ಗುರುವಾರ , ಅಕ್ಟೋಬರ್ 6, 2022
23 °C
ಬಿಬಿಎಚ್‌ಎನಿಂದ ದ್ವಿತೀಯ ಆವೃತ್ತಿ ಕಾರ್ಯಕ್ರಮ: 12 ವಿಭಾಗಗಳಲ್ಲಿ ಪ್ರಶಸ್ತಿ

20ಕ್ಕೆ ‘ಫುಡ್‌ ಅವಾರ್ಡ್‌’ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ (ಬಿಬಿಎಚ್‌ಎ) ವತಿಯಿಂದ ನೀಡುವ ದ್ವಿತೀಯ ಆವೃತ್ತಿಯ ‘ಫುಡ್‌ ಅವಾರ್ಡ್‌’ನ ಪ್ರದಾನ ಸಮಾರಂಭ ಇದೇ 20ರಂದು ರೆಸಿಡೆನ್ಸಿ ರಸ್ತೆಯ ‘ದಿ ಚಾನ್ಸರಿ ಪೆವಿಲಿಯನ್‌’ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದರು.

‘ಕೋವಿಡ್‌ ಸಾಂಕ್ರಾಮಿಕದಿಂದ ಕಳೆದ ಎರಡು ಸಾಲಿನಲ್ಲಿ ಪ್ರಶಸ್ತಿ ಪ್ರದಾನ ಸಾಧ್ಯವಾಗಿರಲಿಲ್ಲ. ಈ ವರ್ಷ 12 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘242 ನಾಮ ನಿರ್ದೇಶನಗಳು ಬಂದಿದ್ದವು. ಆಹಾರ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಮೂವರನ್ನು ಜ್ಯೂರಿಯಾಗಿ ನೇಮಿಸಲಾಗಿದೆ. ಕಾರ್ಯಕ್ರಮದಂದು ವಿಜೇತರ ಆಯ್ಕೆ ಘೋಷಿಸಲಾಗುವುದು’ ಎಂದರು.

‘ಗ್ರಾಹಕರ ಜತೆಗೆ ಉತ್ತಮ ಬಾಂಧವ್ಯ, ಶುಚಿತ್ವ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೇವೆ, ಗುಣಮಟ್ಟ ಎಲ್ಲವನ್ನೂ ಪರಿಶೀಲಿಸಿ ಜ್ಯೂರಿಗಳು ಪ್ರಶಸ್ತಿ ಘೋಷಿಸಲಿದ್ದಾರೆ’ ಎಂದರು.

‘ಸಂಘವು ಮಾಲೀಕರು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿ ಸುತ್ತಿದೆ. ಬೆಂಗಳೂರಿನಲ್ಲಿ ಈಚೆಗೆ ಉಂಟಾಗಿದ್ದ ನೆರೆ ಹಾವಳಿ ವೇಳೆ ಸಂತ್ರಸ್ತರಿಗೆ ವಸತಿಗೃಹದಲ್ಲಿ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ರೈತರಿಗೂ ನೆರವು ನೀಡಲಾಗುತ್ತಿದೆ’ ಎಂದರು.

ಸಂಯೋಜಕ ಅರುಣ್‌ ಅಡಿಗ ಮಾತನಾಡಿ, ‘ಪಿ.ಕೆ.ಮೋಹನ್‌ಕುಮಾರ್‌, ನಿಮಿಶ್‌ ಭಾಟಿಯಾ ಹಾಗೂ ಪ್ರಿಯಾ ಅರ್ಜುನ್‌ ತೀರ್ಪುಗಾರರು. ಹೋಟೆಲ್‌ಗಳಿಗೆ ಖುದ್ದು ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ 20 ಸಾವಿರ ಹೋಟೆಲ್‌ಗಳಿವೆ. ಸದಸ್ಯರಿಗೆ ಮಾತ್ರ ನಾಮನಿರ್ದೇಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಎಚ್‌.ಎಸ್‌.ಸುಬ್ರಹ್ಮಣ್ಯ ಹೊಳ್ಳ, ರಾಧಾಕೃಷ್ಣ ಅಡಿಗ, ವೀರೇಂದ್ರ ಎನ್‌. ಕಾಮತ್‌, ಎ.ಎಲ್‌.ರಾಕೇಶ್‌, ಜಿ.ಸುಧಾಕರ್‌ ಶೆಟ್ಟಿ ಇದ್ದರು.

‘ನೈಟ್‌ಲೈಫ್‌’ಗೆ ಸಿಗದ ಅನುಮತಿ

ಬೆಂಗಳೂರು: ‘ಹೋಟೆಲ್‌ಗಳಲ್ಲಿ ರಾತ್ರಿಯಿಡೀ ವ್ಯಾಪಾರಕ್ಕೆ ಸರ್ಕಾರವು ಅನುಮತಿ ನೀಡಿದ್ದರೂ ಪೊಲೀಸರು ಮಾತ್ರ ಅವಕಾಶ ನೀಡುತ್ತಿಲ್ಲ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ (ಬಿಬಿಎಂಎ) ಅಧ್ಯಕ್ಷ ಪಿ.ಸಿ.ರಾವ್‌ ದೂರಿದರು.

‘ಎಂ.ಜಿ.ರಸ್ತೆ, ಶೇಷಾದ್ರಿಪುರಂ, ಮಲ್ಲೇಶ್ವರ, ವಿಕ್ಟೋರಿಯ ರಸ್ತೆ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ 24X7 ವ್ಯಾಪಾರಕ್ಕೆ ಅನುಮತಿ ಕೋರಲಾಗಿತ್ತು. ಅದಕ್ಕೆ ಸರ್ಕಾರವು ಒಪ್ಪಿದೆ. ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 1ರ ತನಕ ಮಾತ್ರ ಪೊಲೀಸರು ಅನುಮತಿ ನೀಡಿದ್ಧಾರೆ. ಆದರೆ, ಗಸ್ತು ಪೊಲೀಸರು ರಾತ್ರಿ 11ಕ್ಕೇ ಹೋಟೆಲ್‌ ಬಂದ್ ಮಾಡಿಸುತ್ತಿದ್ದಾರೆ’ ಎಂದು ದೂರಿದರು.

‘ಪ್ರಮುಖ ಸ್ಥಳಗಳಲ್ಲಿ ಗುಜರಾತ್‌, ಮಹಾರಾಷ್ಟ್ರಗಳಲ್ಲಿ ‘ನೈಟ್‌ಲೈಫ್‌’ಗೆ ಅಲ್ಲಿನ ಸರ್ಕಾರ ಅವಕಾಶ ನೀಡಿದೆ. ರಾಜ್ಯದಲ್ಲೂ ಅವಕಾಶ ನೀಡಿದರೆ ಉದ್ಯಮ ಸಹ ಬೆಳೆಯಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು