ಬುಧವಾರ, ಜನವರಿ 22, 2020
27 °C

ಕೆಂಪೇಗೌಡ ಅಧ್ಯಯನ ಪೀಠಕ್ಕಾಗಿ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ‘ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ’ ಸ್ಥಾಪನೆ ವಿಚಾರವು ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಟಾಪಟಿಗೆ ಕಾರಣವಾಗಿದೆ.

ಅನುದಾನ ಕೊರತೆ ಕಾರಣದಿಂದ ಕೇಂದ್ರ ಸ್ಥಾಪನೆಯ ಪ್ರಸ್ತಾವನೆ ಕೈಬಿಡಲು ನಗರಾಭಿವೃದ್ಧಿ ಇಲಾಖೆಯು ಸಿದ್ಧತೆ ನಡೆಸಿತ್ತು.

ಇದು ರಾಜಕೀಯ ತಿರುವು ಪಡೆದುಕೊಂಡ ಕೂಡಲೇ ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಮಧ್ಯ ಪ್ರವೇಶಿಸಿ ಪ್ರಸ್ತಾವನೆ ಕೈಬಿಡದಂತೆ ತಡೆದಿದ್ದಾರೆ.

ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪನೆಗೆ ಈ ಹಿಂದಿನ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಬಿಬಿಎಂಪಿ ಬಜೆಟ್‌ನಲ್ಲಿ ₹50 ಕೋಟಿ ಘೋಷಣೆ ಮಾಡಲಾಗಿತ್ತು. ಆದರೆ, ₹10 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಬಿಬಿಎಂಪಿಯಲ್ಲಿ ಅನುದಾನ ಲಭ್ಯವಿಲ್ಲದ  ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಉನ್ನತಾಧಿಕಾರ ಸಮಿತಿಯು ಕಾಮಗಾರಿಯನ್ನು ಕೈಬಿಡಲು ಮತ್ತು ಟೆಂಡರ್ ರದ್ದುಪಡಿಸಲು ತೀರ್ಮಾನಿಸಿ ನವೆಂಬರ್ 18ರಂದು ಬಿಬಿಎಂಪಿಗೆ ಪತ್ರ ಬರೆದಿತ್ತು. ಉಪಮುಖ್ಯಮಂತ್ರಿ ಅವರು ನಗರಾಭಿವೃದ್ಧಿ ಇಲಾಖೆಗೆ ಬುಧವಾರ ಪತ್ರ ಬರೆದು ಯೋಜನೆಯ ಮರುಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.

ಇದಕ್ಕೆ ಉತ್ತರ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ ಕುಮಾರ್‌, ‘ಈಗಾಗಲೇ ಯೋಜನಾ ವರದಿ ಸಿದ್ಧಗೊಂಡಿದ್ದು, ಬೆಂಗಳೂರು ವಿಶ್ವವಿದ್ಯಾಲಯವು 3 ಎಕರೆ ಜಾಗವನ್ನೂ ನೀಡಿದೆ. ಬಿಬಿಎಂಪಿಯ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ನಿರೀಕ್ಷೆಗೊಳಪಟ್ಟು ಪ್ರಸ್ತಾವನೆಯನ್ನು ಆಡಳಿತಾತ್ಮಕ ಅನುಮೋದನೆ ಕೋರಿ ಮಂಡಿಸಿದೆ’ ಎಂದು ತಿಳಿಸಿದ್ದಾರೆ.

ಯೋಜನೆ ಕೈಬಿಟ್ಟಿಲ್ಲ: ಮುಖ್ಯಮಂತ್ರಿ

ಕೆಂಪೇಗೌಡ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆ ಯೋಜನೆಯನ್ನು ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಅನುದಾನದ ಕೊರತೆ ಹಾಗೂ ನೆರೆ ಹಾವಳಿ ಕಾರಣದಿಂದ ತಾತ್ಕಾಲಿಕವಾಗಿ ಯೋಜನೆ ಮುಂದೂಡಲು ಯೋಚಿಸಲಾಗಿತ್ತು. ಯೋಜನೆ ವರದಿ ಈಗಾಗಲೇ ಸಿದ್ಧವಾಗಿದೆ. ಮುಂದಿನ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಲಾಗುವುದು’ ಎಂದು ತಿಳಿಸಿದ್ದಾರೆ.

‘ರಾಜಕೀಯ ದುರುದ್ದೇಶದ ಕ್ರಮ’

‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಕೆಂಪೇಗೌಡ ಅಧ್ಯಯನ ಪೀಠವನ್ನು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ರಾಜಕೀಯ ದುರುದ್ದೇಶದಿಂದ ರದ್ದುಪಡಿಸಲು ಮುಂದಾಗಿದೆ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಲಿಕೆಯ ₹ 50 ಕೋಟಿ ಅನುದಾನದೊಂದಿಗೆ ಅಧ್ಯಯನ ಪೀಠ ಸ್ಥಾಪಿಸುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಶಂಕುಸ್ಥಾಪನೆ ನೆರವೇರಿಸಿತ್ತು. ಈ ಕುರಿತ ಟೆಂಡರ್‌ ಪ್ರಕ್ರಿಯೆಗಳೂ ಅಂತಿಮಗೊಂಡಿದ್ದವು. ಆದರೆ, ಕಳೆದ ನವೆಂಬರ್‌ 18ರಂದು ಅಧ್ಯಯನ ಪೀಠವನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು ಎಂದು ಅವರು ಹೇಳಿದರು.

‘ಈ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ ಎಂಬುದು ಗೊತ್ತಾದ ಬಳಿಕ ಸರ್ಕಾರ ಪೀಠದ ಸ್ಥಾಪನೆ ರದ್ದುಪಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆದಿದೆ. ವಿಶ್ವ ಮಟ್ಟದಲ್ಲಿ ಖ್ಯಾತವಾಗಿರುವ ಬೆಂಗಳೂರಿನ ಸ್ಥಾಪಕರಾದ ಕೆಂಪೇಗೌಡರ ಇತಿಹಾಸ, ಅವರ ಚಿಂತನೆಗಳ ಕುರಿತ ಅಧ್ಯಯನಕ್ಕೆ ಈ ಪೀಠವು ನೆರವಾಗಲಿದೆ. ಆದರೆ, ಬಿಜೆಪಿ ಸರ್ಕಾರ ಅದನ್ನು ರದ್ದುಪಡಿಸಲು ಮುಂದಾಗಿದ್ದು ಸರಿಯಲ್ಲ’ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು