ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಂಚಾರ ಸುಧಾರಣೆಗೆ ಪ್ರತ್ಯೇಕ ಪ್ರಾಧಿಕಾರ

‘ಬಿಎಂಎಲ್‌ಟಿಎ’ ರಚನೆಗೆ ಮುಂದಾದ ಸರ್ಕಾರ l ಇದೇ ಅಧಿವೇಶನದಲ್ಲಿ ಮಂಡನೆ
Last Updated 18 ಸೆಪ್ಟೆಂಬರ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸುಧಾರಣೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ‘ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ’ (ಬಿಎಂಎಲ್‌ಟಿಎ) ರಚಿಸಲು ಸರ್ಕಾರ ಮುಂದಾಗಿದೆ.

ಇತ್ತೀಚೆಗಷ್ಟೇ ಪ್ರಾಧಿಕಾರ ರಚನೆಯ ವಿಷಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. ಇದಕ್ಕೆ ಪೂರಕವಾಗಿ ಮಸೂದೆಯ ಕರಡು ಸಿದ್ಧಪಡಿಸಿದ್ದು, ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆದು ಬಳಿಕ ವಿಧಾನಮಂಡಲದಲ್ಲಿ ಮಂಡಿಸಲಿದ್ದಾರೆ.

ಸಂಚಾರ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದು, ಅದರ ಮೂಲಕ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಂಬಂಧಿತ ಕೆಲವು ಇಲಾಖೆಗಳ ಮಧ್ಯೆ ಸಮನ್ವಯದ ಮೂಲಕ ಸುಧಾರಣಾ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಹಲವು ಇಲಾಖೆಗಳು ಶ್ರಮಿಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆಯುತ್ತಿಲ್ಲ. ಆದ್ದರಿಂದ, ಪ್ರತ್ಯೇಕವಾದ ಪ್ರಾಧಿಕಾರವನ್ನೇ ರಚಿಸಿ ‘ಏಕೀಕೃತ ವ್ಯವಸ್ಥೆ’ ಜಾರಿಗೆ ತರುವುದು ಪ್ರಾಧಿಕಾರದ ಮುಖ್ಯ ಉದ್ದೇಶ. ಪ್ರಾಧಿಕಾರ ರಚನೆಯಬಳಿಕ ಇಡೀ ನಗರದ ಅಭಿವೃದ್ಧಿ, ನಿರ್ವಹಣೆ, ಮೇಲ್ವಿಚಾರಣೆಯ ನಿಯಂತ್ರಣದ ಉಸ್ತುವಾರಿಯ ಹೊಣೆ ಪ್ರಾಧಿಕಾರಕ್ಕೆ ಸಿಗಲಿದೆ.

ಐಟಿ–ಬಿಟಿ ಖ್ಯಾತಿಯ ನಗರದಲ್ಲಿ ಬಡಾವಣೆಗಳ ವೈಜ್ಞಾನಿಕ ಬೆಳವಣಿಗೆಗೂ ಇದು ಸಹಕಾರಿ ಆಗಲಿದೆ. ಅಭಿವೃದ್ಧಿಗೆ ವೇಗ ದೊರೆಯ ಲಿದೆ. ಕೆಲವು ಬಡಾವಣೆಗಳು ಅವೈಜ್ಞಾನಿಕವಾಗಿ ಬೆಳೆಯುತ್ತಿವೆ ಎಂಬ ಆರೋಪವಿದೆ. ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ದೊರೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.

ಬಿಬಿಎಂಪಿ, ಹೆದ್ದಾರಿ ಪ್ರಾಧಿಕಾರ, ಸಂಚಾರ ಪೊಲೀಸ್‌, ಬಿಎಂಟಿಸಿ, ಬಿಎಂಆರ್‌ಸಿಎಲ್‌ ಮತ್ತು ಸಾರಿಗೆ ಇಲಾಖೆಯಂಥ ಅನೇಕ ಸಂಸ್ಥೆಗಳು, ಏಜೆನ್ಸಿಗಳು ನಗರದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ, ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿವೆ. ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ಒಂದೇ ಸೂರಿನಡಿ ಎಲ್ಲ ವ್ಯವಸ್ಥೆ ತರುವ ಪ್ರಯತ್ನಕ್ಕೆ ಸರ್ಕಾರವು ಯೋಜನೆ ರೂಪಿಸಿದೆ.

ಮುಖ್ಯಮಂತ್ರಿ ಈ ಪ್ರಾಧಿಕಾರದ ಅಧ್ಯಕ್ಷರು. ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಸಾರಿಗೆ ಸಚಿವ, ಮುಖ್ಯಕಾರ್ಯದರ್ಶಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ನಗರದಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಯೋಜನೆಗೆ ಭೂಮಿ ಬಳಕೆ, ರಸ್ತೆ, ಸಾರಿಗೆ ಯೋಜನೆ, ಟೋಲ್‌ ನಿರ್ಮಾಣಗಳ ಮೇಲೆ ಪ್ರಾಧಿಕಾರವು ನಿಗಾ ವಹಿಸಲಿದೆ. ಸಾರಿಗೆ ವ್ಯವಸ್ಥೆ ಸುಧಾರಣೆಗೆ ಹೂಡಿಕೆ ಅನುಮೋದಿಸುವ ಹಾಗೂ ವಿಮರ್ಶೆಗೆ ಒಳಪಡಿಸುವ ಅಧಿಕಾರವನ್ನು ಪ್ರಾಧಿಕಾರಕ್ಕೆ ನೀಡುವ ಆಲೋಚನೆಯೂ ಇದೆ. ಸಾರಿಗೆ ಪ್ರಯಾಣ ದರ ಹೆಚ್ಚಿಸುವ ನಿರ್ಧಾರವನ್ನೂ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕೆಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ದಂಡ ವಿಧಿಸುವ ಅಧಿಕಾರ

‘ನಗರದಲ್ಲಿ ಕಾಲಮಿತಿಯಲ್ಲಿ ಕಾಮಗಾರಿಗಳು ನಡೆಯದಿರುವ ಕಾರಣಕ್ಕೆ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆಗಳು ಉದ್ಭವಿಸುತ್ತಿವೆ. ವಿಳಂಬ ಧೋರಣೆ, ಆದೇಶ ಪಾಲಿಸದ ವ್ಯಕ್ತಿಗಳಿಗೆ (ಗುತ್ತಿಗೆದಾರರು) ದಂಡ ವಿಧಿಸುವ ಅಧಿಕಾರವನ್ನು ಇನ್ನು ಮುಂದೆ ಪ್ರಾಧಿಕಾರಕ್ಕೆ ನೀಡಲಾಗುತ್ತಿದೆ.

‘ಮೊದಲ ಬಾರಿಯ ತಪ್ಪಿಗೆ ₹ 1 ಲಕ್ಷವರೆಗೆ ದಂಡ, ಮತ್ತೆ ಅದೇ ತಪ್ಪು ಮಾಡಿದರೆ ₹ 2 ಲಕ್ಷ ದಂಡ, ಮುಂದುವರಿದರೆ ಪ್ರತಿನಿತ್ಯ ₹ 5 ಸಾವಿರ ದಂಡ ವಿಧಿಸುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ.

ಸರ್ಕಾರಿ ಇಲಾಖೆ ಮುಖ್ಯಸ್ಥರು ಹಾಗೂ ಏಜೆನ್ಸಿಗಳ ಗಮನಕ್ಕೆ ಬಂದೂ ವಿಳಂಬವಾದರೆ ಅವರನ್ನೂ ಶಿಕ್ಷೆಗೆ ಗುರಿಪಡಿಸುವ ಅಧಿಕಾರವು ಪ್ರಾಧಿಕಾರಕ್ಕೆ ಇರಲಿದೆ’ ಎಂದೂ ನಗರಾಭಿವೃದ್ಧಿ ಸಚಿವಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT