ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಕಾಮಗಾರಿಗಳ ಅನುಷ್ಠಾನ | ಶಾಸಕರ ನೇತೃತ್ವದ ಸಮಿತಿ ರಚನೆ ಇಲ್ಲ

ಪಾಲಿಕೆ ಸದಸ್ಯರ ತೀವ್ರ ವಿರೋಧಕ್ಕೆ ಮಣಿದ ಮೇಯರ್ ಗಂಗಾಂಬಿಕೆ
Last Updated 10 ಜುಲೈ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಸಮಿತಿ ರಚನೆಯ ಪ್ರಸ್ತಾವವನ್ನು ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ವಿರೋಧಿಸಿದರು.

ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಸಭೆಯಲ್ಲಿ ಈ ವಿಷಯ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ‘ಪ್ರತಿ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ಸಮಿತಿಗಳಿವೆ. ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಅದಾಗ್ಯೂ, ಕ್ಷೇತ್ರವಾರು ಸಮಿತಿ ರಚನೆ ಮಾಡುವ ಅಗತ್ಯ ಏನಿದೆ’ ಎಂದು ಪ್ರಶ್ನಿಸಿದರು.

‘ಸಂವಿಧಾನದ ಪ್ರಕಾರ ನಮ್ಮದು ಸ್ಥಳೀಯ ಸರ್ಕಾರ. ನಮ್ಮ ಅಧಿಕಾರವನ್ನು ಮೊಟುಕುಗಳಿಸಲು ರಾಜ್ಯ ಸರ್ಕಾರಕ್ಕೂ ಅಧಿಕಾರ ಇಲ್ಲ. ಸಂವಿಧಾನಕ್ಕೆ ತಿದ್ದುಪಡಿ ತಂದರೆಮಾತ್ರ ಕ್ಷೇತ್ರವಾರು ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿಕೊಳ್ಳಬಹುದು’ ಎಂದು ಅವರು ಹೇಳಿದರು.

‘ಪಾಲಿಕೆ ಸದಸ್ಯರ ಅಧಿಕಾರದ ಮೇಲೆ ಶಾಸಕರು ಸವಾರಿ ನಡೆಸುವ ಪ್ರಯತ್ನ ಕಾನೂನು ಬಾಹಿರ. ಈ ಪ್ರಸ್ತಾವನೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಕಾಂಗ್ರೆಸ್ಸದಸ್ಯೆ ಜಿ. ಪದ್ಮಾವತಿ, ‘ಪದ್ಮನಾಭರೆಡ್ಡಿ ಮಾತಿಗೆ ನನ್ನ ಸಹಮತವಿದೆ. ಕಾನೂನಿನ ಚೌಕಟ್ಟಿನಲ್ಲಿ ವಾರ್ಡ್‌ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಪಾಲಿಕೆ ಸದಸ್ಯರಿಗೆ ಇರುವ ಅಧಿಕಾರವನ್ನು ಮೊಟುಕುಗೊಳಿಸಬಾರದು’ ಎಂದರು.

‘ಹಲವು ಬಾರಿ ನಮ್ಮ ಅಧಿಕಾರವನ್ನು ಹಲವು ಹಂತದಲ್ಲಿ ಕಸಿದುಕೊಳ್ಳಲಾಗಿದೆ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದರೆ, ವಾರ್ಡ್ ಸಮಿತಿಗಳ ಅಧಿಕಾರ ಮೊಟುಕು ಮಾಡಿದಂತೆ ಆಗಲಿದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಅವರು ಹೇಳಿದರು.

ಈ ಇಬ್ಬರ ಮಾತಿಗೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಬಳಿಕ ಮೇಯರ್ ಗಂಗಾಂಬಿಕೆ ಅವರು ‘ಈ ವಿಷಯವನ್ನು ಕೈಬಿಡಲಾಗಿದೆ’ ಎಂದು ಘೋಷಿಸಿದರು. ಎಲ್ಲಾ ಸದಸ್ಯರು ಮೇಜುಕುಟ್ಟಿ ಹರ್ಷ ವ್ಯಕ್ತಪಡಿಸಿದರು.

ಹಿನ್ನೆಲೆ:2018ರ ಸೆ.6ರಂದು ನಡೆದಿದ್ದ ವಿಧಾನಸಭಾ ಸದಸ್ಯರ ಖಾಸಗಿ ಮಸೂದೆಗಳ ಹಾಗೂ ನಿರ್ಣಯಗಳ ಸಮಿತಿಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು.

ಪಾಲಿಕೆಯ ಕೌನ್ಸಿಲ್ ಅನುಮೋದನೆ ಪಡೆಯಲು ಪ್ರಸ್ತಾವನೆಯನ್ನು ಸರ್ಕಾರ ಕಳುಹಿಸಿತ್ತು.

‘ಶಾಸಕ ಅಧ್ಯಕ್ಷತೆಯ ಸಮಿತಿಗಳು ರಚನೆಯಾದರೆಪಾಲಿಕೆ ಸದಸ್ಯರ ಅಧ್ಯಕ್ಷತೆಯ ವಾರ್ಡ್‌ ಸಮಿತಿಗಳ ಅಧಿಕಾರ ಕಸಿದುಕೊಳ್ಳುವ ಸಾಧ್ಯತೆ ಇದೆ’ ಎಂದು ಸಾಮಾಜಿಕ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೂ, ಈ ವಿಷಯವನ್ನು ಪಾಲಿಕೆ ಕಾರ್ಯಸೂಚಿಯಲ್ಲಿ ಸೇರಿಸಿರುವ ಬಗ್ಗೆ ‘ಪ್ರಜಾವಾಣಿ’ ಮಂಗಳವಾರ ವರದಿ ಪ್ರಕಟಿಸಿತ್ತು.

ಆಹ್ವಾನ ನೀಡದ ಅಧಿಕಾರಿಗಳ ಅಮಾನತಿಗೆ ಪಟ್ಟು

‘ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್‌ ಕಾಮಗಾರಿಗೆ ಮನೆ ಮುಂದೆಯೇ ಶಂಕುಸ್ಥಾಪನೆ ಕಾರ್ಯಕ್ರಮ ನಡೆದರೂ, ನನಗೆ ಆಹ್ವಾನವೇ ಇರಲಿಲ್ಲ’ ಎಂದು ಆರೋಪಿಸಿ ಶಾಂತಲನಗರ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಬಿ. ದ್ವಾರಕನಾಥ್‌(ದಾಲು) ಮೇಯರ್ ಪೀಠದ ಎದುರು ಪ್ರತಿಭಟನೆ ನಡೆಸಿದರು.

‘ನಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಬಿಬಿಎಂಪಿ ನಡೆಸುವ ಕಾಮಗಾರಿ ಬಗ್ಗೆ ಮಾಹಿತಿಯನ್ನೇ ಅಧಿಕಾರಿಗಳು ನೀಡುವುದಿಲ್ಲ. ಇದು ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಮಾಡುವ ಅವಮಾನ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರ ಬೆಂಬಲಕ್ಕೆ ನಿಂತ ಬಿಜೆಪಿ ಸದಸ್ಯರು ಮೇಯರ್ ಪೀಠದ ಎದುರು ಬಂದರು. ‘ಜನಪ್ರತಿನಿಧಿಗಳನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಿದ್ದಾರೆ’ ಎಂದು ಆಡಳಿತ ಪಕ್ಷದ ಸದಸ್ಯರು ಕೂಡ ಆಕ್ರೋಶ ವ್ಯಕ್ತಪಡಿಸಿದರು. ಈ ಆರೋಪಕ್ಕೆ ಉತ್ತರ ನೀಡುವಂತೆ ಪೂರ್ವ ವಲಯದ ಜಂಟಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್ ಅವರನ್ನು ಮೇಯರ್ ಕರೆದರು. ಆದರೆ, ಸಭೆಯಲ್ಲಿ ಈ ಅಧಿಕಾರಿಗಳು ಹಾಜರಿರಲಿಲ್ಲ. ‘ಕೌನ್ಸಿಲ್ ಸಭೆಗೆ ಹಾಜರಾಗದಿರುವುದು ಅಧಿಕಾರಿಗಳ ಉಡಾಫೆಯ ವರ್ತನೆ’ ಎಂದೂ ಸದಸ್ಯರು ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದರು. ‘ಸರ್ವಜ್ಞ ನಗರದಲ್ಲಿ ಕಟ್ಟಡ ಕುಸಿದಿರುವ ಕಾರಣ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಇದೆ’ ಎಂದು ಮೇಯರ್ ಹೇಳಿದರು.

‘ಅಧಿಕಾರಿಗಳಿಂದ ಉತ್ತರ ಬೇಡ, ಅವರ ವಿರುದ್ಧ ಕ್ರಮಕ್ಕೆ ರೂಲಿಂಗ್ ನೀಡಿ’ ಎಂದು ಸದಸ್ಯರು ಪಟ್ಟು ಹಿಡಿದರು. ಕಾಂಗ್ರೆಸ್‌ನ ಮಹಿಳಾ ಸದಸ್ಯರಲ್ಲಿ ಬಹುತೇಕರು ಎದ್ದು ನಿಂತು, ‘ನಮಗೂ ಇದೇ ರೀತಿಯ ಅವಮಾನಗಳನ್ನು ಅಧಿಕಾರಿಗಳು ಮಾಡಿದ್ದಾರೆ’ ಎಂದರು.

‘ಜನಪ್ರತಿನಿಧಿಗಳಿಗೆ ಅವಮಾನ ಮಾಡಿದ ಮತ್ತು ಸಭೆಯಲ್ಲಿ ಹಾಜರಿಲ್ಲದ ಅಧಿಕಾರಿಗಳಿಗೆ ನೋಟಿಸ್‌ಗೆ ಸೂಚನೆ ನೀಡಿದ್ದೇನೆ. ಅವರ ಸಮಜಾಯಿಷಿ ನೋಡಿ ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಟಿಪ್ಪು ಹೆಸರು ನಾಮಕರಣಕ್ಕೆ ವಿರೋಧ

ಚಾಮರಾಜಪೇಟೆ ಮೊದಲ ಮುಖ್ಯರಸ್ತೆಗೆ ಟಿಪ್ಪು ಸುಲ್ತಾನ್ ರಸ್ತೆ ಎಂದು ನಾಮಕರಣ ಮಾಡುವ ಪ್ರಸ್ತಾವನೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಸಭೆಯಲ್ಲಿ ವಿಷಯ ಮಂಡನೆಯಾದ ಕೂಡಲೇ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮತ್ತು ಸದಸ್ಯ ಉಮೇಶ್‌ಶೆಟ್ಟಿ, ‘ಆಲೂರು ವೆಂಕಟರಾವ್ ಅವರ ಹೆಸರನ್ನು ಈಗಾಗಲೇ ನಾಮಕರಣ ಮಾಡಲಾಗಿದ್ದು, ಅದನ್ನೇ ಮುಂದುವರಿಸಬೇಕು’ ಎಂದು ಮೇಯರ್ ಪೀಠದ ಎದುರು ಪ್ರತಿಭಟನೆಗೆ ಮುಂದಾದರು. ಬಳಿಕ ಈ ವಿಷಯವನ್ನು ಮೇಯರ್ ಅವರು ಮುಂದೂಡಿದರು. ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಜಾಫರ್ ಶರೀಫ್ ಹೆಸರು, ಬ್ರಿಗೇಡ್ ರಸ್ತೆಯಿಂದ ಹೊಸೂರು ರಸ್ತೆವರೆಗಿನ ರಸ್ತೆಗೆ ಜಾರ್ಜ್ ಫರ್ನಾಂಡಿಸ್ ಹೆಸರು ನಾಮಕರಣ ಸೇರಿ 52 ವಿಷಯಗಳಿಗೆ ಸಭೆ ಅನುಮೋದನೆ ನೀಡಿತು. ‘ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ಹಲವು ವಿಷಯಗಳಿಗೆ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಷ್ಟು ವಿಷಯಗಳನ್ನು ಒಟ್ಟಿಗೆ ಮಂಡಿಸಲಾಯಿತು’ ಎಂದು ಮೇಯರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT