ಮಂಗಳವಾರ, ನವೆಂಬರ್ 19, 2019
28 °C
‘ಎಲ್ಲಿಗೆ ಬಂತು ನೆಟ್ ಸಾಹಿತ್ಯ’ ಗೋಷ್ಠಿ: ಲೇಖಕ ರಾಜೇಂದ್ರ ಪ್ರಸಾದ್‌ ಅಭಿಮತ

‘ಖಿನ್ನತೆಗೆ ಒಳಗಾಗಿರುವ ಹಿರಿಯ ಸಾಹಿತಿಗಳು’

Published:
Updated:

ಬೆಂಗಳೂರು: ‘ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದನ್ನು, ಮೌಲ್ಯಯುತವಾದುದನ್ನು ಬರೆಯಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಹಿರಿಯ ಸಾಹಿತಿಗಳು, ಫೇಸ್‌ಬುಕ್‌ ಕವಿಗಳಿಗೆ ಈಗ ಸಿಗುತ್ತಿರುವ ಜನಪ್ರಿಯತೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ’ ಎಂದು ಬರಹಗಾರ ರಾಜೇಂದ್ರ ಪ್ರಸಾದ್‌ ವ್ಯಂಗ್ಯವಾಡಿದರು. 

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಎಲ್ಲಿಗೆ ಬಂತು ನೆಟ್ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ಪುಸ್ತಕಗಳನ್ನು ಓದುವವರು ಕಡಿಮೆ ಆಗಿದ್ದಾರೆ ಎಂಬ ಬೇಸರ ಹಿರಿಯ ಸಾಹಿತಿಗಳನ್ನು ಕಾಡುತ್ತಿದೆ. ಆ ಪೈಕಿ ಕೆಲವರು ಈಗ ನೆಟ್ ಕಡೆಗೆ ನಿಧಾನವಾಗಿ ಮುಖಮಾಡುತ್ತಿದ್ದಾರೆ’ ಎಂದರು. 

‘ಅಂತರ್ಜಾಲದಲ್ಲಿ ಸಾಹಿತ್ಯದ ಪ್ರಕಟಣೆ ಸುಲಭವಾಗಿದೆ. ಪ್ರತಿಭೆ ಅನಾವರಣಕ್ಕೆ ಹಾಗೂ ಆ ಮೂಲಕ ಭಾಷೆಯ ಬೆಳವಣಿಗೆಗೂ ವಿಪುಲ ಅವಕಾಶಗಳಿವೆ’ ಎಂದು ಅವರು ಪ್ರತಿಪಾದಿಸಿದರು. .

‘ಇಂದು ಒಬ್ಬ ಎಂಜಿನಿಯರ್, ವ್ಯಾಪಾರಿ, ಕೂಲಿ.. ಹೀಗೆ ಯಾರು ಬೇಕಾದರೂ ದಿನಕ್ಕೆ ಹತ್ತು ಕವಿತೆ ಬರೆದು, ನೂರಾರು ಜನರಿಗೆ ಅದನ್ನು ತಲುಪಿಸುವುದು ಸಾಧ್ಯವಾಗಿದೆ. ಅವರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಬಲ್ಲ. ಹೀಗೆ ಅಭಿವ್ಯಕ್ತಿಗೆ ತಕ್ಕನಾದ ವೇದಿಕೆಗಳು ಈಗ ಮುಕ್ತವಾಗಿವೆ’ ಎಂದರು.

‘ಕನ್ನಡದಲ್ಲಿ ಬರೆಯುವವರಿಗೆ ತಾಂತ್ರಿಕ ಸಮಸ್ಯೆಗಳು ಕಾಡುತ್ತಿವೆ. ನುಡಿ ಮತ್ತು ಯೂನಿಕೋಡ್‌ ತಂತ್ರಾಂಶ ಪರಿವರ್ತನೆಗೆ ಕಷ್ಟ ಪಡಬೇಕಾಗಿದೆ. ಅಲ್ಲದೆ, ವಿಕಿಪಿಡಿಯಾದಲ್ಲಿ ಕನ್ನಡದಲ್ಲಿ ಮಾಹಿತಿ ಭರ್ತಿ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಸದ್ಯ, ವಿಡಿಪಿಡಿಯಾದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಮಾಹಿತಿ ಹಾಕುವವರ ಸಂಖ್ಯೆ ತುಂಬಾ ಕಡಿಮೆ ಇದೆ’ ಎಂದು ಹೇಳಿದರು.

ಪತ್ರಕರ್ತೆ ಟೀನಾ ಶಶಿಕಾಂತ್, ‘ನಾವು ಸಹಜವಾಗಿ ಅಥವಾ ವೈಯಕ್ತಿಕವಾಗಿ ಬಳಸುವ ಪದಗಳು ನೆಟ್ ಸಾಹಿತ್ಯದಲ್ಲಿ ಬಳಕೆ ಆಗುವುದರಿಂದ ಕೆಲವರಿಗೆ ಇದು ಮುಜುಗರ ತಂದಿದೆ‘ ಎಂದು ಅಭಿಪ್ರಾಯಪಟ್ಟರು.

‘ಇದು ಗಂಭೀರವಾದ ಸಾಹಿತ್ಯ ಅಲ್ಲ. ಈ ಮಾರ್ಗದಲ್ಲಿ ನಮ್ಮ ಸಾಹಿತ್ಯ ಬೆಳೆಯಬೇಕಾ ಎಂಬ ಪ್ರಶ್ನೆಗಳು ಮತ್ತು ಅನುಮಾನಗಳು ಬಂದಿದ್ದೂ ಇದೆ. ಆದರೆ, ಇದೆಲ್ಲದರ ನಡುವೆಯೂ ನೆಟ್ ಸಾಹಿತ್ಯ ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡುವ ಮಾಧ್ಯಮವಾಗಿ ಬೆಳೆಯುತ್ತಿದೆ’ ಎಂದರು.

ಪ್ರತಿಕ್ರಿಯಿಸಿ (+)