ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್‌ಗೆ ತಡೆ: ಆದೇಶ ವಾಪಸ್‌ಗೆ ಆಗ್ರಹ

Last Updated 5 ಆಗಸ್ಟ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಸಕ್ತ ಸಾಲಿನ ಬಜೆಟ್‌ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಡೆ ನೀಡಿರುವುದಕ್ಕೆ ನಗರ ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತ‍ಪಡಿಸಿದ್ದಾರೆ.

ಮುಖ್ಯಮಂತ್ರಿಯನ್ನು ಭೇಟಿಯಾಗಿ ತಡೆ ಹಿಡಿದಿರುವ ಬಜೆಟ್‌ ಮುಂದುವರಿಸಲು ಅವಕಾಶ ನೀಡುವಂತೆ ಒತ್ತಾಯಿಸಲು ನಗರ ವ್ಯಾಪ್ತಿಯ ಪಕ್ಷದ ಶಾಸಕರ ಸಭೆಯಲ್ಲಿ ನಿರ್ಧರಿಸಲಾಯಿತುಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಬಿಎಂಪಿ ₹11,600 ಕೋಟಿ ಮೊತ್ತದ ಬಜೆಟ್ ರೂಪಿಸಿ, ಸರ್ಕಾರದ ಒಪ್ಪಿಗೆಯನ್ನೂ ಪಡೆದು ಜಾರಿಮಾಡಿದೆ. ಈಗಾಗಲೇ ಕೆಲವು ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ಮತ್ತೆ ಕೆಲವಕ್ಕೆ ಟೆಂಡರ್ ಕರೆಯಲಾಗಿದೆ. ನಗರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಂಡಿರುವ 110 ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.ಇಂತಹ ಸಮಯದಲ್ಲಿ ಬಜೆಟ್‌ಗೆ ತಡೆ ನೀಡಿದರೆ ನಗರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅವರು ಹೇಳಿದರು.

ನಗರ ವ್ಯಾಪ್ತಿಯ 28 ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡಲಾಗಿದ್ದು, ಬಿಜೆಪಿ ಶಾಸಕರು ಇರುವ ಹಾಗೂ ಕಾಂಗ್ರೆಸ್, ಜೆಡಿಎಸ್‌ನ ಅನರ್ಹ ಶಾಸಕರ ಕ್ಷೇತ್ರಗಳಿಗೂ ಸಾಕಷ್ಟು ಅನುದಾನ ಹಂಚಿಕೆ ಮಾಡಲಾಗಿದೆ. ಹಣ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಆದರೆ ನಗರಕ್ಕೆ ಸೇರ್ಪಡೆಯಾದ ಪ್ರದೇಶಗಳಿಗೆ ಮಾತ್ರ ಹೆಚ್ಚು ನೆರವು ದೊರೆತಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಆಶಯವಿದ್ದರೆ, ಈಗಲೂ ಮತ್ತಷ್ಟು ನೆರವು ಕೊಡಲಿ. ಪ್ರಗತಿಯಲ್ಲಿ ಇರುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದರೆ, ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ಶಾಸಕ ರಾಮಲಿಂಗಾರೆಡ್ಡಿ, ‘ನಗರದಲ್ಲಿ ಕಳಪೆ ಕಾಮಗಾರಿ ನಡೆದಿದ್ದರೆ ಕ್ರಮ ಕೈಗೊಂಡು, ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಿ. ಈಗ ಬಜೆಟ್‌ಗೆ ತಡೆ ನೀಡಿರುವುದರಿಂದ ಅಭಿವೃದ್ಧಿ ಕಾಮಗಾರಿ ಆರಂಭವಾಗಲು ಮತ್ತೂ 6 ತಿಂಗಳು ತಡವಾಗಲಿದೆ. ರಾಜಕೀಯ ವ್ಯವಸ್ಥೆ ಬದಲಾದ ತಕ್ಷಣ ಕೆಲಸ ನಿಲ್ಲಬಾರದು. ಮುಂದಿನ ಬಾರಿಯ ಬಜೆಟ್‌ನಲ್ಲಿ ಪಾಲಿಕೆಗೆ ಹೆಚ್ಚಿನ ಅನುದಾನ ಕೊಡಲಿ. ಮಧ್ಯಂತರವಾಗಿಯೂ ನೀಡಬಹುದು’ ಎಂದು ಹೇಳಿದರು.

ಶಾಸಕ ಕೃಷ್ಣ ಬೈರೇಗೌಡ, ‘ನಗರದ ಬೆಳವಣಿಗೆ ಗಮನಿಸಿದರೆ ಎಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಸಾಲದಾಗಿದೆ. ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಬಾರದು. ಕಾಮಗಾರಿಗಳು ಮತ್ತಷ್ಟು ತಡವಾದರೆ ಪ್ರಗತಿಗೆ ಪೆಟ್ಟು ಬೀಳಲಿದೆ. ಸಾಕಷ್ಟು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಬಜೆಟ್‌ ತಡೆ ಆದೇಶವನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಇಂದಿರಾ ಕ್ಯಾಂಟೀನ್’ ಹೆಸರು ಬದಲಿಸದಿರಿ

ಬಡವರ ಸಲುವಾಗಿ ತೆರೆದಿರುವ ‘ಇಂದಿರಾ ಕ್ಯಾಂಟೀನ್’ ಹೆಸರು ಬದಲಿಸಬಾರದು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹೆಸರನ್ನು ಕ್ಯಾಂಟೀನ್‌ಗೆ ಇಡಲಾಗಿದೆ. ಒಂದು ಒಳ್ಳೆಯ ಸದುದ್ದೇಶದಿಂದ ಕೂಡಿದ್ದು, ಹೆಸರು ಬದಲಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಬಾರದು ಎಂದು ಹೇಳಿದರು.

***

ಬಿ.ಎಸ್.ಯಡಿಯೂರಪ್ಪ ಸೇಡಿನ ರಾಜಕಾರಣ ಮಾಡಿ, ವಚನಭ್ರಷ್ಟ ಮುಖ್ಯಮಂತ್ರಿ ಎನಿಸಿಕೊಳ್ಳದಂತೆ ನಡೆದುಕೊಳ್ಳಬೇಕು
–ಕೃಷ್ಣ ಬೈರೇಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT