ಲಿಯವರೆಗೆ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಲಾಗಿದೆ.

ವಾಣಿಜ್ಯ ಕಟ್ಟಡ ತೆರವು ಮಾಡಿ

‘ಬಾಣಸವಾಡಿ ಕೆರೆಯ ಒತ್ತುವರಿಯನ್ನು ತೆರವು ಮಾಡುತ್ತಿರುವುದು ಒಳ್ಳೆಯ ಕೆಲಸ. ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕು. ಯಾವುದನ್ನೂ ಉಳಿಸಬಾರದು. ವಾಣಿಜ್ಯ ಕಟ್ಟಡಗಳನ್ನು ಉಳಿಸಿ, ಮನೆಗಳನ್ನು ಒಡೆಯುತ್ತಿದ್ದಾರೆ. ಬಡವರು, ಶ್ರೀಮಂತರು ಎನ್ನದೆ ಒತ್ತುವರಿ ಮಾಡಿಕೊಂಡಿರುವ ಎಲ್ಲ ಪ್ರದೇಶವನ್ನು ತೆರವು ಮಾಡಬೇಕು’ ಎಂದು ಬಿಜೆಪಿಯ ಸ್ಥಳೀಯ ಮುಖಂಡ ಪದ್ಮನಾಭರೆಡ್ಡಿ ಆಗ್ರಹಿಸಿದರು.

ಬಿಡಿಎ, ಬಿಬಿಎಂಪಿ ಎಚ್ಚರಗೊಳ್ಳಲಿ...

‘ತಾಲ್ಲೂಕು ಆಡಳಿತ ಬಾಣಸವಾಡಿ ಕೆರೆಯ ಒತ್ತುವರಿಯನ್ನು ತೆರವು ಮಾಡುತ್ತಿದೆ. ಬಿಡಿಎ ಹಾಗೂ ಬಿಬಿಎಂಪಿ ಈ ತೆರವುಗೊಳಿಸಿದ ಪ್ರದೇಶವನ್ನು ರಕ್ಷಿಸಿಕೊಳ್ಳಬೇಕು. ಮತ್ತೆ ಒತ್ತುವರಿಯಾಗದಂತೆ ತಡೆಯಬೇಕು. ಒತ್ತುವರಿ ತೆರವುಗೊಳಿಸಿದ ಮೇಲೆ ಈ ಪ್ರದೇಶವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಬೇಕು. ಉದ್ಯಾನ, ಆಟದ ಮೈದಾನ ಸೇರಿದಂತೆ ಇತರೆ ಸೌಲಭ್ಯಗಳನ್ನು ಇಲ್ಲಿ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಬಾಣಸವಾಡಿ ರಾಜಶೇಖರ ರೆಡ್ಡಿ, ಜಗದೀಶ್‌ ರೆಡ್ಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT