ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಅಭಿವೃದ್ಧಿ: ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸಿಂಹಪಾಲು ಅನುದಾನ

ಆಡಳಿತ ಪಕ್ಷದ ಕ್ಷೇತ್ರಗಳಿಗೆ ₹1,100 ಕೋಟಿ
Last Updated 6 ಜನವರಿ 2022, 20:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ₹ 1,479.55 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಬಿಬಿಎಂ‍ಪಿಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಬಿಜೆಪಿಯ 15 ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಒಟ್ಟು₹1,100 ಕೋಟಿ, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ 9 ಕ್ಷೇತ್ರಗಳಿಗೆ ಒಟ್ಟು ₹248 ಕೋಟಿ ಹಾಗೂ ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌ ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಕ್ಕೆ ₹125 ಕೋಟಿ ಅನುದಾನ ಹಂಚಿಕೆಯ ಪ್ರಸ್ತಾವವಿದೆ. ಜಯನಗರ ಹಾಗೂ ಬಿಟಿಎಂ ಬಡಾವಣೆ ಕ್ಷೇತ್ರಗಳಿಗೆ ಯಾವುದೇ ಅನುದಾನದ ಉಲ್ಲೇಖವಿಲ್ಲ. ‘ಈ ಸಲವೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಶೇ 73ರಷ್ಟು ಅನುದಾನ ಹಂಚಿಕೆ ಮಾಡುವ ಮೂಲಕ ತಾರತಮ್ಯ ಎಸಗಲಾಗಿದೆ’ ಎಂದು ಕಾಂಗ್ರೆಸ್‌ನ ಶಾಸಕರು ಆರೋಪಿಸಿದ್ದಾರೆ.

‘ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಯಶವಂತಪುರ, ಕೆ.ಆರ್‌.‍ಪುರ, ಮಹದೇವಪುರದಂತಹ ಹೊರವಲಯದ ಕ್ಷೇತ್ರಗಳಲ್ಲಿ ಸಮಸ್ಯೆ ಹೆಚ್ಚು ಇದೆ. ಹೀಗಾಗಿ, ಅಲ್ಲಿಗೆ ಹೆಚ್ಚಿನ ಅನುದಾನ ಹಂಚಿಕೆ ಆಗಿದೆ. ನಗರದ ಹೃದಯ ಭಾಗದ ಕ್ಷೇತ್ರಗಳಿಗೆ ಸಹಜವಾಗಿ ಕಡಿಮೆ ಅನುದಾನ ನೀಡಲಾಗಿದೆ. ಇದರಲ್ಲಿ ತಾರತಮ್ಯ ಆಗಿಲ್ಲ’ ಎಂದು ಬಿಜೆಪಿಯ ಶಾಸಕರು ಸಮರ್ಥಿಸಿಕೊಂಡಿದ್ದಾರೆ.

2021ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹ ಉಂಟಾಗಿದೆ. ಅಧಿಕ ಮಳೆಯಿಂದಾಗಿ ರಾಜಕಾಲುವೆಗಳ ತಡೆಗೋಡೆಗಳು ಶಿಥಿಲಗೊಂಡು ಹಾನಿಯಾಗಿದೆ.

ನಗರದಲ್ಲಿ 842 ಕಿ.ಮೀ. ಉದ್ದದ ನಾಲ್ಕು ಪ್ರಮುಖ ರಾಜಕಾಲುವೆಗಳು ಮತ್ತು ದ್ವಿತೀಯ ಹಂತದ 97 ಕಿ.ಮೀ ರಾಜಕಾಲುವೆಗಳು ಇದ್ದು, 2018–19, 2019–20, 2020–21ರಲ್ಲಿ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಯಲ್ಲಿ 112 ಕಿ.ಮೀ. ಉದ್ದದ ಪ್ರಥಮ ಮತ್ತು ದ್ವಿತೀಯ ಹಂತದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಅನುಮೋದನೆಗೊಂಡಿದ್ದವು. ಈ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

2021ರ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಯಲಹಂಕ ವಲಯದ ಕೇಂದ್ರೀಯ ವಿಹಾರ, ಟಾಟಾ ನಗರ ಮತ್ತು ಜೆ.ಎನ್.ಆರ್.ಸಿ ಆವರಣ, ಮಹದೇವಪುರ ವಲಯದ ಕಸವನಹಳ್ಳಿ, ಗೆದ್ದಲಹಳ್ಳಿ, ಆರ್.ಆರ್. ನಗರ ವಲಯದ ಪ್ರಮೋದ್ ಬಡಾವಣೆ, ದೊಡ್ಡಬಿದಿರಕಲ್ಲು, ಬೊಮ್ಮನಹಳ್ಳಿ ವಲಯದ ಎಚ್.ಎಸ್.ಆರ್ ಬಡಾವಣೆ, ದಾಸರಹಳ್ಳಿ ವಲಯ ಗುಂಡಪ್ಪ ಬಡಾವಣೆ, ದಕ್ಷಿಣ ವಲಯದ ಕೆ.ಪಿ.ಅಗ್ರಹಾರ, ಮನುವನ, ಪಶ್ಚಿಮ ವಲಯದ ಸಣ್ಣಕ್ಕಿ ಬಯಲು, ಪೂರ್ವ ವಲಯದ ಟೆಲಿಕಾಂ ಬಡಾವಣೆ, ನಾಗವಾರಪಾಳ್ಯ ಹಾಗೂ ಇತರೆ ಸ್ಥಳಗಳು ಜಲಾವೃತಗೊಂಡಿದ್ದವು. ಪ್ರವಾಹದಿಂದ ಹಾನಿ ಉಂಟಾಗುವುದನ್ನು ತಪ್ಪಿಸಲು ತುರ್ತಾಗಿ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪ್ರಥಮ ಹಂತದ ರಾಜಕಾಲುವೆಗಳು (60.82 ಕಿ.ಮೀ) ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳು ( 97.10 ಕಿ.ಮೀ) ಅಭಿವೃದ್ಧಿಪಡಿಸಲು ಒಟ್ಟು 292 ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದ್ದು, ಇದಕ್ಕೆ ₹1,479 ಕೋಟಿ ಅನುದಾನದ ಅಗತ್ಯ ಇದೆ. ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ಬಿಬಿಎಂಪಿಯು ಪ್ರಸ್ತಾವದಲ್ಲಿ ತಿಳಿಸಿದೆ.

‘ಹೊರ ವಲಯದ ಕ್ಷೇತ್ರಗಳಿಗೆ ಆದ್ಯತೆ’

‘ಮಳೆಯಿಂದಾಗಿ ಕ್ಷೇತ್ರದ ಹಲವು ಕಡೆ ರಾಜಕಾಲುವೆ ಉಕ್ಕಿ ಹರಿದು ಸಮಸ್ಯೆ ಉಂಟಾಗಿತ್ತು. ಮುಖ್ಯಮಂತ್ರಿಯವರು ಸ್ಥಳ ಪರಿಶೀಲನೆ ನಡೆಸಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಗರದ 320 ಕಿ.ಮೀ. ಉದ್ದದ ರಾಜಕಾಲುವೆಗಳ ಅಭಿವೃದ್ಧಿಯಾಗಬೇಕಿದ್ದು, ಸದ್ಯ ತುರ್ತು ಕಾಮಗಾರಿ ಅಗತ್ಯ ಇರುವ 150 ಕಿ.ಮೀ. ರಾಜಕಾಲುವೆಗೆ ಅನುದಾನ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಉಳಿದ ರಾಜಕಾಲುವೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಲಿದೆ. ಹೊರವಲಯದ ಕ್ಷೇತ್ರಗಳಲ್ಲಿ ಹೆಚ್ಚು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗಿದೆ’

- ಎಂ. ಸತೀಶ್‌ ರೆಡ್ಡಿ, ಬಿಜೆಪಿ ಶಾಸಕ

‘ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಿ’

‘ದಾಸರಹಳ್ಳಿ ಕ್ಷೇತ್ರದ 11 ಕಿ.ಮೀ. ರಾಜಕಾಲುವೆಗಳ ಅಭಿವೃದ್ಧಿಗೆ ₹130 ಕೋಟಿ ಅನುದಾನ ಬೇಕೆಂದು ಮುಖ್ಯಮಂತ್ರಿ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದೆ. ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯವರು ಬಿಬಿಎಂಪಿಗೆ ಸೂಚಿಸಿದ್ದರು. ₹125 ಕೋಟಿ ಅನುದಾನ ಸಿಕ್ಕಿದರೆ ರಾಜಕಾಲುವೆಗಳ ಸಮಸ್ಯೆ ಸದ್ಯ ಬಗೆಹರಿಯಲಿದೆ. 110 ಹಳ್ಳಿಗಳು, ವಾರ್ಡ್‌ಗಳ ಹಾಗೂ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ ₹400 ಕೋಟಿಯಾದರೂ ಬೇಕು. ಅದಕ್ಕೂ ಅನುದಾನ ನೀಡುವ ವಿಶ್ವಾಸ ಇದೆ’.

- ಆರ್‌.ಮಂಜುನಾಥ್‌, ಜೆಡಿಎಸ್‌ ಶಾಸಕ

‘ಒಂದು ರೂಪಾಯಿ ಅನುದಾನವೂ ಇಲ್ಲ’

‘ಬಿಟಿಎಂ ಬಡಾವಣೆ ಹಾಗೂ ಜಯನಗರ ಕ್ಷೇತ್ರಗಳ ರಾಜಕಾಲುವೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆದರೂ, ಎರಡೂ ಕ್ಷೇತ್ರಗಳಿಗೆ ನಯಾಪೈಸೆ ಅನುದಾನ ನೀಡದೆ ತಾರತಮ್ಯ ಮಾಡಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಜತೆ ಮಾತನಾಡಿದ್ದು, ಲೋಪ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ತಾರತಮ್ಯ ಸರಿ ಮಾಡದಿದ್ದರೆ ಬಿಬಿಎಂಪಿ ಕಚೇರಿ ಎದುರು ಧರಣಿ ನಡೆಸುತ್ತೇವೆ’.

- ರಾಮಲಿಂಗಾ ರೆಡ್ಡಿ, ಕಾಂಗ್ರೆಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT