ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಜಯನಗರ ಕಾಸ್ಮೊಪಾಲಿಟನ್‌ ಕ್ಲಬ್: ನೋಂದಣಿಗೂ ಸಂಚಕಾರ!

ಸಹಕಾರ ಇಲಾಖೆ ನೋಂದಣಿ ಪ್ರಕ್ರಿಯೆಯಲ್ಲಿ ಅನುಮೋದಿಸಿರುವ ಬೈಲಾ ಉಲ್ಲಂಘನೆ
Published 24 ಆಗಸ್ಟ್ 2023, 23:35 IST
Last Updated 24 ಆಗಸ್ಟ್ 2023, 23:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಡಿಎಯೊಂದಿಗಿನ ಸಿ.ಎ ನಿವೇಶನ ಗುತ್ತಿಗೆ ಕರಾರು ಉಲ್ಲಂಘಿಸಿ ತನಿಖೆ ಎದುರಿಸುತ್ತಿರುವ ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌, ಬೈಲಾ ಉಲ್ಲಂಘನೆಯಿಂದ ಅದರ ನೋಂದಣಿಯೇ ರದ್ದಾಗುವ ಸಂಭವವಿದೆ.

‘ಸಾಮಾಜಿಕ ಕಾರ್ಯ ಮಾಡುತ್ತೇವೆ’ ಎಂದು ಬಿಡಿಎ, ಸಹಕಾರ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿರುವ ಕಾಸ್ಮೊಪಾಲಿಟನ್‌ ಕ್ಲಬ್‌, ಅದರ ಬೈಲಾದಲ್ಲೂ ಅದನ್ನೇ ಹೇಳಿದೆ. ಆದರೆ, ಈವರೆಗೆ ಒಂದು ಸಣ್ಣ ಸಮಾಜಮುಖಿ ಕೆಲಸ ಆಗಿಲ್ಲ. ಬದಲಿಗೆ, ಕ್ಲಬ್‌ಗಾಗಿ ಸಾಮಾಜಿಕ ಕಾರ್ಯ ಮಾಡುತ್ತಿರುವ ‘ಟ್ರಸ್ಟ್‌ ಮುಚ್ಚಿಬಿಡಿ’ ಎಂದು ಸಾಮಾನ್ಯ ಸಭೆಯಲ್ಲಿ ಹೇಳಿರುವ ವಿಷಯಗಳು ಸಹಕಾರ ಸಂಘಗಳ ಉಪನಿಬಂಧಕರಿಗೆ ತಲುಪಿದೆ.

ಸಂಘದ ಬೈಲಾದಲ್ಲಿ (2.6) ಅಗತ್ಯವಿರುವವರಿಗೆ ನೆರವಾಗುವ ಉದ್ದೇಶ ನಮೂದಿಸಲಾಗಿದೆ. ಆದರೆ, ಈವರೆಗೆ ಕ್ಲಬ್‌ನಿಂದ ಇಂತಹ ಒಂದು ಕೆಲಸವೂ ನಡೆದಿಲ್ಲ. ಕ್ಲಬ್‌ನ ಸಾಮಾನ್ಯ ಸಭೆ ಅನುಮೋದಿಸಿದ್ದ ‘ಕಾಸ್ಮೊಪಾಲಿಟನ್‌ ಕ್ಲಬ್‌ ಕಾರ್ಪಸ್‌ ಫಂಡ್‌ ಟ್ರಸ್ಟ್‌’ ತನ್ನದೇ ದಾನಿಗಳಿಂದ ಹಣ ಸಂಗ್ರಹಿಸಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿತ್ತು. ‘ಸಾವಿರ ಜನಕ್ಕೆ ಉಚಿತವಾಗಿ ನೀಡುತ್ತಿದ್ದ ಊಟದ ವ್ಯವಸ್ಥೆ ಮುಂದುವರಿಸಬಾರದು. ಜೊತೆಗೆ ಟ್ರಸ್ಟ್‌ ರದ್ದು ಮಾಡಬೇಕು. ಸಾಮಾಜಿಕ ಜವಾಬ್ದಾರಿಗೆ ಹಣ ನೀಡಬೇಕಿಲ್ಲ. ಅದನ್ನು ಕ್ಲಬ್‌ ಸದಸ್ಯರು, ಲೈಸೆನ್ಸ್‌ ನವೀಕರಣಕ್ಕೆ ಉಪಯೋಗಿಸಬೇಕು’ ಎಂದು ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ಅದನ್ನು ನಿರ್ಣಯ ಮಾಡಲಾಗಿದೆ. ಇದನ್ನು ಸಹಕಾರ ಇಲಾಖೆ ಗಂಭೀರವಾಗಿ ಪರಿಶೀಲಿಸುತ್ತಿದ್ದು, ನೋಂದಣಿ ರದ್ದುಪಡಿಸುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜುಲೈ 30ರಂದು ನಡೆದ ಕಾಸ್ಮೊಪಾಲಿಟನ್‌ ಕ್ಲಬ್‌ನ ಸಾಮಾನ್ಯ ಸಭೆಯ ಪೂರ್ಣ ಮಾಹಿತಿ ಮಲ್ಲೇಶ್ವರದಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಆಗಸ್ಟ್‌ 19ರಂದು ತಲುಪಿದೆ. ಸಹಕಾರ ಸಂಘಗಳ ಕಾಯ್ದೆ, ಬೈಲಾದಲ್ಲಿರುವ ಉದ್ದೇಶ ಸೇರಿದಂತೆ ಹಲವು ರೀತಿಯ ನಿಯಮಗಳನ್ನು ಉಲ್ಲಂಘಿಸಿ ಕೈಗೊಳ್ಳಲು ಸದಸ್ಯರು ಒತ್ತಾಯಿಸಿರುವ ಅಂಶಗಳನ್ನು ಇಲಾಖೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.

ಮದ್ಯದ ಲೈಸೆನ್ಸ್ ರದ್ದು!

ಸಹಕಾರ ಸಂಘಗಳ ನೋಂದಣಿಯಲ್ಲಿ ನಮೂದಾಗಿರುವ ಸಾಮಾಜಿಕ ಅಂಶಗಳಿಂದಲೇ ಅಬಕಾರಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕಾಸ್ಮೊಪಾಲಿಟನ್‌ ಕ್ಲಬ್‌ಗೆ ‘ಸಿಎಲ್‌–4’ ಲೈಸೆನ್‌ ನೀಡಲಾಗಿದೆ. ವರ್ಷಕ್ಕೆ ₹7.47 ಲಕ್ಷ ಶುಲ್ಕದೊಂದಿಗೆ ಈ ಲೈಸೆನ್ಸ್‌ ನೀಡಲಾಗಿದೆ. ಸಹಕಾರ ಸಂಘಗಳ ನೋಂದಣಿ ರದ್ದಾದರೆ ಈ ಮದ್ಯದ ಲೈಸೆನ್ಸ್ ಕೂಡ ರದ್ದಾಗುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸಾಮಾನ್ಯ ಸಭೆಯಲ್ಲಿ ಕೇಳಿಬಂದ ಮಾತುಗಳು

* ಪಾರ್ಕಿಂಗ್‌ ಜಾಗದಲ್ಲಿ ಊಟ ಹಾಕುತ್ತೀರಿ ಕಾರ್‌ ನಿಲ್ಲಿಸಲು ಹೋದರೆ ಅಡುಗೆ ವಾಸನೆ ತರಕಾರಿ–ಈರುಳ್ಳಿ ವಾಸನೆ ಬರುತ್ತದೆ. ಇದನ್ನು ನೋಡಿಕೊಂಡು ನಾವು ಹೋಗಬೇಕಾ? * ಊಟ ಸಿಗದವರಿಗೆ ಊಟ ಹಾಕುವುದು ಬೇಕಾಗಿಲ್ಲ. ಕ್ಲಬ್‌ ಲೈಸೆನ್ಸ್‌ ನವೀಕರಣಕ್ಕೆ ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳಿ. * ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಬೇಕಂತೆ ಆ ರೀತಿ ಆಗಿದೆ. ಮಿಡ್‌–ಡೇ ಮೀಲ್‌ ಬೇಕಿಲ್ಲ. * ನಿಮಗೆ ಅಷ್ಟೊಂದು ನೋಬಲ್‌ ಕಾಸ್‌ ಇದ್ದರೆ ಇಸ್ಕಾನ್‌ ಅಕ್ಷಯ ಪಾತ್ರೆ ಅವರಿಗೆ ಕೊಡಿ. ಅವರು ನೀವು ಹೇಳಿದ ಕಡೆ ಊಟ ಹಾಕುತ್ತಾರೆ. ಇಲ್ಲಿ ಬೇಡ. * ಇದು ಸಾಮಾಜಿಕ ಕ್ಲಬ್‌ ಅಲ್ಲ ಮನೋರಂಜನಾ ಕ್ಲಬ್‌. ಬೈಲಾ ಸಂವಿಧಾನ ಸುಪ್ರೀಂ ಅಲ್ಲ. ಆಕ್ಟ್‌ ಸುಪ್ರೀಂ. ಇಲ್ಲಿರುವ ಎಲ್ಲ ಸೌಲಭ್ಯಗಳು ಸದಸ್ಯರಿಗೆ ಮಾತ್ರ. * ಸಿಎಸ್‌ಆರ್‌ ನಿಧಿಯಲ್ಲಿ ಶೇ 50 ಹಣ ಟ್ರಸ್ಟ್‌ಗೆ ಕೊಡಬೇಕು. ಒಂದು ನಯಾಪೈಸೆಯೂ ಬಂದಿಲ್ಲ. ಮಧ್ಯಾಹ್ನದ ಊಟದಂತಹ ಪವಿತ್ರ ಕೆಲಸಕ್ಕೆ ಏಕೀ ಗೊಂದಲ? * ಸಾಮಾಜಿಕ ಕೆಲಸಗಳ ಬದಲು ಕ್ಲಬ್‌ಗೆ ಶಟಲ್‌ ರಾಕೆಟ್ಸ್‌ ಟೆನ್ನಿಸ್‌ ಬಾಲ್‌ ಮದ್ಯ ಮತ್ತು ಇತರೆ ವಸ್ತುಗಳನ್ನು ಪ್ರಾಯೋಜಕರಿಂದ ಪಡೆದುಕೊಳ್ಳಬಹುದು.

ಕೋಟಿ ಪುಣ್ಯ ಬರುತ್ತೆ...

‘ನಿತ್ಯ ಈ ಪ್ರದೇಶದಲ್ಲೇ ಕಸ ಗುಡಿಸಿ ಎಲ್ಲವನ್ನೂ ಸ್ವಚ್ಛ ಮಾಡುತ್ತೇವೆ. ಮಧ್ಯಾಹ್ನ ಒಳ್ಳೆಯ ಊಟ ಹಾಕುತ್ತಿದ್ದರು. ತುಂಬಾ ಸಂತೋಷವಾಗಿತ್ತು. ಆದರೆ ನಿಲ್ಲಿಸಿದ್ದಾರೆ. ಊಟ ಕೊಟ್ಟರೆ ಅವರಿಗೆ ಕೋಟಿ ಪುಣ್ಯ ಬರುತ್ತದೆ’ ಎಂದು ಕಾಸ್ಮೊಪಾಲಿಟನ್‌ ಕ್ಲಬ್‌ ಸುತ್ತಮುತ್ತ ಕಾರ್ಯನಿರ್ವಹಿಸುವ ಪೌರಕಾರ್ಮಿಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT