ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಚರಕ ಆಸ್ಪತ್ರೆಗೆ ಬಿಎಂಸಿಆರ್‌ಐ ವೈದ್ಯರು

ವೈದ್ಯಕೀಯ ಶಿಕ್ಷಣ ಇಲಾಖೆ ಕ್ರಮಕ್ಕೆ ಆಕ್ಷೇಪ * 2020ರಲ್ಲಿಯೇ ನಿರ್ಮಾಣಗೊಂಡಿದ್ದ ಆಸ್ಪತ್ರೆ ಎರಡನೆ ಬಾರಿ ಲೋಕಾರ್ಪಣೆ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾಜಿನಗರದ ಬ್ರಾಡ್‌ವೇ ರಸ್ತೆಯಲ್ಲಿರುವ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ನಿರ್ಮಾಣಗೊಂಡು ನಾಲ್ಕು ವರ್ಷಗಳ ಬಳಿಕ ಸೇವೆಗೆ ಸಜ್ಜಾಗಿದೆ. ಇದಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ವೈದ್ಯರನ್ನು ಚರಕ ಆಸ್ಪತ್ರೆಗೆ ನಿಯೋಜಿಸಿರುವುದಕ್ಕೆ ವೈದ್ಯರಿಂದಲೇ ಆಕ್ಷೇಪ ವ್ಯಕ್ತವಾಗಿದೆ.

ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿದ್ದ ಈ ಆಸ್ಪತ್ರೆಯನ್ನು 2020ರ ಆಗಸ್ಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದರು. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯದೊಂದಿಗೆ ಸುಸಜ್ಜಿತವಾದ ನಾಲ್ಕು ಮಹಡಿಗಳನ್ನು ಒಳಗೊಂಡಿದ್ದ ಈ ಆಸ್ಪತ್ರೆಗೆ ವೈದ್ಯರು ಹಾಗೂ ಶುಶ್ರೂಷಕರ ನೇಮಕಾತಿ ನಡೆಯದಿದ್ದರಿಂದ ನಿರುಪಯುಕ್ತವಾಗಿತ್ತು. ಈಗ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನು ಆಸ್ಪತ್ರೆಗೆ ನಿಯೋಜಿಸಲಾಗಿದ್ದು, ಮತ್ತೊಮ್ಮೆ ಲೋಕಾಪರ್ಣೆಗೆ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್‌ 2ರಂದು ಲೋಕಾರ್ಪಣೆ ಮಾಡಿ, ಸೇವೆಗೆ ಅನುವು ಮಾಡಿಕೊಡಲಿದ್ದಾರೆ. 

ಈ ಆಸ್ಪತ್ರೆಯು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಎಬಿವಿಎಂಸಿಆರ್‌ಐ) ಅಧೀನದಲ್ಲಿದೆ. ಹಲವು ದಿನಗಳಿಂದ ಈ ಆಸ್ಪತ್ರೆಯಲ್ಲಿ ತಲಾ ಇಬ್ಬರು ಶುಶ್ರೂಷಕರು, ಡಿ ದರ್ಜೆ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಯಾವುದೇ ವೈದ್ಯಕೀಯ ಸೇವೆ ದೊರೆಯುತ್ತಿರಲಿಲ್ಲ.

ಈಗ ವೈದ್ಯಕೀಯ ಶಿಕ್ಷಣ ಇಲಾಖೆಯು ಬಿಎಂಸಿಆರ್‌ಐ ವೈದ್ಯರು ಹಾಗೂ ಸ್ಥಾನಿಕ ವೈದ್ಯರನ್ನು ಚರಕ ಆಸ್ಪತ್ರೆಗೆ ನೇಮಿಸಿ ಆದೇಶ ಹೊರಡಿಸಿದೆ. ಬಿಎಂಸಿಆರ್‌ಐ ಹೃದಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀರಂಗ ಪಿ.ಸಿ. ಅವರನ್ನು ಚರಕ ಆಸ್ಪತ್ರೆಯ ವಿಶೇಷಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಇಲಾಖೆಯ ಈ ಕ್ರಮಕ್ಕೆ ಬಿಎಂಸಿಆರ್‌ಐ ಅಧೀನದ ಆಸ್ಪತ್ರೆಯ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಸೇವೆಗೆ ಬಳಕೆ: ಈ ಆಸ್ಪತ್ರೆಯನ್ನು ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸರ್ಕಾರ ಬಳಸಿಕೊಂಡಿತ್ತು. ಆ ವೇಳೆ ಬಿಎಂಸಿಆರ್‌ಐ ವೈದ್ಯರು ಈ ಆಸ್ಪತ್ರೆಗೆ ಬಂದು, ಸೇವೆ ಸಲ್ಲಿಸಿದ್ದರು. ಕೆಲ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿತ್ತು. ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಇಲ್ಲಿ ಒಳ ರೋಗಿಗಳ ವೈದ್ಯಕೀಯ ಸೇವೆ ಸ್ಥಗಿತಗೊಂಡಿತ್ತು. 2022ರ ಅಂತ್ಯದವರೆಗೆ ಹೃದಯ ಹಾಗೂ ನರರೋಗ ವಿಜ್ಞಾನ ವಿಭಾಗಗದಲ್ಲಿ ಹೊರರೋಗಿ ಸೇವೆ ಮಾತ್ರ ಒದಗಿಸಲಾಗಿತ್ತು. ಬೌರಿಂಗ್ ಆಸ್ಪತ್ರೆಯ ವೈದ್ಯರು ಇಲ್ಲಿಗೆ ಬಂದು ಸೇವೆ ನೀಡಿದ್ದರು. ಬಳಿಕ ಆಸ್ಪತ್ರೆ ಸಂಪೂರ್ಣ ಸ್ಥಗಿತವಾಗಿತ್ತು.

‘ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ (ಪಿಎಂಎಸ್‌ಎಸ್‌ವೈ) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಈಗಾಗಲೇ ವೈದ್ಯರ ಕೊರತೆ ಇದೆ. ಬಿಎಂಸಿಆರ್‌ಐನಲ್ಲಿಯೂ ಅಗತ್ಯ ಸಂಖ್ಯೆಯಲ್ಲಿ ಪ್ರಾಧ್ಯಾಪಕರಿಲ್ಲ. ಇಂತಹ ಸಂದರ್ಭದಲ್ಲಿ ಇಲ್ಲಿನ ವೈದ್ಯರನ್ನು ಚರಕ ಆಸ್ಪತ್ರೆಗೆ ನೇಮಿಸಲಾಗಿದೆ. ಇದರಿಂದಾಗಿ ಇಲ್ಲಿಗೆ ಬರುವ ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ’ ಎಂದು ಬಿಎಂಸಿಆರ್‌ಐನ ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಎನ್‌ಎಂಸಿಗೆ ಪತ್ರ  ‘ಬಲವಂತದಿಂದ ಚರಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ನಮ್ಮನ್ನು ನಿಯೋಜಿಸಲಾಗಿದೆ’ ಎಂದು ಬಿಎಂಸಿಆರ್‌ಐ ಸ್ಥಾನಿಕ ವೈದ್ಯಾಧಿಕಾರಿಗಳು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ದೂರು ನೀಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು ‘ಚರಕ ಆಸ್ಪತ್ರೆಯು ಎಬಿವಿಎಂಸಿಆರ್‌ಐ ಅಡಿ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ತರಬೇತಿಗೆ ಅಗತ್ಯ ವಾತಾವರಣವಿಲ್ಲ. ಇದು ಕಲಿಕೆಗೆ ತೊಡಕಾಗಲಿದೆ. ಎನ್‌ಎಂಸಿ ನಿಯಮಾವಳಿ ಪ್ರಕಾರ ಪ್ರತಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವಿಭಾಗಗಳು ನಿಗದಿತ ಸಂಖ್ಯೆಯಲ್ಲಿ ಪ್ರಾಧ್ಯಾಪಕರು ಸಿಬ್ಬಂದಿ ರೋಗಿಗಳು ಹಾಗೂ ಅಗತ್ಯ ಸೌಲಭ್ಯ ಹೊಂದಿರಬೇಕು. ಆದರೆ ಅಗತ್ಯ ಸೌಲಭ್ಯ ಕಲ್ಪಿಸದೆ ನಿಯಮಾವಳಿಗಳನ್ನು ಉಲ್ಲಂಘಿಸಿ ನಿಯೋಜಿಸಲಾಗಿದೆ’ ಎಂದು ದೂರಿದ್ದಾರೆ.

‘ರೋಗಿಗಳಿಗೆ ಸಮಸ್ಯೆಯಾಗದಿರಲು ಕ್ರಮ’ ‘ಆಸ್ಪತ್ರೆ ಕಾರ್ಯಾರಂಭ ಮಾಡಿ ರೋಗಿಗಳಿಗೆ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಬಿಎಂಸಿಆರ್‌ಐ ವೈದ್ಯರು ಹಾಗೂ ಸ್ಥಾನಿಕ ವೈದ್ಯರನ್ನು ಚರಕ ಆಸ್ಪತ್ರೆಗೆ ನೇಮಿಸಲಾಗಿದೆ. ಎಬಿವಿಎಂಸಿಆರ್‌ಐ ಪ್ರಾರಂಭವಾದಾಗ ಅಗತ್ಯ ಸಿಬ್ಬಂದಿ ಸೇರಿ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಬಿಎಂಸಿಆರ್‌ಐ ಒಪ್ಪಂದ ಮಾಡಿಕೊಂಡಿದೆ. ಅದರ ಆಧಾರದಲ್ಲಿಯೇ ಸ್ಥಾನಿಕ ವೈದ್ಯರನ್ನು ಚರಕ ಆಸ್ಪತ್ರೆಗೆ ಒದಗಿಸಲಾಗಿದೆ. ಅಷ್ಟಕ್ಕೂ ಬಿಎಂಸಿಆರ್‌ಐಗೆ ಸಮಸ್ಯೆಯಾಗದಂತೆ ನಿಗದಿಗಿಂತ ಹೆಚ್ಚಿದ್ದ ಸ್ಥಾನಿಕ ವೈದ್ಯಾಧಿಕಾರಿಗಳನ್ನು ಚರಕ ಆಸ್ಪತ್ರೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ನೇಮಕದ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವುದು ಗಮನಕ್ಕೆ ಬಂದಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಂಕಿ–ಅಂಶಗಳು

₹ 24.38 ಕೋಟಿ -ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ತಗುಲಿದ್ದ ವೆಚ್ಚ

6,908.18 ಚ.ಮೀ.- ಆಸ್ಪತ್ರೆ ಕಟ್ಟಡದ ಒಟ್ಟು ವಿಸ್ತೀರ್ಣ

130 -ಆಸ್ಪತ್ರೆಯಲ್ಲಿರುವ ಹಾಸಿಗೆಗಳ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT