ಶನಿವಾರ, ಮಾರ್ಚ್ 25, 2023
29 °C
ಸದಸ್ಯರು ಜನಪ್ರತಿನಿಧಿಗಳಂತೆ ನಡೆದುಕೊಳ್ಳಬಾರದು– ತಜ್ಞರ ಅಭಿಮತ

ವಿಚಾರ ಕಲರವ ಕಲಹ ಪ್ರಕರಣ: ಆದೇಶಿಸುವ ಅಧಿಕಾರ ಸಿಂಡಿಕೇಟ್‌ ಸದಸ್ಯರಿಗಿಲ್ಲ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಲಪತಿ ಮತ್ತು ಕುಲಸಚಿವರ ನಡುವಣ ಶೀತಲ ಸಮರಕ್ಕೆ ಸಾಕ್ಷಿಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದಲ್ಲೀಗ ಸಿಂಡಿಕೇಟ್‌ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು–ಬೋಧಕ ಸಿಬ್ಬಂದಿಯ ನಡುವೆ ‘ಜಟಾಪಟಿ’ ನಡೆಯುತ್ತಿದೆ. ಜೊತೆಗೆ, ಸಿಂಡಿಕೇಟ್‌ ಸದಸ್ಯರ ಅಧಿಕಾರ ಮತ್ತು ಪಾತ್ರವೇನು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ವಿಶ್ವವಿದ್ಯಾಲಯದಲ್ಲಿ ವಿಚಾರ ಕಲರವ ಎಂಬ ಕಾರ್ಯಕ್ರಮ ನಡೆಯುತ್ತಿದೆ. ದಿನಕ್ಕೊಬ್ಬರು ಗಣ್ಯರು ಮುಖ್ಯ ಅತಿಥಿಯಾಗಿ ಬಂದು ಉಪನ್ಯಾಸ ನೀಡುತ್ತಿದ್ದಾರೆ. ಈ ಎಲ್ಲ ಕಾರ್ಯಕ್ರಮಕ್ಕೆ ಕುಲಪತಿಯವರೇ ಅಧ್ಯಕ್ಷತೆ ವಹಿಸುತ್ತಿದ್ದಾರೆ ಎಂದು ಸಿಂಡಿಕೇಟ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಕಾರ್ಯಕ್ರಮದ ನಿರ್ವಹಣೆ ಹೊಣೆ ಹೊತ್ತಿದ್ದ ಎನ್ಎಸ್‌ಎಸ್‌ ಸಂಯೋಜನಾಧಿಕಾರಿ ಡಾ. ಸತೀಶ್‌ಗೌಡ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

ಇದಕ್ಕೂ ಮುನ್ನ, ಸಿಂಡಿಕೇಟ್ ಸದಸ್ಯರು, ಕಾರ್ಯಕ್ರಮ ಸಂಯೋಜನಾಧಿಕಾರಿಯನ್ನು ಕರೆಸಿಕೊಂಡು ನೇರವಾಗಿ ಈ ಬಗ್ಗೆ ಪ್ರಶ್ನಿಸಿರುವುದು ಮತ್ತು ಆದೇಶಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

‘ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯ ಪ್ರಕಾರ, ಸಿಂಡಿಕೇಟ್‌ ಸದಸ್ಯರು ವಿಶ್ವವಿದ್ಯಾಲಯದ ಯಾವುದೇ ಸಿಬ್ಬಂದಿ ಅಥವಾ ಪ್ರಾಧ್ಯಾಪಕರನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸುವ ರೀತಿಯಲ್ಲಿ ಮಾತನಾಡಿಸುವಂತಿಲ್ಲ. ಸಿಬ್ಬಂದಿಯ ಕುರಿತು ಯಾವುದೇ ದೂರುಗಳಿದ್ದರೆ ಕುಲಪತಿ, ಕುಲಸಚಿವರ ಗಮನಕ್ಕೆ ತರಬೇಕು ಅಥವಾ ವರದಿ ನೀಡಬೇಕೇ ವಿನಾ ಯಾವುದೇ ಆದೇಶ ಮಾಡುವಂತಿಲ್ಲ’ ಎಂದು ಬೇರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಸಿಂಡಿಕೇಟ್‌ನ ಅನೇಕ ಸದಸ್ಯರಿಗೆ ಕಾನೂನು ಗೊತ್ತಿರುವುದಿಲ್ಲ. ಹಲವರು ನಿಯಮಾವಳಿಗಳ ಪುಸ್ತಕವನ್ನೇ ಓದಿರುವುದಿಲ್ಲ. ಸಿಂಡಿಕೇಟ್‌ ಚುನಾಯಿತ ಮಂಡಳಿಯಲ್ಲ, ಸಲಹಾ ಮಂಡಳಿಯಷ್ಟೇ. ಸಿಂಡಿಕೇಟ್‌ ಸದಸ್ಯರೂ ಚುನಾಯಿತರಲ್ಲ, ನಾಮನಿರ್ದೇಶನಗೊಂಡಿರುತ್ತಾರೆ. ಅವರು ಜನಪ್ರತಿನಿಧಿಗಳಂತೆ ವರ್ತಿಸಲು ಪ್ರಾರಂಭಿಸಿದರೆ ಇಂತಹ ಸಮಸ್ಯೆಗಳು ಉದ್ಭವಿಸುತ್ತವೆ’ ಎಂದೂ ಅವರು ಹೇಳಿದರು.

‘ವಿಶ್ವವಿದ್ಯಾಲಯದಲ್ಲಿನ ಇಂತಹ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾರ್ವಜನಿಕರೂ ಗಮನಿಸುತ್ತಿದ್ದಾರೆ. ಕುಲಪತಿ, ಕುಲಸಚಿವರು, ಪ‍್ರಾಧ್ಯಾಪಕರು ಮತ್ತು ಸಿಂಡಿಕೇಟ್‌ ಸದಸ್ಯರ ನಡುವಣ ಹೊಂದಾಣಿಕೆಯ ಕೊರತೆ ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ತರುತ್ತಿದೆ’ ಎಂದು ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ವಿಶ್ವವಿದ್ಯಾಲಯದ ಎಲ್ಲ ಪ್ರಕ್ರಿಯೆಗಳು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯ ಪ್ರಕಾರವೇ ನಡೆಯಬೇಕು. ವಿಶ್ವವಿದ್ಯಾಲಯದ ಆಡಳಿತ ಮತ್ತು ಹಣಕಾಸು ಪ್ರಕ್ರಿಯೆಗಳು ಸಿಂಡಿಕೇಟ್‌ನಲ್ಲಿ ತೆಗೆದುಕೊಂಡ ನಿರ್ಣಯಗಳಂತೆಯೇ ನಡೆಯುತ್ತದೆ. ಸಿಂಡಿಕೇಟ್‌ಗೆ ಕುಲಪತಿಯವರೇ ಮುಖ್ಯಸ್ಥರು. ಸಿಂಡಿಕೇಟ್‌ ಸದಸ್ಯರು ಸಲಹೆ ನೀಡಬಹುದು. ದೂರುಗಳಿದ್ದರೆ ಅಥವಾ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂದರೆ, ಅವರು ಕುಲಪತಿ ಅಥವಾ ಕುಲಸಚಿವರಿಗೆ ಲಿಖಿತವಾಗಿ ತಿಳಿಸಬೇಕು. ಕುಲಪತಿಯವರ ತೀರ್ಮಾನ ಅಂತಿಮವಾಗಿರುತ್ತದೆ’ ಎಂದು ಕುಲಸಚಿವರಾದ (ಆಡಳಿತ) ಕೆ. ಜ್ಯೋತಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು