ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಶನಿವಾರ ರಾತ್ರಿಯಿಂದಲೇ ಲಾಕ್‌ಡೌನ್: ಮನೆಯಲ್ಲೇ ಕಾಲ ಕಳೆದ ಜನ

ಕೆಲವೆಡೆ ಆಟೊ, ವಾಹನಗಳ ಸಂಚಾರ
Last Updated 12 ಜುಲೈ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಜನ ರಸ್ತೆಗಳು, ಬಿಕೊ ಎನ್ನುತ್ತಿದ್ದ ನಿಲ್ದಾಣಗಳು, ಮಾರುಕಟ್ಟೆಗಳು. ಡಿಪೊದಲ್ಲಿ ಸಾಲಾಗಿ ನಿಲ್ಲಿಸಿದ್ದ ಬಿಎಂಟಿಸಿ ಬಸ್‌ಗಳು. ಬಾಗಿಲು ಮುಚ್ಚಿದ್ದ ವಾಣಿಜ್ಯ ಚಟುವಟಿಕೆ ಮಳಿಗೆಗಳು. ಮೇಲ್ಸೇತುವೆ ಹಾಗೂ ಪ್ರಮುಖ ರಸ್ತೆಗೆ ಕಾವಲಾದ ಬ್ಯಾರಿಕೇಡ್‌ಗಳು.

ರಾಜ್ಯ ಸರ್ಕಾರ ಜಾರಿ ಮಾಡಿದ್ದ ಲಾಕ್‌ಡೌನ್‌ನಿಂದಾಗಿ ಭಾನುವಾರ ನಗರದಲ್ಲಿ ಕಂಡುಬಂದ ದೃಶ್ಯಗಳಿವು. ಕೊರೊನಾ ಹರಡುವಿಕೆ ತಡೆಗಾಗಿ ತಿಂಗಳ ಪ್ರತಿ ಭಾನುವಾರ ಲಾಕ್‌ಡೌನ್‌ ಘೋಷಿಸಲಾಗಿದೆ. ಕಳೆದ ಭಾನುವಾರ (ಜುಲೈ 5) ಲಾಕ್‌ಡೌನ್‌ ಯಶಸ್ವಿಯಾಗಿತ್ತು. ಈ ಭಾನುವಾರದ ಲಾಕ್‌ಡೌನ್‌ಗೂ ಉತ್ತಮವಾಗಿ ಸ್ಪಂದಿಸಿದ ಬಹುತೇಕ ಜನ, ಮನೆಯಲ್ಲೇ ದಿನ ಕಳೆದರು.

ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಾಗ ಜಾರಿ ಮಾಡಲಾಗಿದ್ದ ಲಾಕ್‌ಡೌನ್ ಸಡಿಲಿಕೆ ನಂತರ ನಗರದಲ್ಲಿ ವಾಹನಗಳ ಓಡಾಟ ಹೆಚ್ಚಾಗಿದೆ. ಸಂಚಾರ ದಟ್ಟಣೆಯೂ ವಿಪರೀತವಾಗಿದೆ. ಆದರೆ, ಭಾನುವಾರ ಪುನಃ ಲಾಕ್‌ಡೌನ್‌ ಇದ್ದಿದ್ದದಿಂದ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಅಗತ್ಯ ವಸ್ತುಗಳ ಸರಬರಾಜು ವಾಹನ ಹಾಗೂ ಆಂಬುಲೆನ್ಸ್ ಹೊರತುಪಡಿಸಿ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ನಗರದ ಪ್ರಮುಖ ರಸ್ತೆಗಳು ನಿರ್ಜನವಾಗಿ ಗೋಚರಿಸಿದವು.

ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆಯಲ್ಲೂ ವಾಹನಗಳ ಸಂಚಾರ ವಿರಳವಾಗಿತ್ತು. ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರು.

ಶನಿವಾರ ರಾತ್ರಿ 8ರಿಂದ ಕರ್ಫ್ಯೂ ಸಮೇತ ಲಾಕ್‌ಡೌನ್ ಜಾರಿಯಾಗಿದ್ದರಿಂದ ಭಾನುವಾರ ಬೆಳಿಗ್ಗೆ ಬಹುತೇಕ ಜನರು ಮನೆಯಿಂದ ಹೊರಗೆ ಬರಲಿಲ್ಲ. ಅಗತ್ಯ ವಸ್ತು ಹಾಗೂ ತುರ್ತು ಸೇವೆಗಳನ್ನು ಹೊರತುಪಡಿಸಿ ಉದ್ಯಾನಗಳು, ಮದ್ಯದಂಗಡಿ ಹಾಗೂ ಇತರೆ ಸೇವೆಗಳ ಮಳಿಗೆಗಳನ್ನು ಬಂದ್ ಮಾಡಲಾಗಿತ್ತು. ಹಾಲು, ಔಷಧ, ದಿನಸಿ, ಮೀನು, ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.

ನಗರದ ಹೃದಯ ಭಾಗವಾದ ಮೆಜೆಸ್ಟಿಕ್‌ಗೆ ನಿತ್ಯವೂ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಭಾನುವಾರ ಬಸ್‌ಗಳ ಓಡಾಟ ಸ್ಥಗಿತ ಮಾಡಿದ್ದರಿಂದ ನಿಲ್ದಾಣ ಬಿಕೊ ಎನ್ನುತ್ತಿತ್ತು. ನಿಲ್ದಾಣಹಾಗೂ ಸುತ್ತಮುತ್ತ ಕೆಲ ಆಟೊಗಳ ಓಡಾಟವೂ ಕಂಡುಬಂತು. ನೃಪತುಂಗ ರಸ್ತೆ, ಕೋರಮಂಗಲ, ಮಡಿವಾಳ, ಪಶ್ಚಿಮ ವೆಸ್ಟ್ ಕಾರ್ಡ್‌ ರಸ್ತೆಯಲ್ಲಿ ಕೆಲ ಸಾರ್ವಜನಿಕರ ವಾಹನಗಳ ಓಡಾಟವೂ ಇತ್ತು.

ಗೃಹ ಸಚಿವ ಸುತ್ತಾಟ: ಲಾಕ್‌ಡೌನ್‌ ಪರಿಶೀಲನೆಗಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಗರದಲ್ಲಿ ಸುತ್ತಾಡಿದರು. ಕೆ.ಆರ್.ಮಾರುಕಟ್ಟೆ, ಸಿರ್ಸಿ ವೃತ್ತ, ಮೆಜೆಸ್ಟಿಕ್, ಮಲ್ಲೇಶ್ವರ, ಯಶವಂತಪುರ , ಆರ್.ಎಂ.ಸಿ. ಯಾರ್ಡ್ ಹಾಗೂ ಪೀಣ್ಯ ಪ್ರದೇಶಗಳಿಗೆ ಭೇಟಿ ನೀಡಿದರು. ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇದ್ದರು.

ಮದುವೆಯಲ್ಲಿ ನಿಯಮ ಉಲ್ಲಂಘನೆ
ಲಾಕ್‌ಡೌನ್‌ ಸಂದರ್ಭದಲ್ಲೇ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮದುವೆಯೊಂದನ್ನು ಏರ್ಪಡಿಸಲಾಗಿತ್ತು. 100ಕ್ಕೂ ಹೆಚ್ಚು ಮಂದಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಹಲವರು ಮಾಸ್ಕ್ ಧರಿಸಿರಲಿಲ್ಲ. ಅಂತರವನ್ನೂ ಪಾಲಿಸಿರಲಿಲ್ಲ.

ಮದುವೆ ಬಗ್ಗೆ ಮಾಹಿತಿ ಪಡೆದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ದೇವಸ್ಥಾನಕ್ಕೆ ಬಂದು ನವದಂಪತಿ ಹಾಗೂ ಕುಟುಂಬದವರನ್ನು ಪ್ರಶ್ನಿಸಿದರು. ಅಷ್ಟರಲ್ಲೇ ಮದುವೆ ಮುಗಿದಿತ್ತು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT