ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಲಂಘನೆ ಸಕ್ರಮ: ಮಿತಿ ಶೇ 5ರಿಂದ 15ಕ್ಕೆ ಹೆಚ್ಚಳ?

ಬಿಬಿಎಂಪಿ ಕಟ್ಟಡ ಉಪವಿಧಿ ತಿದ್ದುಪಡಿಗೆ ನಗರಾಭಿವೃದ್ಧಿ ಇಲಾಖೆ ಸಮ್ಮತಿ? l ಅಕ್ರಮ ಹೆಚ್ಚಳ– ತಜ್ಞರ ಕಳವಳ
Last Updated 3 ಜನವರಿ 2022, 19:58 IST
ಅಕ್ಷರ ಗಾತ್ರ

–ಮಂಜುನಾಥ ಹೆಬ್ಬಾರ್‌/ಪ್ರವೀಣ್‌ ಕುಮಾರ್‌ ಪಿ.ವಿ.

ಬೆಂಗಳೂರು: ಮಂಜೂರಾತಿ ಪಡೆದ ಕಟ್ಟಡ ಯೋಜನೆಯಲ್ಲಿ ಶೇ 15ರಷ್ಟು ಉಲ್ಲಂಘನೆ ಮಾಡಿ ನಿರ್ಮಿಸಿರುವ ಕಟ್ಟಡಗಳಿಗೂ ಮುಕ್ತಾಯ ಪ್ರಮಾಣಪತ್ರ ನೀಡಲು ತಯಾರಿ ನಡೆದಿದೆ.

ಈ ಕುರಿತು ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ನೇತೃತ್ವದಲ್ಲಿ 2021ರ ಡಿ. 29ರಂದು ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಬಿಬಿಎಂಪಿಯ ಮೂಲಗಳು ತಿಳಿಸಿವೆ.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಶೇ 5ರಷ್ಟು ಮಿತಿಯವರೆಗೆ ಉಲ್ಲಂಘನೆಗಳಿಗೆ ದಂಡ ವಿಧಿಸಿ, ಮುಕ್ತಾಯ ಪ್ರಮಾಣಪತ್ರ (ಸಿ.ಸಿ) ನೀಡಲು ಬಿಬಿಎಂಪಿ ಕಟ್ಟಡ ಉಪವಿಧಿಗಳಲ್ಲಿ ಅವಕಾಶವಿದೆ. 2020 ಬಿಬಿಎಂಪಿ ಕಾಯ್ದೆಗೆ ಅನುಗುಣವಾಗಿ ಬಿಬಿಎಂಪಿ ಕಟ್ಟಡ ಉಪವಿಧಿಯನ್ನು ಪರಿಷ್ಕರಣೆ ಮಾಡುವ ಪ್ರಸ್ತಾವವನ್ನು ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಗೆ ವರ್ಷದ ಹಿಂದೆಯೇ ಸಲ್ಲಿಸಿತ್ತು. ಮಂಜೂರಾತಿ ಪಡೆದ ಕಟ್ಟಡ ಯೋಜನೆಯಿಂದ ಶೇ 15ರಷ್ಟು ಉಲ್ಲಂಘನೆಯಾಗಿದ್ದರೂ, ಅಂತಹ ಕಟ್ಟಡಗಳಿಗೆ ದಂಡ ವಿಧಿಸಿ, ಮುಕ್ತಾಯ ಪ್ರಮಾಣಪತ್ರ ನೀಡಲು ಅವಕಾಶ ಕಲ್ಪಿಸಬೇಕು ಎಂದು ಬಿಬಿಎಂಪಿ ಕೋರಿತ್ತು.

ನಗರಾಭಿವೃದ್ಧಿ ಇಲಾಖೆಯ ಎಸಿಎಸ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿಯ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ರಘು, ಜಂಟಿ ನಿರ್ದೇಶಕರಾದ ಬಿ.ಮಂಜೇಶ್‌, ರಾಘವೇಂದ್ರ ಪ್ರಸಾದ್, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಜಂಟಿ ನಿರ್ದೇಶಕಿ ಶಾಂತಲಾ, ನಗರಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಗೀತಾ ಭಾಗವಹಿಸಿದ್ದರು.

ಲಂಗುಲಗಾಮಿಲ್ಲದೇ ಕಟ್ಟಡ ನಿರ್ಮಿಸುವುದನ್ನು ನಿಯಂತ್ರಿಸಲು ಹಾಗೂ ನಗರದ ಬೆಳವಣಿಗೆ ವ್ಯವಸ್ಥಿತವಾಗಿ ಇರಲಿ ಎಂಬ ಕಾರಣಕ್ಕೆ ಬಿಬಿಎಂಪಿಯು ಕಟ್ಟಡ ಉಪವಿಧಿಗಳನ್ನು (ಬೈಲಾ) ರೂಪಿಸಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಹೊಣೆ ಹೊತ್ತ ಬಿಬಿಎಂಪಿ ಇದರಲ್ಲಿ ವೈಫಲ್ಯ ಕಂಡಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಈಗ ಈ ಕಟ್ಟಡ ಉಪವಿಧಿಯ ನಿಯಮವನ್ನೇ ಸಡಿಲಗೊಳಿಸುವುದು ಸರಿಯಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ಕಾನೂನು ಪಾಲಕರಿಗೆ ಮಾಡುವ ಅವಮಾನ: ‘ಶೇ 5ರಷ್ಟು ಉಲ್ಲಂಘನೆಯನ್ನು ಸಕ್ರಮಗೊಳಿಸುವುದೇ ತಪ್ಪು. ಈಗ ಶೇ 15ರಷ್ಟು ಉಲ್ಲಂಘನೆ ಮಾಡಿರುವವರಿಗೂ ಮುಕ್ತಾಯದ ಪ್ರಮಾಣಪತ್ರ ನೀಡಲು ಹೊರಟಿರುವುದು ಕಾನೂನು ಪಾಲನೆ ಮಾಡುವವರಿಗೆ ಮಾಡುವ ಅವಮಾನ’ ಎಂದು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಅಭಿಪ್ರಾಯಪಟ್ಟರು.

‘ಉಲ್ಲಂಘನೆ ಅನೇಕ ರೀತಿಯಲ್ಲಿ ನಡೆಯುತ್ತದೆ. ಮಾಲೀಕರು ನಿಗದಿತ ಸೆಟ್‌ ಬ್ಯಾಕ್‌ ಬಿಡದೇ ಕಟ್ಟಡ ನಿರ್ಮಿಸಿರಬಹುದು, ಕಟ್ಟಡದ ಎತ್ತರದ ಮಿತಿಯನ್ನು ಅಥವಾ ನೆಲ ಮತ್ತು ವಿಸ್ತೀರ್ಣದ ಅನು‍ಪಾತಕ್ಕೆ (ಎಫ್‌ಎಆರ್‌) ಸಂಬಂಧಿಸಿದ ಷರತ್ತುಗಳನ್ನು ಉಲ್ಲಂಘಿಸಿರಬಹುದು ಅಥವಾ ಈ ಮೂರೂ ರೀತಿಯ ಉಲ್ಲಂಘನೆಗಳು ಆಗಿರಬಹುದು. ಅದರಲ್ಲಿ ಎಷ್ಟು ಉಲ್ಲಂಘನೆ ಆಗಿದೆ, ಅದು ಶೇ 15ರ ಮಿತಿಯ ಒಳಗೆ ಬರುತ್ತದೆಯೇ ಎಂಬುದನ್ನು ಲೆಕ್ಕ ಹಾಕಲು ಬಿಬಿಎಂಪಿ ಬಳಿ ಯಾವುದಾದರೂ ಮಾನದಂಡಗಳು ಇವೆಯೇ’ ಎಂದೂ ಅವರು ಪ್ರಶ್ನಿಸಿದರು.

ಕಳ್ಳಹಾದಿ ಮೂಲಕ ಜಾರಿ: ‘ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರವು ಅಕ್ರಮ ಕಟ್ಟಡಗಳಿಗೆ ಒಂದು ಬಾರಿ ದಂಡ ವಿಧಿಸಿ ಸಕ್ರಮಗೊಳಿಸಲು ಮಸೂದೆ ರೂಪಿಸಿತ್ತು. ನಾವು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೆವು. ಅದಕ್ಕೆ ಸರ್ಕಾರ ಪ್ರಮಾಣಪತ್ರವನ್ನೂ ಸಲ್ಲಿಸಿಲ್ಲ. ಅಕ್ರಮ ಸಕ್ರಮ ಮಸೂದೆಗೆ ವಿರುದ್ಧವಾಗಿ ತೀರ್ಪು ಬರುವ ಸಾಧ್ಯತೆ ಹೆಚ್ಚು ಇದೆ. ಹಾಗಾಗಿ ಆ ಮಸೂದೆಯ ಆಶಯಗಳನ್ನೇ ಕಳ್ಳದಾರಿ ಮೂಲಕ ಜಾರಿಗೊಳಿಸಲು ಬಿಬಿಎಂಪಿ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಸಿದ್ಧತೆ ನಡೆದಿದೆ’ ಎಂದು ಬೆಂಗಳೂರು ಪ್ರಜಾ ವೇದಿಕೆಯ ಸಂಸ್ಥಾಪಕ ಸದಸ್ಯ ಎನ್.ಎಸ್‌.ಮುಕುಂದ್‌ ಹೇಳಿದರು.

ಕರ್ತವ್ಯ ನಿಭಾಯಿಸದ ಅಧಿಕಾರಿಗಳಿಗೆಷ್ಟು ದಂಡ?

‘ಮಂಜೂರಾತಿ ಪಡೆದ ಕಟ್ಟಡ ಯೋಜನೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದವರಿಗೆ ಒಂದು ಬಾರಿ ದಂಡ ವಿಧಿಸಿ ಅದನ್ನು ಸಕ್ರಮಗೊಳಿಸಲಾಗುತ್ತಿದೆ. ನಗರದ ಶೇ 80ರಷ್ಟು ಕಟ್ಟಡಗಳು ನಿಯಮ ಉಲ್ಲಂಘಿಸಿಯೇ ನಿರ್ಮಾಣವಾಗಿವೆ. ಉಲ್ಲಂಘನೆ ತಪ್ಪಿಸುವಲ್ಲಿ ವಿಫಲವಾದ ಅಧಿಕಾರಿಗಳೂ ಅಷ್ಟೇ ತಪ್ಪಿತಸ್ಥರು. ತಮ್ಮ ಉತ್ತರದಾಯಿತ್ವ ನಿಭಾಯಿಸದ ಅವರಿಗೆ ಎಷ್ಟು ದಂಡ ವಿಧಿಸಲಾಗುತ್ತದೆ’ ಎಂದು ಎನ್.ಎಸ್‌.ಮುಕುಂದ್‌ ಪ್ರಶ್ನಿಸಿದರು.

‘ಶೇ 15ರಷ್ಟು ಉಲ್ಲಂಘನೆಯನ್ನು ಸಕ್ರಮಗೊಳಿಸಿದರೆ ಕಟ್ಟಡ ಯೊಜನೆಗೆ ಮಂಜೂರಾತಿ ನೀಡುವ ವ್ಯವಸ್ಥೆಯನ್ನೇ ಅವಹೇಳನ ಮಾಡಿದಂತೆ. ಇದರಿಂದ ಬಿಬಿಎಂಪಿಗೆ ದಂಡದ ರೂಪದಲ್ಲಿ ಹಣ ಹರಿದುಬರಬಹುದು. ಆದರೆ, ಇದರಿಂದ ‌ಉಂಟಾಗುವ ಶಾಶ್ವತ ಅನನುಕೂಲಗಳಿಂದಾಗುವ ನಷ್ಟದ ಮುಂದೆ ಇದು ಏನೂ ಅಲ್ಲ’ ಎಂದರು.

‘ಪ್ರತಿವರ್ಷವೂ ದಂಡ ಸಂಗ್ರಹಿಸಿ’

‘ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿದವರು ಪ್ರತಿವರ್ಷವೂ ದಂಡ ಕಟ್ಟುವಂತಹ ವ್ಯವಸ್ಥೆ ಜಾರಿ ಆಗಬೇಕು. ಆಗ ನಿಯಮ ಉಲ್ಲಂಘನೆ ಮಾಡುವವರ ಪ್ರಮಾಣವೂ ಕಡಿಮೆಯಾಗುತ್ತದೆ. ಬಿಬಿಎಂಪಿ ಈಗ ಎಷ್ಟು ವರಮಾನ ನಿರೀಕ್ಷೆ ಮಾಡಿದೆಯೋ ಅದಕ್ಕಿಂತ ಹೆಚ್ಚು ವರಮಾನವೂ ಬರುತ್ತದೆ’ ಎಂದು ಎನ್‌.ಎಸ್‌.ಮುಕುಂದ್ ಸಲಹೆ ನೀಡಿದರು.

‘ಉಲ್ಲಂಘನೆಯನ್ನು ಉತ್ತೇಜಿಸಿದಂತೆ’

‘ಮಂಜೂರಾತಿ ಪಡೆದ ಕಟ್ಟಡ ಯೋಜನೆಯನ್ನು ಶೇ 15ರವರೆಗೂ ಉಲ್ಲಂಘನೆ ಮಾಡಿದರೂ, ಅದನ್ನು ಸರಿ‍ಪಡಿಸಲು ನಿಯಮಗಳಲ್ಲೇ ಅವಕಾಶ ಕಲ್ಪಿಸಿದರೆ, ಅದು ಉಲ್ಲಂಘನೆಗೆ ಉತ್ತೇಜನ ನೀಡಿದಂತೆ’ ಎಂದು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಅಭಿಪ್ರಾಯಪಟ್ಟರು.

***

ಜಗತ್ತಿನಲ್ಲೇ 26ನೇ ಅತಿ ದೊಡ್ಡ ನಗರ ಬೆಂಗಳೂರು. ಉಲ್ಲಂಘನೆಯನ್ನು ಸಕ್ರಮಗೊಳಿಸುತ್ತಾ ಹೋದರೆ ಈ ನಗರವನ್ನು ವ್ಯವಸ್ಥಿತವಾಗಿ ಕಟ್ಟಲು ಸಾಧ್ಯವೇ?

– ಎನ್‌.ಎಸ್‌.ಮುಕುಂದ್‌, ಬೆಂಗಳೂರು ಪ್ರಜಾ ವೇದಿಕೆ ಸಂಸ್ಥಾಪಕ ಸದಸ್ಯ

ಉಲ್ಲಂಘನೆಯನ್ನು ಒಮ್ಮೆ ಸಕ್ರಮಗೊಳಿಸಿದರೆ, ಈ ತಪ್ಪನ್ನು ಮತ್ತೆಂದೂ ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕೆ ಭವಿಷ್ಯದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.

– ವಿ.ರವಿಚಂದರ್‌, ನಗರ ಯೋಜನಾ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT