ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೋದಿ, ಶಾ ವಿರುದ್ಧ ಘೋಷಣೆ

Last Updated 23 ಡಿಸೆಂಬರ್ 2019, 1:51 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಗರದ ಪುರಭವನದ ಎದುರು ಭಾನುವಾರ ಸಂಜೆ ಘೋಷಣೆಗಳು ಮೊಳಗಿದವು.

ಬಹುತ್ವ ಭಾರತ, ಬಲಿಷ್ಠ ಭಾರತ ಅಭಿಯಾನದಲ್ಲಿ ಸೇರಿದ್ದ ಸಾವಿರಾರು ಮಂದಿ ‘ಆಜಾದಿ’ ಘೋಷಣೆಗಳನ್ನು ಕೂಗಿದರು. ಸಂಜೆ 4 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ಮೊದಲಿಗೆ ನೂರು ಮಂದಿ ಇದ್ದರು. ಯುವಕ–ಯುವತಿಯರ ದಂಡು ತಂಡೋಪ
ತಂಡವಾಗಿ ಬಂದು ಸೇರಿಕೊಂಡಿತು. ಆಯೋಜಕರ ನಿರೀಕ್ಷೆಗೂ ಮೀರಿ ಸೇರಿದ ಯುವ ಪಡೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿ ಕಾರಿತು. ಸಿಎಎ, ಎನ್‌ಆರ್‌ಸಿ ವಿರುದ್ಧ ಬರೆದುಕೊಂಡು ಬಂದಿದ್ದ ಘೋಷಣೆಗಳ ಫಲಕಗಳನ್ನು ಎತ್ತಿ ಹಿಡಿದು ಪೌರತ್ವ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.

‘ಮೋದಿ, ಅಮಿತ್ ಶಾ ಚೋರ್ ಹೈ’, ‘ಆವಾಜ್‌ ದೋ ಅಂಬೇಡ್ಕರ್’ ಮತ್ತು ‘ಆಜಾದಿ’ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗಿದರು. ಹೋರಾಟಗಾರರು ಕ್ರಾಂತಿ ಗೀತೆಗಳನ್ನು ಹಾಡಿ ಪ್ರತಿಭಟನಕಾರರನ್ನು ಹುರಿದುಂಬಿಸಿದರು.

ಸಾಹಿತಿ ಕೆ. ಮರುಳಸಿದ್ಧಪ್ಪ ಮಾತನಾಡಿ, ‘ಧರ್ಮ, ಜಾತಿ ಆಧಾರದಲ್ಲಿ ಕಾಯ್ದೆ ರೂಪಿಸುವುದು ಸರಿಯಲ್ಲ. ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ನಮ್ಮ ವಿರೋಧವಿಲ್ಲ. ಮುಸಲ್ಮಾನರನ್ನು ಬಿಟ್ಟು ಉಳಿದವರಿಗೆ ಪೌರತ್ವ ಕೊಡುತ್ತೇವೆ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‌ಬಿಜೆಪಿಯಿಂದ ಹಸಿ ಸುಳ್ಳು: ‘ಪೌರತ್ವ(ತಿದ್ದುಪಡಿ) ಕಾಯ್ದೆಗೂ ರಾಷ್ಟ್ರೀಯ ಪೌರತ್ವ ನೋಂದಣಿಗೂ(ಎನ್ಆರ್‌ಸಿ) ಸಂಬಂಧವಿಲ್ಲ. ಭಾರತೀಯ ಮುಸ್ಲಿಮರ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಹಸಿ ಸುಳ್ಳನ್ನು ಬಿಜೆಪಿ ಹೇಳುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಹೇಳಿದರು.‌

ಆಯೋಜಕರೇ ಗಲಿಬಿಲಿ: ಸಾಂಸ್ಕೃತಿಕ ವಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ಸಂಘಟಕರು ಪ್ರತಿಭಟನೆ ಆಯೋಜಿಸಿದ್ದರು. ಹಾಡು ಮತ್ತು ಬೀದಿ ನಾಟಕಗಳು, ಹಿರಿಯ ಸಾಹಿತಿಗಳಿಂದ ಭಾಷಣ ಮಾಡಿಸುವ ಉದ್ದೇಶವನ್ನು ಅವರು ಹೊಂದಿದ್ದರು. ಆದರೇ, ನಿರೀಕ್ಷೆಗೂ ಮೀರಿ ಸೇರಿದ ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಅವರ ಮಾತುಗಳಿಗೆ ಕಿವಿಗೊಡದೆ ಘೋಷಣೆಗಳನ್ನು ಮೊಳಗಿಸಿದರು. ಸಣ್ಣದೊಂದು ಸ್ಪೀಕರ್ ಇದ್ದ ಮೈಕ್‌ನಲ್ಲಿ ಆಯೋಜಕರು ಹೇಳಿದ ಮಾತುಗಳು ಸಾಕಷ್ಟು ಜನರ ಕಿವಿಗೆ ತಲುಪಲೇ ಇಲ್ಲ.

ರಂಗಕರ್ಮಿ ಪ್ರಸನ್ನ, ಲೇಖಕರಾದ ವಿಜಯಮ್ಮ, ಎಸ್.ಜಿ. ಸಿದ್ಧರಾಮಯ್ಯ, ಕೆ. ಶರೀಫಾ, ಜಿ.ಎನ್. ನಾಗರಾಜ್, ಶ್ರೀಪಾದ್ ಭಟ್, ಯೋಗೇಶ್ ಮಾಸ್ಟರ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT