ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅರಮನೆ ಮೈದಾನಲ್ಲಿ ಅನಾವರಣಗೊಂಡ ಕಲಾ ಪ್ರಪಂಚ

ದೇಶದ ಪ್ರಮುಖ ಕಲಾವಿದರ ಕಲಾಕೃತಿಗಳ ಪ್ರದರ್ಶನ *4 ಸಾವಿರಕ್ಕೂ ಅಧಿಕ ಕಲಾಕೃತಿಗಳು ವೀಕ್ಷಣೆಗೆ ಲಭ್ಯ
Last Updated 8 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಕಲ್ಪನೆಗಳಿಗೆ ಜೀವ ತುಂಬಿದ ಕಲಾವಿದರು, ವರ್ಣ ಸ್ಪರ್ಶದ ಮೂಲಕ ಇಲ್ಲಿನ ಅರಮನೆ ಮೈದಾನಲ್ಲಿ ಕಲಾ ಪ್ರಪಂಚವನ್ನು ಅನಾವರಣ ಮಾಡಿದ್ದಾರೆ.

ಇಂಡಿಯಾ ಆರ್ಟ್ ಫೆಸ್ಟಿವಲ್‌ನ ನಗರದ ಎರಡನೇ ಆವೃತ್ತಿಗೆ ಗುರುವಾರ ಚಾಲನೆ ದೊರೆತಿದ್ದು, ಪ್ರದರ್ಶನದಲ್ಲಿರುವ 4 ಸಾವಿರಕ್ಕೂ ಅಧಿಕ ಕಲಾಕೃತಿಗಳು ಕಲಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.ಅರಳಿನಿಂತ ಬಣ್ಣ ಬಣ್ಣದ ಹೂವುಗಳು, ಗರ್ಜಿಸುತ್ತಿರುವ ಸಿಂಹ, ಧಾನ್ಯ ನಿರತ ಗೌತಮ ಬುದ್ಧ, ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಿರುವ ಆನೆ, ನಿದ್ದೆಗೆ ಜಾರಿರುವ ಮಗು... ಹೀಗೆ ಕಲಾವಿದರು ತಮ್ಮ ಕಲ್ಪನೆಗಳು ಹಾಗೂ ಸುತ್ತಮುತ್ತಲಿನ ಅಚ್ಚರಿಗಳಿಗೆ ಜೀವ ತುಂಬಿದ್ದಾರೆ.

ಉತ್ಸವಕ್ಕೆ ಭೇಟಿ ನೀಡಿದ ಕಲಾ ರಸಿಕರು ದೇಶದ ವಿವಿಧ ಭಾಗಗಳಿಂದ ಬಂದ ಕಲಾವಿದರನ್ನು ಭೇಟಿ ಮಾಡಿ, ಕಲಾಕೃತಿಗಳ ಬಗ್ಗೆ ಮಾಹಿತಿ ಪಡೆದರು. ತೈಲವರ್ಣ, ಅಕ್ರೆಲಿಕ್ ಸೇರಿ ವಿವಿಧ ಪ್ರಕಾರದ ಕಲಾಕೃತಿಗಳು ನೋಡುಗರ ಕಣ್ಮನ ತಣಿಸಿದವು.

ಶಕ್ತಿ ಬರ್ಮನ್, ಯೂಸುಫ್ ಅರಕ್ಕಲ್, ಲಾಲು ಪ್ರಸಾದ್ ಶಾ, ಎಸ್‌.ಜಿ. ವಾಸುವೇದ್, ಲಕ್ಷ್ಮಣ್ ಏಲೆ, ಗುರುದಾಸ್ ಶೆಣೈ, ಲಕ್ಷ್ಮ ಗೌಡ್, ಜತಿನ್ ದಾಸ್, ಜೋಗೆನ್ ಚೌಧರಿ, ಮನು ಪ್ರಕಾಶ್, ಎನ್.ಎಸ್. ಹರ್ಷ, ಪಿ.ಜ್ಞಾನ, ಸೀಮಾ ಕೊಹ್ಲಿ ಸೇರಿ ಕಲಾ ಕ್ಷೇತ್ರದ ಪ್ರಮುಖರ ಕಲಾಕೃತಿಗಳನ್ನೂ ಉತ್ಸವದಲ್ಲಿ ನೋಡಬಹುದಾಗಿದೆ.

₹ 20 ಲಕ್ಷ ಮೌಲ್ಯದ ಕಲಾಕೃತಿಗಳೂ ಲಭ್ಯವಿವೆ. ಇಷ್ಟವಾದ ಕಲಾಕೃತಿಗಳನ್ನು ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಸಿಂಗಾಪುರದ ಕಲಾವಿದರೂ ಭಾಗವಹಿಸಿದ್ದಾರೆ.ಯುವ ಪ್ರತಿಭೆಗಳಿಗೂ ಉತ್ಸವದಲ್ಲಿ ಅವಕಾಶ ನೀಡಲಾಗಿದೆ.

ಪುಣೆಯ ಕಲಾವಿದ ಎಂ. ನಾರಾಯಣ ಅವರು ಕುದುರೆಗಳನ್ನೇ ಕೇಂದ್ರವಾಗಿರಿಸಿಕೊಂಡು ಕಲಾಕೃತಿಗಳನ್ನು ರಚಿಸಿದ್ದಾರೆ. ಧನ್ಯಾ ದಾಸ್ ಮತ್ತು ಕಲ್ಯಾಣಿ ರವಿಶಂಕರ್ ಅವರು ರಾಧಾ–ಕೃಷ್ಣರನ್ನು ಚಿತ್ರಿಸಿದ್ದಾರೆ. ಸುನೀತಾ ಕೃಷ್ಣ ಮತ್ತಿತರರು ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಧಾರ್ಮಿಕ ಆಚರಣೆಗಳ ಚಿತ್ರ ರಚಿಸಿದ್ದಾರೆ. ಮುಂಬೈನ ಮೋನಿಕಾ ಘುಲೆ ಅವರು ತಾಯಿ–ಮಗುವಿನ ವಾತ್ಸಲ್ಯದ ಬಗ್ಗೆ ರಚಿಸಿದ ಕಲಾಕೃತಿ ಗಮನ ಸೆಳೆಯುತ್ತಿದೆ.

ಈ ಪ್ರದರ್ಶನವು ಇದೇ 11ರವರೆಗೆ ಬೆಳಿಗ್ಗೆ 11ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅರಮನೆ ಮೈದಾನದ ಕಿಂಗ್ಸ್‌ ಕೋರ್ಟ್‌ನಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಪ್ರವೇಶ ಉಚಿತ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT