ಬುಧವಾರ, ಜೂನ್ 23, 2021
23 °C
ನೆಲಮಟ್ಟದಿಂದ 29 ಮೀಟರ್‌ ಎತ್ತರದವರೆಗೆ ತಲೆ ಎತ್ತಲಿದೆ ಮೆಟ್ರೊ ಸ್ಟೇಷನ್‌

ಜಯದೇವ ಇಂಟರ್‌ಚೇಂಜ್‌: ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

metro train

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಇಂಟರ್‌ಚೇಂಜ್‌ ಮೆಟ್ರೊ ನಿಲ್ದಾಣವು ನಗರದ ಮೊದಲ ಬಹುಹಂತದ ಎಲಿವೇಟೆಡ್‌ ನಿಲ್ದಾಣ ಎನಿಸಿಕೊಳ್ಳಲಿದೆ.

‘ಜಯದೇವ ಇಂಟರ್‌ಚೇಂಜ್‌ ಮೆಟ್ರೊ ನಿಲ್ದಾಣದಲ್ಲಿ ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಲಿದೆ. ಐದನೇ ಹಂತ ನೆಲಮಟ್ಟದಿಂದ 29 ಮೀಟರ್‌ ಎತ್ತರದಲ್ಲಿರಲಿದೆ. ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣ ಇದು ಎನಿಸಿಕೊಳ್ಳಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಯದೇವ ಮೇಲ್ಸೇತುವೆಯನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ. ಡಬಲ್‌ ಡೆಕ್ಕರ್‌ ಮೇಲ್ಸೇತುವೆ ಬದಿಯಲ್ಲಿ ರೆಕ್ಕೆ ಜೋಡಿಸುವ ಕಾರ್ಯವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರಸ್ತೆ–ರೈಲು ಮಾರ್ಗ ಮೇಲ್ಸೇತುವೆಯ ಪಿಲ್ಲರ್‌ ಅಳವಡಿಸುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು. 

ಅಂದಾಜು ₹130 ಕೋಟಿ ವೆಚ್ಚದಲ್ಲಿ ಈ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ. 2023ರ ಮೇ ವೇಳೆಗೆ, ಈ ನಿಲ್ದಾಣದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ನಿಗಮದ ಮೂಲಗಳು ಹೇಳಿವೆ.

ಪರ್ಯಾಯ ಮೇಲ್ಸೇತುವೆ:

ಈ ಭಾಗದಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಬೇಕೆಂದರೆ ಜಯದೇವ ಮೇಲ್ಸೇತುವೆಯನ್ನು ಧ್ವಂಸಗೊಳಿಸುವುದು ಬಿಎಂಆರ್‌ಸಿಎಲ್‌ಗೆ ಅನಿವಾರ್ಯವಾಗಿತ್ತು. ಕಳೆದ ಜನವರಿಯಲ್ಲಿ ಪ್ರಾರಂಭವಾದ ಮೇಲ್ಸೇತುವೆ ಧ್ವಂಸ ಕಾರ್ಯ ಮೇ ತಿಂಗಳಿನವರೆಗೆ ನಡೆಯಿತು. 

ಈ ಮೇಲ್ಸೇತುವೆ ಧ್ವಂಸಗೊಳಿಸಿದ್ದಕ್ಕೆ ಪರ್ಯಾಯವಾಗಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್‌ ಬೋರ್ಡ್‌ವರೆಗೆ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ನಿಗಮ ಹೇಳಿತ್ತು. ಹಳದಿ ಮಾರ್ಗದ ಮೆಟ್ರೊ ಲೈನ್‌ ಮೇಲೆ ಈ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇದು ನಗರದ ಮೊದಲ ಡಬಲ್‌ ಡೆಕ್ಕರ್‌ ಕಾರಿಡಾರ್‌ ಎನಿಸಿಕೊಳ್ಳಲಿದೆ. ಈ ಸೇತುವೆ ಕೂಡ ಇಂಟರ್‌ಚೇಂಜ್‌ ನಿಲ್ದಾಣದ ಮೂಲಕವೇ ಹಾದು ಹೋಗಲಿದೆ. 

ಹೀಗೆ, ಇಂಟರ್‌ಚೇಂಜ್‌ ನಿಲ್ದಾಣದಲ್ಲಿ ಅಂಡರ್‌ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನಗಳ ಸಂಚಾರ, ಅದರ ಮೇಲೆ ರಾಗಿಗುಡ್ಡ–ಸಿಲ್ಕ್‌ಬೋರ್ಡ್‌ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣವಾಗಲಿದ್ದು, ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದೆ. ಗುಲಾಬಿ–ಹಳದಿ ಮಾರ್ಗದ ಮಧ್ಯೆದ ಸ್ಥಳದಲ್ಲಿ ಎಎಫ್‌ಸಿ ಗೇಟ್‌ಗಳು, ಟಿಕೆಟ್‌ ಕೌಂಟರ್‌ ಮತ್ತಿತರ ಕಟ್ಟಡಗಳು ತಲೆ ಎತ್ತಲಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು