ಭಾನುವಾರ, ಮೇ 29, 2022
23 °C
ಮಾಜಿ ಮೇಯರ್‌ಗಳೊಂದಿಗೆ ಬಜೆಟ್‌ ರೂಪರೇಷೆ ಕುರಿತು ಸಮಾಲೋಚನೆ

ಬಿಬಿಎಂಪಿ: ‘ಬಜೆಟ್‌ ವಾಸ್ತವಕ್ಕೆ ಹತ್ತಿರದಲ್ಲಿರಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈ ಬಾರಿಯಾದರೂ ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ, ವಾಸ್ತವಕ್ಕೆ ಹತ್ತಿರವಿರುವ ಬಜೆಟ್‌ ಮಂಡಿಸುವಂತೆ ಮಾಜಿ ಮೇಯರ್‌ಗಳು ಬಿಬಿಎಂಪಿಗೆ ಸಲಹೆ ನೀಡಿದರು.

ಬಿಬಿಎಂಪಿಯ 2021-22ನೇ ಸಾಲಿನ ಬಜೆಟ್‌ ರೂಪರೇಷೆ ಹೇಗಿರಬೇಕು ಎಂಬ ಬಗ್ಗೆ ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಮಾಜಿ ಮೇಯರ್‌ಗಳ ಜೊತೆ ಬುಧವಾರ ಸಮಾಲೋಚನೆ ನಡೆಸಿದರು.

‘ಪಾಲಿಕೆಯ ವರಮಾನಕ್ಕಿಂತ ಹೆಚ್ಚು ವೆಚ್ಚ ಮಾಡುವಂತಹ ಬಜೆಟ್‌ ಮಂಡಿಸುವ ಪರಿಪಾಠ ಈ ಬಾರಿಯಾದರೂ ಕೊನೆಯಾಗಲಿ. ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ, ಅವುಗಳಿಗೆ ಅನುದಾನದ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಅವುಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬಹುದು’ ಎಂದು ಜಿ.ಪದ್ಮಾವತಿ ಸಲಹೆ ನೀಡಿದರು.

‘ಮುಂದುವರೆದ ಕಾಮಗಾರಿಗಳಿಗೆ ಮತ್ತು ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಅನುದಾನ ನಿಗದಿ ಮಾಡಬೇಕು. ಪಾಲಿಕೆಗೆ ಹೊರೆಯಾಗದಂತೆ ಬಜೆಟ್ ರೂಪಿಸಬೇಕು. ಉಪನಗರಗಳ ಅಭಿವೃದ್ಧಿಗೆ ಮನ್ನಣೆ ನೀಡಿ’ ಎಂದು ಲಕ್ಕಣ್ಣ ಸಲಹೆ ನೀಡಿದರು.  

‘ಬಿ–ಖಾತಾ ಹೊಂದಿರುವ ಸ್ವತ್ತುಗಳಿಗೆ ಎ-ಖಾತೆ  ನೀಡುವ ಮೂಲಕ ಸಂಪನ್ಮೂಲ ಕ್ರೂಡೀಕರಿಸಬಹುದು’ ಎಂದು ಕೆ.ಚಂದ್ರಶೇಖರ್ ಹಾಗೂ ಮಂಜುನಾಥ ರೆಡ್ಡಿ ಸಲಹೆ ನೀಡಿದರು. 

ವಿಧಾನ ಪರಿಷತ್‌ ಸದಸ್ಯ ಪಿ.ಆರ್.ರಮೇಶ್, ‘ನಗರದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಒತ್ತು ನೀಡಬೇಕು. ಕಸ ವಿಲೇವಾರಿ ವ್ಯವಸ್ಥೆ ಸುಧಾರಣೆಗೆ ಪರಿಸರವಾದಿಗಳು ಮತ್ತು ಸ್ವಯಂಸೇವಕರ ಅಭಿಪ್ರಾಯಪಡೆದು ಕ್ರಮಕೈಗೊಳ್ಳಬೇಕು’ ಎಂದರು.

‘ಹೊಸ ವಲಯಗಳಲ್ಲಿ ಆಸ್ತಿ ಮಾಲೀಕರು ಸರಿಯಾಗಿ ತೆರಿಗೆ ಹಾಗೂ ಸುಧಾರಣಾ ಶುಲ್ಕ ಪಾವತಿಸುತ್ತಿಲ್ಲ. ಇದರ ವಸೂಲಿಗೆ ಕ್ರಮವಹಿಸಬೇಕು. ರಾಜಕಾಲುವೆಗಳನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಎಸ್.ಕೆ.ನಟರಾಜ್ ಅಭಿಪ್ರಾಯಪಟ್ಟರು. 

‘ಸಂಘ ಸಂಸ್ಥೆಗಳಿಗೆ ನೀಡುವ ಅನುದಾನಕ್ಕೆ ಕತ್ತರಿ ಹಾಕಬಾರದು. ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಬಿ.ಎಸ್.ಸತ್ಯನಾರಾಯಣ ಒತ್ತಾಯಿಸಿದರು.

‘ಪಾಲಿಕೆಯ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡಿಸಬೇಕಿದೆ. ಕಸ ನಿರ್ವಹಣೆ, ಬೀದಿ ದೀಪ ನಿರ್ವಹಣೆ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡಲು ಬಯಸಿದ್ದೇವೆ’ ಎಂದು ಆಡಳಿತಾಧಿಕಾರಿ ತಿಳಿಸಿದರು.

‘ತೆರಿಗೆ ಹೊರೆ ಬೇಡ’
‘ಕೋವಿಡ್‌ನಿಂದ ಜನರು ಆರ್ಥಿಕ ತೊಂದರೆಗೆ ಸಿಲುಕಿದ್ದಾರೆ. ತೆರಿಗೆ ಹೆಚ್ಚಿಸುವ ಮೂಲಕ ಅವರ ಹೊರೆಯನ್ನು ಹೆಚ್ಚಸಬೇಡಿ’ ಎಂದು ಎಂ.ರಾಮಚಂದ್ರಪ್ಪ ಕೋರಿದರು. 

‘ಪಾಲಿಕೆಯಲ್ಲಿ ಸಂಪನ್ಮೂಲ ಸೋರಿಕೆ ತಡೆಯುವ ಬಗ್ಗೆ ಗಮನಹರಿಸಬೇಕು. ಟೋಟಲ್ ಸ್ಟೇಷನ್ ಸರ್ವೇ ನಡೆಸುವ ಹಾಗೂ ತೆರಿಗೆ ಪಾವತಿಯಿಂದ ತಪ್ಪಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸಿ ದಂಡ ವಿಧಿಸುವ  ಮೂಲಕ ಇದನ್ನು ಸಾಧಿಸಬಹುದು. ಉದ್ಯಾನಗಳು, ಇ-ಶೌಚಾಲಯಗಳ ನಿರ್ವಹಣೆಗೆ ಅನುದಾನ ಹೆಚ್ಚಿಸಬೇಕು. ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಈ ಕಾರ್ಯಗಳಿಗೆ ಬಳಸಬಹುದು’ ಎಂದು ಗಂಗಾಂಬಿಕೆ ಮಲ್ಲಿಕಾರ್ಜುನ್ ಸಲಹೆ ನೀಡಿದರು. ‌

‘ಅನವಶ್ಯಕ ಕಾಮಗಾರಿಗಳ ಮೇಲೆ ಹಣ ಪೋಲು ಮಾಡುವುದನ್ನು ತಪ್ಪಿಸಲು ಹಾಗೂ ಅತಿ ಅವಶ್ಯಕ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ಕಾಮಗಾರಿಗಳ ಯೋಜನಾ ವರದಿ ಸಿದ್ದಪಡಿಸುವಾಗಲೇ ಕ್ರಮವಹಿಸಬೇಕು’ ಎಂದು ಮಂಜುನಾಥ ರೆಡ್ಡಿ ಹೇಳಿದರು. 

ಮಾಜಿ ಮೇಯರ್‌ಗಳ ಸಲಹೆಗಳು
‘ನಿರ್ವಹಣೆ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಅತೀ ಅವಶ್ಯಕತೆ ಇದ್ದಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು’
–ಹುಚ್ಚಪ್ಪ

*

‘ಆದಾಯವಿರುವಷ್ಟೇ ವೆಚ್ಚ ಮಾಡಲು ಯೋಜನೆ ರೂಪಿಸಬೇಕು. ಕಾಮಗಾರಿಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವುದಕ್ಕೆ ಕ್ರಮಕೈಗೊಳ್ಳಬೇಕು’
–ಪದ್ಮಾವತಿ ಗಂಗಾಧರ್‌ಗೌಡ

*

‘ಪಾಲಿಕೆಯ ಆಡಳಿತ ವರದಿ ಮತ್ತು ಲೆಕ್ಕಪರಿಶೋಧನಾ ವರದಿಗಳು ಜನರಿಗೆ ಸಿಗುವಂತಾಗಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಬೇಕು’
–ಮಮ್ತಾಜ್ ಬೇಗಂ

*

‘ಜನಪ್ರತಿನಿಧಿಗಳ ಆಡಳಿತ ಇದ್ದಾಗ ಬಡಜನರ ವೈದ್ಯಕೀಯ ವೆಚ್ಚದ ಬಿಲ್ ಮರುಪಾವತಿ ಮಾಡಲಾಗುತ್ತಿತ್ತು. ಆಡಳಿತಾಧಿಕಾರಿಯವರೂ ಈ ಕಾರ್ಯವನ್ನು ಮುಂದುವರೆಸಬೇಕು’
–ಬಿ.ಎಸ್‌.ಸತ್ಯನಾರಾಯಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು