ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಗುರುವಿಗೆ ವಂದನೆ; ಸಾಮರಸ್ಯದ ಪ್ರತಿಪಾದನೆ

ನಗರದಲ್ಲಿ ಸಂಭ್ರಮದಿಂದ ಬಸವೇಶ್ವರರ ಜಯಂತಿ ಆಚರಣೆ
Last Updated 3 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಯಕ ಯೋಗಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ನಗರದೆಲ್ಲೆಡೆ ಮಂಗಳವಾರ ಆಚರಿಸಲಾಯಿತು.

ಆಡುಗೋಡಿಯ ಪೊಲೀಸ್‌ ವಸತಿ ಸಮುಚ್ಚಯದಲ್ಲಿ ನೆಲೆಸಿರುವ ಮುಸ್ಲಿಮರು ಈದ್‌ ಉಲ್‌ ಫಿತ್ರ್‌ ಜೊತೆಗೆ ಬಸವ ಜಯಂತಿಯನ್ನೂ ಆಚರಿಸಿ ಸಾಮರಸ್ಯದ ಸಂದೇಶ ಸಾರಿದರು.

ಬೆಳಿಗ್ಗೆ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದ ಪೊಲೀಸ್‌ ಸಿಬ್ಬಂದಿ, ಅಲ್ಲಿಂದ ಮರಳಿದ ಬಳಿಕ ವಸತಿಗೃಹದ ಆವರಣದಲ್ಲಿ ಬಸವೇಶ್ವರರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದರು.

ವಿಜಯನಗರದ ವಚನ ಜ್ಯೋತಿ ಬಳಗದವರು ‘ಬಸವಣ್ಣನವರೊಡನೆ ಹೆಜ್ಜೆ ಹಾಕೋಣ ಬನ್ನಿ’ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಬೇಲಿಮಠದ ಶಿವರುದ್ರ ಸ್ವಾಮೀಜಿ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಭಾಗವಹಿಸಿದ್ದರು.

ಬಸವೇಶ್ವರನಗರದ ಬಸವ ಬಳಗವು ಶಿವನಗರದ ಸಿದ್ಧಗಂಗಾ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜಾಜಿನಗರ ಶಾಸಕ ಎಸ್‌.ಸುರೇಶ್‌ಕುಮಾರ್‌, ಶಿವಬಸವ ಸ್ವಾಮೀಜಿ ಹಾಗೂ ವೀರಶೈವ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ ಅವರು ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಹಂಪಿ ನಗರದಲ್ಲಿ ನಾಗರಿಕರಿಗೆ ಪಾನಕ ಹಾಗೂ ಮಜ್ಜಿಗೆ ವಿತರಿಸಲಾಯಿತು. ವಿಲ್ಸನ್‌ಗಾರ್ಡನ್‌ನ ಮಾರುತಿ ವಿದ್ಯಾಲಯ, ಜಯಕರ್ನಾಟಕ ಸಂಘಟನೆಯ ಕೇಂದ್ರ ಕಚೇರಿಯಲ್ಲೂಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜಾಜಿನಗರ ಕನ್ನಡ ಸಂಘದ ವತಿಯಿಂದಲೂ ಜಯಂತಿ ಏರ್ಪಡಿಸಲಾಗಿತ್ತು. ಕೆ.ಆರ್‌.ಪುರದ ರೆಡ್ಡಿ ಪಾಳ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿಅಬಕಾರಿ ಸಚಿವ ಕೆ.ಗೋಪಾಲಯ್ಯ ಭಾಗವಹಿಸಿದ್ದರು.

ಗೋವಿಂದರಾಜನಗರ ಕ್ಷೇತ್ರದ ದಾಸರಹಳ್ಳಿ ವಾರ್ಡ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ,ಬಸವೇಶ್ವರರ ಪುತ್ಥಳಿಗೆ ವಸತಿ ಸಚಿವ ವಿ.ಸೋಮಣ್ಣ ಪುಷ್ಪ ನಮನ ಸಲ್ಲಿಸಿದರು.

‘ಬಸವಣ್ಣನವರ ಸ್ಮರಣಾರ್ಥ ದಾಸರಹಳ್ಳಿಯಲ್ಲಿ ಬಸವ ವನ ಸ್ಥಾಪಿಸಿದ್ದೇವೆ. ಅವರ ಜೀವನ ಚರಿತ್ರೆ ಸಾರುವ ಚಿತ್ರಗಳು ಹಾಗೂ ವಚನಗಳನ್ನು ಅಲ್ಲಿ ಹಾಕುವ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT