ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ವಿವಿ: ಪುಸ್ತಕ ಖರೀದಿಯಲ್ಲಿ ಅಕ್ರಮ’

Last Updated 17 ಜನವರಿ 2021, 1:59 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪತ್ರಿಕೆಗಳಲ್ಲಿನ ಅಂಕಗಳನ್ನು ತಿದ್ದಿದ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ , ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪುಸ್ತಕ ಖರೀದಿಯಲ್ಲಿಯೂ ಅಕ್ರಮ ನಡೆದಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರು ಆರೋಪಿಸಿದ್ದಾರೆ.

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸುಮಾರು ₹30 ಲಕ್ಷ ಮೌಲ್ಯದ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿದೆ’ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಗೆ ಅರ್ಜಿ ಆಹ್ವಾನಿಸಿತ್ತು. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 992 ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ನೀಡುವುದಕ್ಕಾಗಿ ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ಘಟಕವು ₹30.69 ಲಕ್ಷ ಮೌಲ್ಯದ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿಸಿದೆ. ಆದರೆ, ಈ ಪುಸ್ತಕಗಳ ಖರೀದಿ ವೇಳೆ ನಿಯಮಗಳನ್ನು ಪಾಲಿಸಿಲ್ಲ’ ಎಂದು ಸಿಂಡಿಕೇಟ್‌ನ ಹಿರಿಯ ಸದಸ್ಯ ಗೋಪಿನಾಥ್ ದೂರಿದ್ದಾರೆ.

‘ಜಿಎಸ್‌ಟಿ ಸಂಖ್ಯೆ ಇಲ್ಲದ ಬಿಲ್‌ ಕೊಟ್ಟಿರುವ ಖಾಸಗಿ ಕಂಪನಿಯಿಂದ ಪುಸ್ತಕಗಳನ್ನು ಖರೀದಿಸಲಾಗಿದೆ. ಟೆಂಡರ್‌ನಲ್ಲಿ ಇದಕ್ಕಿಂತ ಕಡಿಮೆ ಮೊತ್ತ ನಮೂದಿಸಿದ ಕಂಪನಿಗಳನ್ನು ಬಿಟ್ಟು, ಈ ಖಾಸಗಿ ಕಂಪನಿಯಿಂದ ಪುಸ್ತಕ ಖರೀದಿಸಲಾಗಿದೆ’ ಎಂದು ಅವರು ಹೇಳಿದರು.

₹65 ಲಕ್ಷ ಬಿಲ್‌:‘ವಿಶ್ವವಿದ್ಯಾಲಯದಲ್ಲಿ ಪುಸ್ತಕಗಳನ್ನು ವಿತರಿಸುವುದರ ಜೊತೆಗೆ, ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ ಹಾಗೂ ಅವುಗಳನ್ನು ಇಟ್ಟುಕೊಳ್ಳಲು ಕಪಾಟುಗಳನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ₹65 ಲಕ್ಷ ಬಿಲ್ ಮಾಡಲಾಗಿದೆ. ಈ ವರ್ಷ ಬಹುತೇಕ ಕಾಲೇಜುಗಳು ಬಂದ್‌ ಆಗಿದ್ದವು. ಆದರೂ ಬಿಲ್‌ ಮಂಜೂರು ಮಾಡಲಾಗಿದೆ. ಈ ಬಾರಿ ವಿದ್ಯಾರ್ಥಿಗಳಿಗೆ ಇದರಿಂದ ನಿಜಕ್ಕೂ ಅನುಕೂಲವಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯಬೇಕಿದೆ’ ಎಂದು ಸಿಂಡಿಕೇಟ್ ಸದಸ್ಯ ಡಾ. ಎಚ್. ಸುಧಾಕರ್ ಹೇಳಿದರು.

‘ಪುಸ್ತಕ ಖರೀದಿ ವೇಳೆ ಅಕ್ರಮ ನಡೆದಿದೆ ಎಂದು ದೂರುಗಳು ಬಂದಿವೆ. ಎಸ್‌ಸಿ, ಎಸ್‌ಟಿ ಸಮಿತಿಗೆ ನೋಟಿಸ್‌ ಕೂಡ ಕೊಟ್ಟಿದ್ದೇನೆ ಮತ್ತು ಈ ಸಂಬಂಧ ವರದಿ ನೀಡುವಂತೆ ಸೂಚಿಸಿದ್ದೇನೆ. ಸಮಿತಿಯು ವರದಿ ನೀಡಿದ ನಂತರ ಅದನ್ನು ಸಿಂಡಿಕೇಟ್ ಮುಂದೆ ಇಡುತ್ತೇನೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವರಾದ (ಆಡಳಿತ) ಕೆ. ಜ್ಯೋತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT