ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಮಸೂದೆ: ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆ

ವಾರ್ಡ್‌ಗಳ ಸಂಖ್ಯೆ 225 ಕ್ಕೆ‌ ಹೆಚ್ಚಳ ಖಚಿತ *ಚುನಾವಣೆ ಮುಂದೂಡಿಕೆಗೆ ಸಂಬಂಧವಿಲ್ಲ
Last Updated 4 ಸೆಪ್ಟೆಂಬರ್ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ’ಬಿಬಿಎಂಪಿ ಆಡಳಿತಾತ್ಮಕ ಬದಲಾವಣೆಗಳ ಜತೆಗೆ ವಾರ್ಡ್‌ಗಳ ಸಂಖ್ಯೆಯನ್ನು 225 ಕ್ಕೆ ಹೆಚ್ಚಿಸುವುದು ಖಚಿತ.ಮುನಿಸಿಪಲ್‌ ಮಸೂದೆಯಲ್ಲಿ ಮಾರ್ಪಾಡು ಸಂಬಂಧ ಡಿಸೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ನೀಡಲಾಗುವುದು‘ ಎಂದು ವಿಧಾನಮಂಡಲ ಜಂಟಿ ಸಲಹಾ ಸಮಿತಿ ಅಧ್ಯಕ್ಷ ಎಸ್‌.ರಘು ಹೇಳಿದರು.

‘ಬೆಂಗಳೂರು ಮುನಿಸಿಪಲ್‌ ಮಸೂದೆ 2020’ ಕುರಿತು ಶುಕ್ರವಾರ ನಡೆದ ಸಮಿತಿಯ ಮೊದಲ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಬಿಬಿಎಂಪಿ ಚುನಾವಣೆ ನಡೆಸುವುದಕ್ಕೂ, ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವುದಕ್ಕೂ ಸಂಬಂಧವಿಲ್ಲ‘ ಎಂದರು.

’ಬಿಬಿಎಂಪಿಯ ಈಗಿರುವ 198 ವಾರ್ಡ್‌ಗಳನ್ನೇ ಪುನರ್ ವಿಂಗಡಣೆ ಮಾಡಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಹೊಸ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವುದಿಲ್ಲ. ಹಿಂದೆ ಬೆಂಗಳೂರಿನಲ್ಲಿ 87 ಡಿವಿಷನ್‌ಗಳಿದ್ದವು. ಬಳಿಕ 100 ವಾರ್ಡ್‌ಗಳಾಗಿ ರೂಪಿಸಲಾಯಿತು. ಆ ನಂತರ 198 ಕ್ಕೆ ಹೆಚ್ಚಿಸಲಾಯಿತು. ಈಗಿನ ಜನಸಂಖ್ಯೆ 1 ಕೋಟಿ ಮೀರಿದೆ. ದೇಶದ ಐದನೇ ದೊಡ್ಡ ನಗರ ಮತ್ತು ನಗರದ ವಿಸ್ತೀರ್ಣಕ್ಕೆ ಅನುಗುಣವಾಗಿ 225 ಕ್ಕೆ ಹೆಚ್ಚಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ವಲಯಗಳನ್ನು 8 ರಿಂದ 15 ಕ್ಕೆ ಹೆಚ್ಚಿಸುವ ಉದ್ದೇಶವಿದೆ‘ ಎಂದು ರಘು ಹೇಳಿದರು.

’ಬಿಬಿಎಂಪಿ ಮಸೂದೆಯ ಪರಿಶೀಲನೆಗೆ 90 ದಿನಗಳ ಕಾಲಾವಕಾಶವಿದೆ. ಪ್ರತಿ ಮಂಗಳವಾರ ಸಭೆ ನಡೆಸಿ, ವಿವಿಧ ವಿಷಯಗಳ ಬಗ್ಗೆ ಸಮಿತಿಯಲ್ಲಿರುವ 22 ಶಾಸಕರು ಚರ್ಚೆ ನಡೆಸುತ್ತೇವೆ. ಅಷ್ಟರೊಳಗೆ ಹೊಸ ವಾರ್ಡ್‌ಗಳ ರಚನೆಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡು ವರದಿ ನೀಡಲಾಗುವುದು‘ ಎಂದು ಅವರು ತಿಳಿಸಿದರು.

‘ಮಹಾನಗರ ಹೇಗಿರಬೇಕು ಎಂಬ ಸಮಗ್ರ ಚರ್ಚೆ ಆಗಬೇಕಿದೆ. ಅದರ ಚರ್ಚೆಗೆ ಕನಿಷ್ಠ ಮೂರು ತಿಂಗಳ ಸಮಯ ಬೇಕು. ಸಮಿತಿಯಲ್ಲಿರುವ ಶಾಸಕರು ಕಳೆದ 20 ರಿಂದ 30 ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿ ಅನುಭವ ಹೊಂದಿದ್ದಾರೆ. ಒಳ್ಳೆಯ ಕಾಯ್ದೆ ರೂಪಿಸಬೇಕು ಎಂಬ ಆಸೆ ಇದೆ’ ಎಂದರು.

‘ಸಭೆಯಲ್ಲಿ ಚುನಾವಣೆ ಮುಂದೂಡಿಕೆ ಬಗ್ಗೆ ಚರ್ಚೆ ನಡೆದಿಲ್ಲ. ಬಿಬಿಎಂಪಿಯೇ ಈಗಾಗಲೇ ಚುನಾವಣೆಗೆ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. ಮತದಾರರ ಪಟ್ಟಿ ಪ್ರಕಟಿಸಿದೆ. ಹೊಸದಾಗಿ ಸೇರ್ಪಡೆಗೆ ಅವಕಾಶವನ್ನೂ ನೀಡಿದೆ. ಇವೆಲ್ಲದಕ್ಕೂ ನವೆಂಬರ್‌ 30 ರವರೆಗೆ ಅಂದರೆ, ಮೂರು ತಿಂಗಳ ಸಮಯ ಇದೆ. ಅಷ್ಟರಲ್ಲಿ ನಮ್ಮ ವರದಿಯನ್ನೂ ಕೊಡ್ತೇವೆ. ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಬಹುದು’ ಎಂದು ರಘು ಹೇಳಿದರು.

3 ದಿನಗಳಿಗೊಮ್ಮೆ ಸಭೆ

ಶಾಸಕರಾದ ಎಲ್‌.ಎ. ರವಿಸುಬ್ರಹ್ಮಣ್ಯ, ಸತೀಶ್‌ ರೆಡ್ಡಿ, ವಿಧಾನಪರಿಷತ್‌ ಸದಸ್ಯರಾದ ಪಿ.ಆರ್‌.ರಮೇಶ್ ಮತ್ತು ತಿಪ್ಪೇಸ್ವಾಮಿ ಅವರನ್ನು ಒಳಗೊಂಡ ಉಪಸಮಿತಿ ರಚಿಸಲಾಗಿದೆ. ‘ಉಪಸಮಿತಿಯು ಪ್ರತಿ ಮೂರು ದಿನಗಳಿಗೊಮ್ಮೆ ಸಭೆ ಸೇರಲಿದೆ. ಇದರಿಂದ ವರದಿಯನ್ನು ಬೇಗನೆ ಸಲ್ಲಿಸಬಹುದು. ಹಿರಿಯ ಅಧಿಕಾರಿಗಳು ಮತ್ತು ತಜ್ಞರ ಜತೆಗೂ ಚರ್ಚೆ ನಡೆಸಲಾಗುವುದು’ ಎಂದು ರಘು ತಿಳಿಸಿದರು.

ಇವತ್ತಿನ ಸಭೆ ಮೂರು ಗಂಟೆಗಳ ಕಾಲ ನಡೆಯಿತು. ಮುಖ್ಯವಾಗಿ ಮೇಯರ್‌ ಅವಧಿಯ ಕುರಿತು ಚರ್ಚಿಸಲಾಯಿತು. 20 ತಿಂಗಳಿಗೆ ಒಬ್ಬ ಮೇಯರ್‌ನಂತೆ ಮೂವರು ಮೇಯರ್‌ ಅಥವಾ 30 ತಿಂಗಳಿಗೆ ಒಬ್ಬರಂತೆ ಇಬ್ಬರು ಮೇಯರ್‌ ಹೊಂದಬೇಕೇ ಎಂಬ ವಿಷಯದ ಚರ್ಚೆ ಆಯಿತು ಎಂದೂ ರಘು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT