ಮೇ 7ಕ್ಕೆ ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ: ಸಿ.ಸೋಮಶೇಖರ

ಬೆಂಗಳೂರು: ‘ಬಸವ ವೇದಿಕೆ ವತಿಯಿಂದ ಬಸವ ಜಯಂತಿ ಹಾಗೂ ‘ಬಸವಶ್ರೀ’, ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 7ರಂದು ಬೆಳಿಗ್ಗೆ 10.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ ತಿಳಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘2022ನೇ ಸಾಲಿನ ‘ಬಸವಶ್ರೀ’ ಪ್ರಶಸ್ತಿಗೆ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ಕುಲಾಧಿಪತಿ ಎಚ್.ಆರ್.ನಾಗೇಂದ್ರ ಹಾಗೂ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗೆ ಬೀದರ್ ಜಿಲ್ಲೆಯ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ವಚನಗಾರ್ತಿ ಗಂಗಾಂಬಿಕಾ ಅವರನ್ನು ಆಯ್ಕೆ ಮಾಡಲಾಗಿದೆ. ವಚನ ಸಾಹಿತ್ಯಶ್ರೀ ₹10 ಸಾವಿರ ನಗದು ಒಳಗೊಂಡಿದೆ’ ಎಂದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಸತಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
‘ಇದೇ ಕಾರ್ಯಕ್ರಮದಲ್ಲಿ ಬಸವ ಜ್ಯೋತಿ ಸಂಚಿಕೆ ಬಿಡುಗಡೆ ಮಾಡಲಾಗುವುದು. ಬೆಳಿಗ್ಗೆ 9.30ರಿಂದ ಗಾಯಕಿ ಸುಪ್ರಿಯಾ ರಘುನಂದನ್ ಅವರಿಂದ ವಚನ ಗಾಯನ ಇರಲಿದೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.