ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಅಡಿಗಲ್ಲು ನಾಳೆ

ರಾಜ್ಯ ಬಿಟಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು: ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ
Last Updated 28 ಜುಲೈ 2020, 10:13 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪನೆಯಾಗಲಿರುವ ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್'ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ (ಜುಲೈ 29) ಬೆಳಿಗ್ಗೆ 9.30ಕ್ಕೆಗೆ ಅಡಿಗಲ್ಲು ಹಾಕಲಿದ್ದಾರೆ.

ಬಿಟಿಯ ವಿಷನ್ ಗ್ರೂಪಿನ ಶಿಫಾರಸಿನ ಮೇರೆಗೆ, ಬಯೋ ಹೆಲಿಕ್ಸ್ ಪಾರ್ಕ್ ಸ್ಥಾಪನೆಯಾಗಲಿದೆ. ಒಟ್ಟು 86 ಎಕರೆ ಜಾಗದಲ್ಲಿ ಸಾಂಸ್ಥಿಕ ಪ್ರದೇಶಕ್ಕಾಗಿ 20 ಎಕರೆ, ಸಂಶೋಧನೆ ಉದ್ದೇಶಕ್ಕೆ 10 ಎಕರೆ ಹಾಗೂ ಕೈಗಾರಿಕಾ ಕ್ಲಸ್ಟರ್‌ಗಳ ಅಭಿವೃದ್ಧಿಗೆ 52.27 ಎಕರೆ ಜಾಗ ಮೀಸಲಿಡಲಾಗಿದೆ. ಆ ಮೂಲಕ, ಬಯೋ ಟೆಕ್ನಾಲಜಿ ಕ್ಷೇತ್ರದ ದೊಡ್ಡ ಹಬ್ ಆಗಿ ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ಹೊರಹೊಮ್ಮಲಿದೆ.

64 ವರ್ಷಗಳ ಲೀಸ್ ಒಪ್ಪಂದದ ಆಧಾರದಲ್ಲಿ ಪಾರ್ಕ್‌ ಸ್ಥಾಪನೆಯಾಗಲಿದ್ದು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 50,000 ಮಂದಿಗೆ ಉದ್ಯೋಗ ಲಭ್ಯವಾಗುವ ನಿರೀಕ್ಷೆ ಇದೆ. ಜಾಗತಿಕ ಗುಣಮಟ್ಟದ ಪ್ರಯೋಗಾಲಯಗಳು ಇಲ್ಲಿ ನಿರ್ಮಾಣ ಆಗಲಿವೆ. ಈ ಪಾರ್ಕ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಮಾದರಿ ಟೌನ್‌ಶಿಪ್ ಆಗಿ ಅಭಿವೃದ್ಧಿ ಆಗಲಿದೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪಾರ್ಕ್‌ ತಲೆ ಎತ್ತಲಿದೆ.

9ರಿಂದ 10 ದಶಲಕ್ಷ ಚದರ ಅಡಿಯಷ್ಟು ವಿಶಾಲ ಜಾಗದಲ್ಲಿ ನಿರ್ಮಾಣವಾಗಲಿರುವ ಈ ಪಾರ್ಕ್‌ನಲ್ಲಿ 160ಕ್ಕೂ ಹೆಚ್ಚು ಕಂಪನಿಗಳು ಬರಲಿವೆ. 100ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸಲಿವೆ. 86 ಸಾವಿರದಿಂದ 1 ಲಕ್ಷದಷ್ಟು ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. ₹ 5,000 ಕೋಟಿ ಬಂಡವಾಳ ಹೂಡಿಕೆ ಆಗಲಿದೆ. ಮೊದಲ ಹಂತದಲ್ಲಿ ಎರಡು ಘಟಕಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಬಯೋ ಹೆಲಿಕ್ಸ್ ಪಾರ್ಕ್‌ನಲ್ಲಿ ಸಾಂಸ್ಥಿಕ ಮತ್ತು ಪೂರಕ ವ್ಯವಸ್ಥೆ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ₹ 150 ಕೋಟಿ ವೆಚ್ಚ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಮಾಹಿತಿ ನೀಡಿದ ಐಟಿ- ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ದೇಶದ ಬಿಟಿ ರಾಜಧಾನಿ ಎಂದು ಈಗಾಗಲೇ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ನಗರದ ಪ್ರಾಮುಖ್ಯತೆ ಈ ಪಾರ್ಕಿನಿಂದ ಮತ್ತಷ್ಟು ಹೆಚ್ಚಾಗಲಿದೆ. ದೇಶದಲ್ಲಿ ಹಾಗೂ ಜಾಗತಿಕವಾಗಿಯೂ ನಮ್ಮ ಬಯೋ ಟೆಕ್ನಾಲಜಿ ಕ್ಷೇತ್ರ ಮತ್ತಷ್ಟು ನಿರ್ಣಾಯಕವಾಗಲಿದೆ’ ಎಂದರು.

ವಿಷನ್ ಗ್ರೂಪ್ ನೀಡಿದ್ದ ಸಲಹೆ: ‘ಡಾ. ಕಿರಣ್ ಮಜುಂದಾರ್ ಶಾ ಅವರ ನೇತೃತ್ವದಲ್ಲಿ 2000ರಲ್ಲಿಯೇ ಕರ್ನಾಟಕದಲ್ಲಿ ಬಯೋ ಟೆಕ್ನಾಲಜಿಯ ವಿಷನ್ ಗ್ರೂಪ್ ರಚಿಸಲಾಗಿತ್ತು. ಕೈಗಾರಿಕೆ ಮತ್ತು ಸರ್ಕಾರದ ನಡುವಿನ ಅಂತರ ಕಡಿಮೆ ಮಾಡಲು ಮತ್ತು ರಾಜ್ಯದ ಜೈವಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬೆಳವಣಿಗೆ ಮತ್ತಷ್ಟು ವೇಗಗೊಳಿಸಲು ಮುಂದಿನ ಮಾರ್ಗವನ್ನು ಜಂಟಿಯಾಗಿ ಸಾಧಿಸಲು ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ಸ್ಥಾಪಿಸಲು ಸಲಹೆ ನೀಡಲಾಗಿತ್ತು’ ಎಂದರು.

‘ಪ್ರಸಕ್ತ ದಿನಗಳಲ್ಲಿ ಜೈವಿಕ ತಂತ್ರಜ್ಞಾನವು ಬಹಳ ವೇಗವಾಗಿ ಬೆಳೆಯುತ್ತಿದೆ. ಆರೋಗ್ಯ, ಕೃಷಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಇದು ನಿರ್ಣಾಯಕ ಪಾತ್ರ ಪೋಷಿಸುತ್ತಿದೆ. ಅದರಲ್ಲೂ ಕೋವಿಡ್-19 ನಂತರದ ಕಾಲದಲ್ಲಿ ಹಾಗೂ ಭವಿಷ್ಯದಲ್ಲಿ ಇಂಥ ಮಾರಣಾಂತಿಕ ವೈರಸ್‌ಗಳ ಸವಾಲು ಎದುರಾದರೆ ಜೈವಿಕ ತಂತ್ರಜ್ಞಾನದಿಂದಲೇ ಅದೆಲ್ಲವನ್ನೂ ಹಿಮ್ಮೆಟ್ಟಿಸಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಮುಂದಿನ ಸವಾಲುಗಳಿಗೆ ಸಜ್ಜಾಗುತ್ತಿದೆ. ಈಗ ಅಸ್ತಿತ್ವಕ್ಕೆ ಬರುತ್ತಿರುವ ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಮಹತ್ವದ ಪಾತ್ರ ನಿರ್ವಹಿಸಲಿದೆ’ ಎಂದೂ ಅವರು ವಿವರಿಸಿದರು.

‘ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಅಪಾರ ಸಂಶೋಧನೆಗಳು ನಡೆಯುತ್ತಿವೆ. ಆ ರೀತಿಯ ದೊಡ್ಡ ಬೇಸ್ ನಮ್ಮಲ್ಲಿ ಸೃಷ್ಟಿಯಾಗಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ. ಸದ್ಯಕ್ಕೆ ನಮ್ಮ ರಾಜ್ಯವು ಬಿಟಿ ವಲಯದಲ್ಲಿ ಏಷ್ಯಾ ಖಂಡದಲ್ಲಿ ಶೇ 9ರಷ್ಟು ಹಾಗೂ ನಮ್ಮ ದೇಶದಲ್ಲೇ ಶೇ 35ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಜತೆಗೆ, ನಮ್ಮಲ್ಲಿ 380 ಜೈವಿಕ ತಂತ್ರಜ್ಞಾನ ಕಂಪನಿಗಳು ಹಾಗೂ 200ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳಿವೆ. 30 ಸರ್ಕಾರಿ ಸಂಸ್ಥೆಗಳು ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ’ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

‘ದೇಶದ ಒಟ್ಟಾರೆ ಶೇ 60ರಷ್ಟು ಬಯೋ ಫಾರ್ಮ ಉತ್ಪನ್ನಗಳು ನಮ್ಮ ರಾಜ್ಯದಲ್ಲಿಯೇ ಆಗುತ್ತಿವೆ. ದೇಶದ ಒಟ್ಟು ಬಯೋ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಮೂರನೇ ಒಂದು ಭಾಗದಷ್ಟು ಕರ್ನಾಟಕದಿಂದಲೇ ಆಗುತ್ತಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ಒಟ್ಟಾರೆ ಮಾನವ ಸಂಪನ್ಮೂಲದಲ್ಲಿ ಶೇ 54ರಷ್ಟು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದೆ. ಹೊಸ ಅಂಕಿ ಅಂಶಗಳ ಪ್ರಕಾರ ಶೇ 18ರಷ್ಟು ಸ್ಟಾರ್ಟ್‌ ಅಪ್‌ಗಳು ನಮ್ಮ ರಾಜ್ಯದಲ್ಲಿಯೇ ಇವೆ. ವಾರ್ಷಿಕ ಶೇ 30ರಷ್ಟು ಪ್ರಗತಿ ದಾಖಲಿಸುತ್ತಿವೆ. ಒಂದು ವರ್ಷಕ್ಕೆ 7,500ಕ್ಕೂ ಹೆಚ್ಚು ಬಿಟಿ ಪದವೀಧರರು ಕಾಲೇಜುಗಳಿಂದ ಹೊರಬರುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿದ್ದ ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥರಾಗಿದ್ದ, ಬಯೋಕಾನ್ ಕಂಪನಿಯ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ‘ಕೊನೆಗೂ ಈ ಯೋಜನೆ ಸಾಕಾರ ಆಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT